ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ಆರು ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಿದೆ.
ಲೀಗ್ ಹಂತದಲ್ಲಿ ಇನ್ನೆರಡು ಪಂದ್ಯಗಳು ಬಾಕಿ ಉಳಿದಿರುವಾಗಲೇ ಆರ್‌ಸಿಬಿ ಅಂತಿಮ ನಾಲ್ಕರ ಘಟ್ಟವನ್ನು ಪ್ರವೇಶಿಸಿದೆ. ಈಗ ಚೊಚ್ಚಲ ಕಿರೀಟದತ್ತ ದಿಟ್ಟ ಹೆಜ್ಜೆಯನ್ನಿಟ್ಟಿರುವ ಆರ್‌ಸಿಬಿ ತಂಡದ ಮುಂದಿನ ಗುರಿ ಕುರಿತಾಗಿ ನಾಯಕ ವಿರಾಟ್ ಕೊಹ್ಲಿ ವಿವರಣೆ ನೀಡಿದ್ದಾರೆ.
ಕೊನೆಯ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಿಗೆ ಲಗ್ಗೆಯಿಡುವ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ.
'ಎರಡು ಪಂದ್ಯ ಉಳಿದಿರುವಂತೆಯೇ 12 ಪಂದ್ಯಗಳಲ್ಲಿ ಎಂಟು ಗೆಲುವು ದಾಖಲಿಸಿರುವುದು ನಿಜಕ್ಕೂ ಅತ್ಯುತ್ತಮ ಅಭಿಯಾನವಾಗಿದೆ. 2011ರ ಬಳಿಕ ನಾವದನ್ನು ಮಾಡಿಲ್ಲ. ಅಗ್ರ ಎರಡರಲ್ಲಿ ಸ್ಥಾನ ಪಡೆಯಲು ನಮ್ಮ ಮುಂದೆ ಇನ್ನೆರಡು ಅವಕಾಶಗಳಿವೆ. ಇದು ಇನ್ನಷ್ಟು ನಿರ್ಭಿತಿಯಿಂದ ಆಡಲು ನಮಗೆ ಪ್ರೇರಣೆಯನ್ನು ನೀಡಲಿದೆ' ಎಂದು ಹೇಳಿದ್ದಾರೆ.
ಪಂದ್ಯ ಸಂಖ್ಯೆ 49ರ ಅಂತ್ಯಕ್ಕೆ ಅಂಕಪಟ್ಟಿಯಲ್ಲಿ ಕ್ರಮವಾಗಿ ಅಗ್ರ ಎರಡು ಸ್ಥಾನಗಳನ್ನು ಹಂಚಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಲಾ 18 ಅಂಕಗಳನ್ನು ಹೊಂದಿದೆ. ರನ್‌ರೇಟ್ ಲೆಕ್ಕಾಚಾರದಲ್ಲಿ ಮಹೇಂದ್ರ ಸಿಂಗ್ ಧೋನಿ ಬಳಗವು ಅಗ್ರಸ್ಥಾನ ಕಾಯ್ದುಕೊಂಡಿದೆ.
ಮೂರನೇ ಸ್ಥಾನದಲ್ಲಿರುವ ಆರ್‌ಸಿಬಿ, 12 ಪಂದ್ಯಗಳಲ್ಲಿ ಎಂಟು ಗೆಲುವು ಹಾಗೂ ನಾಲ್ಕು ಸೋಲಿನೊಂದಿಗೆ ಒಟ್ಟು 16 ಅಂಕಗಳನ್ನು ಸಂಪಾದಿಸಿದ್ದು, ಮೂರನೇ ಸ್ಥಾನದಲ್ಲಿದೆ.
ಅಂದ ಹಾಗೆ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆದ ತಂಡಗಳಿಗೆ ಫೈನಲ್ ಪ್ರವೇಶಿಸಲು ಎರಡು ಅವಕಾಶಗಳಿರುತ್ತವೆ. 'ಮೊದಲ ಕ್ವಾಲಿಫೈಯರ್'ನಲ್ಲಿ ಸೋತರೂ 'ಎರಡನೇ ಕ್ವಾಲಿಫೈಯರ್'ನಲ್ಲಿ ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.