ADVERTISEMENT

IPL 2021 | RCB vs RR: ರಾಯಲ್ಸ್‌ಗೆ ದುಬೆ–ರಾಹುಲ್ ಆಸರೆ

ಸಿರಾಜ್, ಹರ್ಷಲ್‌ಗೆ ತಲಾ ಮೂರು ವಿಕೆಟ್; ಮಿಂಚಿದ ರಿಯಾನ್ ಪರಾಗ್

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 16:49 IST
Last Updated 22 ಏಪ್ರಿಲ್ 2021, 16:49 IST
ಮೊಹಮ್ಮದ್ ಸಿರಾಜ್ ಸಂಭ್ರಮ –ಪಿಟಿಐ ಚಿತ್ರ
ಮೊಹಮ್ಮದ್ ಸಿರಾಜ್ ಸಂಭ್ರಮ –ಪಿಟಿಐ ಚಿತ್ರ   

ಮುಂಬೈ (ಪಿಟಿಐ): ಕೇವಲ ಹದಿನೆಂಟು ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಶಿವಂ ದುಬೆ ಮತ್ತು ರಿಯಾನ್ ಪರಾಗ್ ಆಸರೆಯಾದರು.

ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 177 ರನ್‌ಗಳ ಹೋರಾಟದ ಮೊತ್ತ ಗಳಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಬೆಂಗಳೂರು ತಂಡದ ಮಧ್ಯಮವೇಗಿ ಮೊಹಮ್ಮದ್ ಸಿರಾಜ್ ಮತ್ತು ಕೈಲ್ ಜೆಮಿಸನ್ ಆರಂಭದಲ್ಲಿ ರಾಯಲ್ಸ್‌ಗೆ ಪೆಟ್ಟು ಕೊಟ್ಟರು.

ADVERTISEMENT

ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಜೋಸ್ ಬಟ್ಲರ್ ವಿಕೆಟ್‌ ಎಗರಿಸಿದ ಸಿರಾಜ್, ಐದನೇ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಇದಕ್ಕೂ ಮುನ್ನ ಜೆಮಿಸನ್ ಹಾಕಿದ ಓವರ್‌ನಲ್ಲಿ ಮನನ್ ವೊಹ್ರಾ ಔಟಾಗಿದ್ದರು.

ನಾಯಕ ಸಂಜು ಸ್ಯಾಮ್ಸನ್ (21;18ಎ) ಅವರೊಂದಿಗೆ ಸೇರಿದ ಎಡಗೈ ಬ್ಯಾಟ್ಸ್‌ಮನ್ ಶಿವಂ ದುಬೆ ಇನಿಂಗ್ಸ್‌ಗೆ ಚೇತರಿಕೆ ನೀಡುವ ಪ್ರಯತ್ನ ಆರಂಭಿಸಿದರು. ಆದರೆ, ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಮ್ಯಾಕ್ಸ್‌ವೆಲ್ ಪಡೆದ ಆಕರ್ಷಕ ಕ್ಯಾಚ್‌ಗೆ ಸಂಜು ಔಟಾದರು.

ಕ್ರೀಸ್‌ನಲ್ಲಿದ್ದ ‘ಮುಂಬೈಕರ್‘ ಶಿವಂ ಜೊತೆಗೂಡಿದ ಅಸ್ಸಾಂ ಹುಡುಗ ರಿಯಾನ್ ಪರಾಗ್ ಆಟದ ದಿಕ್ಕನ್ನೇ ಬದಲಿಸಿದರು. ಐದನೇ ವಿಕೆಟ್ ಜೊತೆಯಾಟದಲ್ಲಿ 66 ರನ್‌ ಸೇರಿಸಿದರು. ಈ ಹಂತದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮಾಡಿದ ಫೀಲ್ಡಿಂಗ್ ಮತ್ತು ಬೌಲಿಂಗ್ ಬದಲಾವಣೆಯ ತಂತ್ರಗಳು ಬಹುಮಟ್ಟಿಗೆ ವಿಫಲವಾದವು.

