ADVERTISEMENT

IPL 2021: ಬಟ್ಲರ್ ಹೋರಾಟ ವ್ಯರ್ಥ; ಚೆನ್ನೈಗೆ 45 ರನ್ ಅಂತರದ ಭರ್ಜರಿ ಗೆಲುವು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 18:05 IST
Last Updated 19 ಏಪ್ರಿಲ್ 2021, 18:05 IST
   

ಮುಂಬೈ: ಬ್ಯಾಟಿಂಗ್ (26 ರನ್) ಹಾಗೂ ಬೌಲಿಂಗ್‌ನಲ್ಲಿ (7 ರನ್ನಿಗೆ 3 ವಿಕೆಟ್) ಮಿಂಚಿದ ಮೊಯಿನ್ ಅಲಿ ಆಲ್‌ರೌಂಡರ್ ಪ್ರದರ್ಶನದ ನೆರವಿನೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 45 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಆಡಿರುವ ಮೂರು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿದೆ. ಅತ್ತ ರಾಜಸ್ಥಾನ್ ರಾಯಲ್ಸ್ ಎರಡನೇ ಸೋಲನುಭವಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಚೆನ್ನೈ ತಂಡವು ಫಾಫ್ ಡುಪ್ಲೆಸಿ (33), ಮೊಯಿನ್ ಅಲಿ (26), ಅಂಬಟಿ ರಾಯುಡು (27), ಸುರೇಶ್ ರೈನಾ (18), ನಾಯಕ ಮಹೇಂದ್ರ ಸಿಂಗ್ ಧೋನಿ(18), ಸ್ಯಾಮ್ ಕರನ್ (13) ಹಾಗೂ ಡ್ವೇನ್ ಬ್ರಾವೋ (20*) ಉಪಯುಕ್ತ ಇನ್ನಿಂಗ್ಸ್ ನೆರವಿನಿಂದ ಒಂಬತ್ತು ವಿಕೆಟ್ ನಷ್ಟಕ್ಕೆ 188 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.

ADVERTISEMENT

ಬಳಿಕ ಗುರಿ ಬೆನ್ನತ್ತಿದ ರಾಜಸ್ಥಾನ್ ತಂಡವು ಜೋಸ್ ಬಟ್ಲರ್ (49) ಹೋರಾಟದ ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಚೆನ್ನೈ ಪರ ಮೊಯಿನ್ ಮೂರು ಮತ್ತು ಸ್ಯಾಮ್ ಕರನ್ ಹಾಗೂ ರವೀಂದ್ರ ಜಡೇಜಾ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ನಾಲ್ಕು ಕ್ಯಾಚ್‌ಗಳನ್ನು ಪಡೆದ ಜಡ್ಡು ಮಿಂಚಿನ ಫೀಲ್ಡಿಂಗ್ ಪ್ರದರ್ಶಿಸಿದರು.

ಸಂಜು ಫೇಲ್, ಬಟ್ಲರ್ ಹೋರಾಟ ವ್ಯರ್ಥ...
ಬೃಹತ್ ಮೊತ್ತ ಬೆನ್ನತ್ತಿದ ರಾಜಸ್ಥಾನ್‌ಗೆ ಆರಂಭದಲ್ಲೇ ಸ್ಯಾಮ್ ಕರನ್ ಡಬಲ್ ಆಘಾತ ನೀಡಿದರು. ಮನನ್ ವೋಹ್ರಾ (14) ಜೊತೆಗ ನಾಯಕ ಸಂಜು ಸ್ಯಾಮ್ಸನ್ (1)ಅವರನ್ನು ಬೇಗನೇ ಹೊರದಬ್ಬಿದರು. ಈ ಹಂತದಲ್ಲಿ ಜೊತೆಗೂಡಿದ ಜೋಸ್ ಬಟ್ಲರ್ ಹಾಗೂ ಶಿವಂ ದುಬೆ ಅಲ್ಪ ನಿರೀಕ್ಷೆ ಮೂಡಿಸಿದರು.

ಆದರೆ ಅರ್ಧಶತಕದ ಅಂಚಿನಲ್ಲಿ ರವೀಂದ್ರ ಜಡೇಜ ದಾಳಿಯಲ್ಲಿ ಬಟ್ಲರ್ ಕ್ಲೀನ್ ಬೌಲ್ಡ್ ಆದರು. 35 ಎಸೆತಗಳನ್ನು ಎದುರಿಸಿದ ಬಟ್ಲರ್ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು. ಅದೇ ಓವರ್‌ನಲ್ಲಿ ಶಿವಂ ದುಬೆ (17) ಅವರನ್ನು ಹೊರದಬ್ಬಿದ ಜಡೇಜ ಆಘಾತ ನೀಡಿದರು.

