ADVERTISEMENT

IPL 2021: ಚೆನ್ನೈನ ಕಠಿಣ ಪಿಚ್‌ನಲ್ಲೂ ಅಬ್ಬರಿಸಿದ ಮ್ಯಾಕ್ಸ್‌ವೆಲ್-ವಿಲಿಯರ್ಸ್

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 12:12 IST
Last Updated 18 ಏಪ್ರಿಲ್ 2021, 12:12 IST
   

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೆಂಗಳೂರು ತಂಡದ ಬ್ಯಾಟ್ಸ್‌ಮನ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿ ವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.

ಚೆನ್ನೈನ ಕಠಿಣ ಪಿಚ್‌ನಲ್ಲೂ ಕೆಕೆಆರ್ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದರು. ಅಲ್ಲದೆ ಆರ್‌ಸಿಬಿ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 204 ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾದರು.

ಆರಂಭದಲ್ಲೇ ಆರ್‌ಸಿಬಿ ತಂಡಕ್ಕೆ ಆಘಾತ ಎರುದಾಗಿತ್ತು. 9 ರನ್ ಗಳಿಸುವಷ್ಟರಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟೀದಾರ್ ವಿಕೆಟ್ ನಷ್ಟವಾಗಿತ್ತು. ಈ ಹಂತದಲ್ಲಿ ದೇವದತ್ತ ಪಡಿಕ್ಕಲ್ ಜೊತೆಗೂಡಿದ ಮ್ಯಾಕ್ಸ್‌ವೆಲ್ 86 ರನ್‌ಗಳ ಮಹತ್ವದ ಜೊತೆಯಾಟ ನೀಡಿದರು.

ADVERTISEMENT

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಕ್ಸ್‌ವೆಲ್ 28 ಎಸೆತಗಳಲ್ಲಿ ಸತತ ಎರಡನೇ ಅರ್ಧಶತಕ ಸಾಧನೆ ಮಾಡಿದರು. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಅಮೋಘ ಫಾರ್ಮ್ ಮುಂದುವರಿಸಿದರು. ಈ ಮೂಲಕ ಗರಿಷ್ಠ ರನ್ ಬೇಟೆಯಲ್ಲಿ ಆರಂಜ್ ಕ್ಯಾಪ್ ಗಿಟ್ಟಿಸಿದರು.

ದೇವದತ್ತ ವಿಕೆಟ್ ಪತನದ ಬಳಿಕ ಎಬಿ ಡಿ ವಿಲಿಯರ್ಸ್ ಅವರೊಂದಿಗೆ ಸೇರಿದ ಮ್ಯಾಕ್ಸ್‌ವೆಲ್ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಮೈದಾನದ ಎಲ್ಲ ದಿಕ್ಕಿಗೂ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದರು. ಈ ಪೈಕಿ ಸ್ವಿಚ್ ಹಿಟ್ ಮೂಲಕ ಸಿಕ್ಸರ್ ಬಾರಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

49 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ 78 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಎಬಿ ಡಿ ವಿಲಿಯರ್ಸ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಅಲ್ಲದೆ 34 ಎಸೆತಗಳಲ್ಲಿ 76 ರನ್ ಗಳಿಸಿ ಅಜೇಯರಾಗುಳಿದರು. ಕಾಕತಾಳೀಯವೆಂಬಂತೆ ವಿಲಿಯರ್ಸ್ ಹಾಗೂ ಮ್ಯಾಕ್ಸ್‌ವೆಲ್ ಇನ್ನಿಂಗ್ಸ್‌ನಲ್ಲಿ ತಲಾ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸಿಡಿದಿದ್ದವು.

ಇದು ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ಬ್ಯಾಟ್‌ನಿಂದ ಸಿಡಿದ ಎಂಟನೇ ಅರ್ಧಶತಕ ಸಾಧನೆಯಾಗಿದೆ. ಅತ್ತ ವಿಲಿಯರ್ಸ್ 39ನೇ ಬಾರಿಗೆ ಫಿಫ್ಟಿ ಗೆರೆ ದಾಟಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.