ಇಬ್ಬರೂ ಬ್ಯಾಟ್ಸ್‌ಮನ್‌ಗಳು ಚಾಣಾಕ್ಷತೆಯಿಂದ ಹೊಡೆತಗಳನ್ನು ಪ್ರಯೋಗಿಸಿದರು. ಅದರಲ್ಲೂ ಶಿವಂ ದುಬೆ ತಮ್ಮ ಎದೆಮಟ್ಟಕ್ಕೆ ಪುಟಿದು ಬಂದ ಎಸೆತಗಳನ್ನು ಥರ್ಡ್‌ಮ್ಯಾನ್ ಬೌಂಡರಿ ದಾಟಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ರಿಯಾನ್ ಕೂಡ ರಿವರ್ಸ್ ಸ್ವೀಪ್ ಮತ್ತು ಡ್ರೈವ್‌ಗಳ ಮೂಲಕ ಗಮನ ಸೆಳೆದರು. 13ನೇ ಓವರ್‌ನಲ್ಲಿ ರಿಯಾನ್ ಕ್ಯಾಚ್‌ ಕೈಬಿಟ್ಟ ಫೀಲ್ಡರ್ ವಿರಾಟ್ ಜೀವದಾನ ನೀಡಿದರು. ನಂತರದ ಓವರ್‌ನಲ್ಲಿ ಈ ಜೊತೆಯಾಟವನ್ನು ಮಧ್ಯಮವೇಗಿ ಹರ್ಷಲ್ ಪಟೇಲ್ ಮುರಿದರು. ರಿಯಾನ್ ವಿಕೆಟ್ ಗಳಿಸುವಲ್ಲಿ ಅವರು ಸಫಲರಾದರು.

ಆದರೆ, ಆಗ ಕ್ರೀಸ್‌ಗೆ ಬಂದ ರಾಹುಲ್ ತೆವಾಟಿಯಾ ಆರ್‌ಸಿಬಿ ತಂಡಕ್ಕೆ ತಿರುಗೇಟು ಕೊಟ್ಟರು. ಸಿಕ್ಸರ್‌ ಹೊಡೆಯುವ ಮೂಲಕ ಖಾತೆ ತೆರೆದರು. ಶಿವಂ ಜೊತೆಗೆ ಆರನೇ ವಿಕೆಟ್ ಜೊತೆಯಾಟದಲ್ಲಿ 24 ರನ್‌ ಕಲೆಹಾಕಿದರು. ದುಬೆ ವಿಕೆಟ್ ಗಳಿಸಿದ ಕೇನ್ ರಿಚರ್ಡ್ಸನ್ ಜೊತೆಯಾಟವನ್ನು ಮುರಿದರು.

ಆದರೆ, ರಾಹುಲ್ ಅಬ್ಬರ ಮತ್ತಷ್ಟು ರಂಗೇರಿತು. ಕೇವಲ 23 ಎಸೆತಗಳಲ್ಲಿ 40 ರನ್‌ ಗಳಿಸಿದರು. ಅವರಿಗೂ ಮೊಹಮ್ಮದ್‌ ಸಿರಾಜ್ ತಮ್ಮ ಎರಡನೇ ಸ್ಪೆಲ್‌ನಲ್ಲಿ ಪೆವಿಲಿಯನ್ ದಾರಿ ತೋರಿಸಿದರು.

ಕೊನೆಯ ಓವರ್‌ನಲ್ಲಿ ಕ್ರಿಸ್ ಮೊರಿಸ್ ಮತ್ತು ಚೇತನ್ ಸಕಾರಿಯಾ ವಿಕೆಟ್‌ ಗಳಿಸಿದ ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ಉಳಿಸಿಕೊಂಡರು.

ಇದೇ ಓವರ್‌ನಲ್ಲಿ ರಾಯಲ್ಸ್‌ ತಂಡದ ಕನ್ನಡಿಗ ಶ್ರೇಯಸ್ ಗೋಪಾಲ್ ಒಂದು ಸಿಕ್ಸರ್ ಹೊಡೆದು ತಂಡದ ಮೊತ್ತ ಹೆಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.