ADVERTISEMENT

IPL 2021 | KKR vs CSK: ಡುಪ್ಲೆಸಿ –ಋತುರಾಜ್ ಶತಕದ ಜೊತೆಯಾಟ

ಕೋಲ್ಕತ್ತ ತಂಡಕ್ಕೆ ಬೃಹತ್ ಗುರಿ ಒಡ್ಡಿದ ಚೆನ್ನೈ ಸೂಪರ್ ಕಿಂಗ್ಸ್

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 16:30 IST
Last Updated 21 ಏಪ್ರಿಲ್ 2021, 16:30 IST
   

ಮುಂಬೈ (ಪಿಟಿಐ): ಯುವ ಬ್ಯಾಟ್ಸ್‌ಮನ್ ಋತುರಾಜ್ ಗಾಯಕವಾಡ್ ಮತ್ತು ಅನುಭವಿ ಫಫ್ ಡುಪ್ಲೆಸಿ ಅವರ ಚೆಂದದ ಜೊತೆಯಾಟದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಬುಧವಾರ ಬೃಹತ್ ಮೊತ್ತ ಪೇರಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ಆರಂಭಿಕ ಜೋಡಿ ಋತುರಾಜ್ (64; 42ಎ) ಮತ್ತು ಡುಪ್ಲೆಸಿ (ಔಟಾಗದೆ 95; 60ಎ) ಪೇರಿಸಿದ 115 ರನ್‌ಗಳ ಬಲದಿಂದ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 220 ರನ್ ಗಳಿಸಿತು.

ಟಾಸ್ ಗೆದ್ದ ಕೋಲ್ಕತ್ತ ತಂಡದ ನಾಯಕ ಏಯಾನ್ ಮಾರ್ಗನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಕೆಕೆಆರ್‌ ಬೌಲಿಂಗ್‌ ದಾಳಿಯನ್ನು ಚೆನ್ನೈ ಜೋಡಿಯು ಲೀಲಾಜಾಲವಾಗಿ ಎದುರಿಸಿತು. ಡುಪ್ಲೆಸಿ ಮತ್ತು ಋತುರಾಜ್ ಜೋಡಿಯು ಒಟ್ಟು 74 ಎಸೆತಗಳನ್ನು ಆಡಿತು. ಪವರ್‌ಪ್ಲೇನಲ್ಲಿಯೇ 54 ರನ್‌ಗಳು ಹರಿದುಬಂದವು.

ADVERTISEMENT

ಋತುರಾಜ್ ಕೇವಲ 33 ಎಸೆತಗಳಲ್ಲಿ 50ರ ಗಡಿ ಮುಟ್ಟಿದರು. ಡುಪ್ಲೆಸಿ ಅರ್ಧಶತಕ ಪೂರೈಸಲು 35 ಎಸೆತಗಳನ್ನು ಆಡಿದರು. 12ನೇ ಓವರ್‌ನಲ್ಲಿಯೇ ತಂಡದ ಮೊತ್ತವು ನೂರರ ಗಡಿ ದಾಟಿತು. ನಂತರದ ಓವರ್‌ನಲ್ಲಿ ವರುಣ್ ಚಕ್ರವರ್ತಿ ಎಸೆತವನ್ನು ಋತುರಾಜ್ ಅವರು ಬೌಂಡರಿಗೆರೆ ದಾಟಿಸಲು ಪ್ರಯತ್ನಿಸಿದರು. ಆದರೆ ಪ್ಯಾಟ್ ಕಮಿನ್ಸ್‌ಗೆ ಕ್ಯಾಚ್ ಆದರು.

ಇನ್ನೊಂದು ಬದಿಯಲ್ಲಿದ್ದ ಡುಪ್ಲೆಸಿ ಮಾತ್ರ ತಮ್ಮ ಬಿರುಸಿನ ಆಟವನ್ನು ಮುಂದುವರಿಸಿದರು. ಅವರಿಗೆ ತಕ್ಕ ಜೊತೆ ನೀಡಿದ ಮೋಯಿನ್ ಅಲಿ (25; 12ಎ) ಕೂಡ ರನ್‌ಗಳಿಕೆಗೆ ವೇಗ ನೀಡಿದರು. ಸುನಿಲ್ ನಾರಾಯಣ್ ಎಸೆತದಲ್ಲಿ ಅಲಿ ಔಟಾದರು. ಕ್ರೀಸ್‌ಗೆ ಬಂದ ನಾಯಕ ಮಹೇಂದ್ರಸಿಂಗ್ ಧೋನಿ (17; 8ಎ) ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರು. ಇತ್ತ ಡುಪ್ಲೆಸಿ ಕೂಡ ಅಬ್ಬರಿಸಿದರು. 19ನೇ ಓವರ್‌ನಲ್ಲಿ ಧೋನಿ ಔಟಾದರು.ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿದ ಡುಪ್ಲೆಸಿ ಶತಕದತ್ತ ದಾಪುಗಾಲಿಟ್ಟರು. ಆದರೆ ಐದನೇ ಎಸೆತದಲ್ಲಿ ಅವರು ಒಂದು ರನ್ ಮಾತ್ರ ಪಡೆಯುವಂತಾಯಿತು. ತಾವು ಎದುರಿಸಿದ ಏಕೈಕ ಎಸೆತವನ್ನು ರವೀಂದ್ರ ಜಡೇಜ ಸಿಕ್ಸರ್‌ಗೆ ಎತ್ತಿದರು. ಫೀಲ್ಡರ್‌ ನಿತೀಶ್ ರಾಣಾ ಕ್ಯಾಚ್ ಪಡೆಯುವ ಪ್ರಯತ್ನ ಸಫಲವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.