ADVERTISEMENT

IPL 2021: ಜೈಸ್ವಾಲ್ ವಿಕೆಟ್ ಪಡೆದ ಚಾಹರ್ ಸಂಭ್ರಮ ಮಿತಿ ಮೀರಿತೇ?

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 14:43 IST
Last Updated 29 ಏಪ್ರಿಲ್ 2021, 14:43 IST
   

ನವದೆಹಲಿ: ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ವಿಕೆಟ್ ಪಡೆದ ಬಳಿಕ ಮುಂಬೈ ಇಂಡಿಯನ್ಸ್ ಸ್ಪಿನ್ನರ್ ರಾಹುಲ್ ಚಾಹರ್ ಮಿತಿ ಮೀರಿದ ರೀತಿಯಲ್ಲಿ ಸಂಭ್ರಮ ಆಚರಿಸಿರುವುದು ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ವಿಕೆಟ್ ಪಡೆದಾಗ ಬೌಲರ್‌ಗಳ ಸಂಭ್ರಮಾಚರಣೆ ಸಾಮಾನ್ಯ ಅಂಶವಾಗಿದೆ. ಆದರೆ ಚಾಹರ್ ಅತಿರೇಕವಾಗಿ ವರ್ತಿಸುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್ ವೇಳೆ ಘಟನೆ ನಡೆದಿತ್ತು. ಜೋಸ್ ಬಟ್ಲರ್ ಜೊತೆಗೆ ಯಶಸ್ವಿ ಜೈಸ್ವಾಲ್ ಮೊದಲು ವಿಕೆಟ್‌ಗೆ 66 ರನ್‌ಗಳ ಜೊತೆಯಾಟ ನೀಡಿದ್ದರು.

ADVERTISEMENT

ಅಲ್ಲಿಂದ ಬಳಿಕ ಅತ್ಯುತ್ತಮ ಬ್ಯಾಟಿಂಗ್ ಮುಂದುವರಿಸಿದ ಜೈಸ್ವಾಲ್, ಲೆಗ್ ಸ್ಪಿನ್ನರ್ ಚಾಹರ್ ದಾಳಿಯಲ್ಲಿ ಸಿಕ್ಸರ್ ಸಿಡಿಸಿದ್ದರು. ಆದರೆ ಬಳಿಕ ತಮ್ಮದೇ ದಾಳಿಯಲ್ಲಿ ಕ್ಯಾಚ್ ಹಿಡಿಯುವ ಮೂಲಕ ಜೈಸ್ವಾಲ್ ಹೊರದಬ್ಬಿದ ಚಾಹರ್ ವಿಚಿತ್ರ ರೀತಿಯಲ್ಲಿ ವರ್ತಿಸಿದರು.

ಇನ್ನೇನು ಚೆಂಡನ್ನು ಜೈಸ್ವಾಲ್ ಅವರತ್ತ ಎಸೆಯುವ ಹುನ್ನಾರದಲ್ಲಿದ್ದರು. ಅಲ್ಲದೆ ನಿಂದನಾತ್ಮಕ ಶಬ್ದ ಪ್ರಯೋಗವನ್ನು ಮಾಡಿದರು. ಇವೆಲ್ಲವೂ ವಿಡಿಯೊ ದೃಶ್ಯಗಳಲ್ಲಿ ಸೆರೆಯಾಗಿದೆ.

ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದ ಜೈಸ್ವಾಲ್, 20 ಎಸೆತಗಳಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ 32 ರನ್ ಗಳಿಸಿದರು.

ಅತ್ತ ರಾಹುಲ್ ಚಾಹರ್ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 33 ರನ್ ಬಿಟ್ಟುಕೊಟ್ಟರೂ ಸಹ ಎರಡು ವಿಕೆಟ್ ಪಡೆದು ರಾಜಸ್ಥಾನ್ ಓಟಕ್ಕೆ ಕಡಿವಾಣ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.