ಇಲ್ಲಿಂದ ಬಳಿಕ ಮೊಯಿನ್ ಅಲಿ ಸ್ಪಿನ್ ಮೋಡಿಗೆ ತತ್ತರಿಸಿದ ರಾಜಸ್ಥಾನ್ ಚೇತರಿಸಿಕೊಳ್ಳಲೇ ಇಲ್ಲ. ಡೇವಿಡ್ ಮಿಲ್ಲರ್ (2), ರಿಯಾನ್ ಪರಾಗ್ (3) ಹಾಗೂ ಕ್ರಿಸ್ ಮೊರಿಸ್ (0) ಮೊಯಿನ್ ದಾಳಿಯಲ್ಲಿ ವಿಕೆಟ್ ಒಪ್ಪಿಸಿದರು.

ಅಂತಿಮವಾಗಿ ಒಂಬತ್ತು ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇನ್ನುಳಿದಂತೆ ರಾಹುಲ್ ತೆವಾತಿಯಾ (20), ಜೈದೇವ್ ಉನದ್ಕಟ್ (24) ರನ್ ಗಳಿಸಿದರು.

ಸಕಾರಿಯಾಗೆ 3 ವಿಕೆಟ್, ಚೆನ್ನೈ ಸವಾಲಿನ ಮೊತ್ತ...
ಈ ಮೊದಲು ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. ಋತುರಾಜ್ ಗಾಯಕ್‌ವಾಡ್ (10) ಸತತ ಮೂರನೇ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದರು. ಫಾಫ್ ಡು ಪ್ಲೆಸಿ ಹಾಗೂ ಮೊಯಿನ್ ಅಲಿ ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಕಲೆ ಹಾಕುವಲ್ಲಿ ವಿಫಲವಾದರು.

ಡು ಪ್ಲೆಸಿ 17 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 33 ರನ್ ಗಳಿಸಿದರು. ಅತ್ತ ಮೊಯಿನ್ ಅಲಿ 20 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 26 ರನ್ ಗಳಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಸುರೇಶ್ ರೈನಾ ಹಾಗೂ ಅಂಬಟಿ ರಾಯುಡು ಬಿರುಸಿನ ಜೊತೆಯಾಟದಲ್ಲಿ ಭಾಗಿಯಾದರು. 17 ಎಸೆತಗಳನ್ನು ಎದುರಿಸಿದ ರಾಯುಡು ಮೂರು ಸಿಕ್ಸರ್‌ಗಳ ನೆರವಿನಿಂದ 27 ರನ್ ಗಳಿಸಿದರು. ಅತ್ತ ರೈನಾ 15 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 18 ರನ್ ಗಳಿಸಿದರು.

ಇನ್ನಿಂಗ್ಸ್‌ನ 14ನೇ ಓವರ್‌ನಲ್ಲಿ ರಾಯುಡು ಹಾಗೂ ರೈನಾ ಹೊರದಬ್ಬಿದ ಚೇತನ್ ಸಕಾರಿಯಾ ಪಂದ್ಯದಲ್ಲಿ ರಾಜಸ್ಥಾನ್ ತಿರುಗೇಟು ನೀಡಲು ನೆರವಾದರು.

ಆದರೆ ಕೊನೆಯ ಹಂತದಲ್ಲಿ ಕೇವಲ ಎಂಟು ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 20 ರನ್ ಗಳಿಸಿದ ಡ್ವೇನ್ ಬ್ರಾವೋ ಬೃಹತ್ ಮೊತ್ತ ಪೇರಿಸಲು ನೆರವಾದರು. ನಾಯಕ ಮಹೇಂದ್ರ ಸಿಂಗ್ ಧೋನಿ (18) ಹಾಗೂ ಸ್ಯಾಮ್ ಕರನ್ (13) ಕೊಡುಗೆಯನ್ನು ನೀಡಿದರು.

ಅಂತಿಮವಾಗಿ ಚೆನ್ನೈ ತಂಡವು ಒಂಬತ್ತು ವಿಕೆಟ್ ನಷ್ಟಕ್ಕೆ 188 ರನ್ ಪೇರಿಸಿತು. ಇನ್ನುಳಿದಂತೆ ರವೀಂದ್ರ ಜಡೇಜ (8) ಹಾಗೂ ಶಾರ್ದೂಲ್ ಠಾಕೂರ್ (1) ರನ್ ಗಳಿಸಿದರು. ರಾಜಸ್ಥಾನ್ ಪರ ಚೇತನ್ ಮೂರು ಮತ್ತು ಕ್ರಿಸ್ ಮೊರಿಸ್ ಎರಡು ವಿಕೆಟ್ ಪಡೆದು ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.