ADVERTISEMENT

ಐಪಿಎಲ್‌ನ ಅತಿ ದುಬಾರಿ ಆಟಗಾರನಿಗೆ ಸಿಂಗಲ್ ನಿರಾಕರಿಸಿದ ಸಂಜು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಏಪ್ರಿಲ್ 2021, 13:11 IST
Last Updated 13 ಏಪ್ರಿಲ್ 2021, 13:11 IST
ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲೇ ಅತಿ ದುಬಾರಿ ಆಟಗಾರ ಎಂದೆನಿಸಿರುವ ಕ್ರಿಸ್ ಮೊರಿಸ್ ಅವರಿಗೆ ಪಂದ್ಯದ ಅತ್ಯಂತ ನಿರ್ಣಾಯಕ ಹಂತದಲ್ಲಿ ಸಂಜು ಸ್ಯಾಮ್ಸನ್ ಸಿಂಗಲ್ ನಿರಾಕರಿಸಿರುವುದು ಹೆಚ್ಚಿನ ಚರ್ಚಗೆ ಗ್ರಾಸವಾಗಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಜಸ್ಥಾನ ರಾಯಲ್ಸ್ ಗೆಲುವಿಗೆ 222 ರನ್‌ಗಳ ಬೃಹತ್ ಗುರಿ ಒಡಿತ್ತು.

ನಾಯಕ ಸಂಜು ಸ್ಯಾಮ್ಸನ್ ದಿಟ್ಟ ಹೋರಾಟದ ಬೆಂಬಲದೊಂದಿಗೆ ರಾಜಸ್ಥಾನ ರಾಯಲ್ಸ್ ಕೊನೆಯ ಎಸೆತದ ವರೆಗೂ ವಿಜಯದ ಆಸೆಯನ್ನು ಜೀವಂತವಾಗಿರಿಸಿತ್ತು. ರಾಜಸ್ಥಾನ ಗೆಲುವಿಗೆ ಕೊನೆಯ ಓವರ್‌ನಲ್ಲಿ 13 ರನ್ ಮತ್ತು ಅಂತಿಮ ಎರಡು ಎಸೆತದಲ್ಲಿ ಐದು ರನ್‌‌ಗಳ ಅವಶ್ಯಕತೆಯಿತ್ತು.

ADVERTISEMENT

ಆರ್ಶ್‌ದೀಪ್ ಸಿಂಗ್ ಎಸೆದ ಇನ್ನಿಂಗ್ಸ್‌ನ ಕೊನೆಯ ಓವರ್‌ನ ಐದನೇ ಎಸೆತದಲ್ಲಿ ಸಂಜು ಸ್ಯಾಮನ್ ಸಹ ಆಟಗಾರ ಕ್ರಿಸ್ ಮೊರಿಸ್ ಅವರಿಗೆ ಸಿಂಗಲ್ ನಿರಾಕರಿಸಿದ್ದರು. ಅಲ್ಲದೆ ಅಂತಿಮ ಎಸೆತದಲ್ಲಿ ಸಿಕ್ಸರ್ ಹೊಡೆಯುವ ಪ್ರಯತ್ನದಲ್ಲಿ ಬೌಂಡರಿ ಗೆರೆಯಲ್ಲಿ ದೀಪಕ್ ಹೂಡಾಗೆ ಕ್ಯಾಚಿತ್ತು ನಿರ್ಗಮಿಸಿದ್ದರು.

ಇದರೊಂದಿಗೆ ರಾಜಸ್ಥಾನ ತಂಡದ ಜಯದ ಕನಸು ಕಮರಿಹೋಗಿತ್ತು. ಐಪಿಎಲ್‌ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಹರಾಜುಗೊಂಡಿರುವ ಕ್ರಿಸ್ ಮೊರಿಸ್ ಅವರಿಗೆ ಒಂಟಿ ರನ್ ನಿರಾಕರಿಸಿರುವುದು ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದೆ.

ಆಗಲೇ ನಾಲ್ಕು ಎಸತಗಳನ್ನು ಎದುರಿಸಿದ್ದ ಮೊರಿಸ್ ಎರಡು ರನ್ ಗಳಿಸಲಷ್ಟೇ ಯಶಸ್ವಿಯಾಗಿದ್ದರು. ಇನ್ನೊಂದೆಡೆ ಸಂಜು ತಮ್ಮಲ್ಲೇ ಹೆಚ್ಚಿನ ಆತ್ಮನಂಬಿಕೆಯಿರಿಸಿದ್ದರು. ಆದರೂ ಗೆಲುವಿನ ದಡ ಸೇರಿಸಲಾಗಲಿಲ್ಲ.

63 ಎಸೆತಗಳನ್ನು ಎದುರಿಸಿದ್ದ ಸಂಜು 12 ಬೌಂಡರಿ ಹಾಗೂ ಏಳು ಸಿಕ್ಸರ್‌ಗಳ ನೆರವಿನಿಂದ 119 ರನ್ ಗಳಿಸಿದ್ದರು. ಈ ಮೂಲಕ ರಾಜಸ್ಥಾನ ತಂಡವು ನಾಲ್ಕು ರನ್ ಅಂತರದ ಸೋಲಿಗೆ ಶರಣಾಗಿತ್ತು.

ಏತನ್ಮಧ್ಯೆ ಸಂಜು ನಿರ್ಧಾರವನ್ನು ರಾಜಸ್ಥಾನ ತಂಡದ ನಿರ್ದೇಶಕ ಕುಮಾರ ಸಂಗಕ್ಕರ ಸೇರಿದಂತೆ ಪ್ರಮುಖ ಮಾಜಿಗಳು ಬೆಂಬಲಿಸಿದ್ದಾರೆ. ಇವರಲ್ಲಿ ವೆಸ್ಟ್‌ಇಂಡೀಸ್‌ನ ಮಾಜಿ ದಿಗ್ಗಜ ಬ್ರಿಯಾನ್ ಲಾರಾ, ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮುಂತಾದವರು ಸೇರಿದ್ದಾರೆ.

ಐಪಿಎಲ್ 2021ನೇ ಸಾಲಿಗೆ ನಡೆದ ಹರಾಜಿನಲ್ಲಿ ಕ್ರಿಸ್ ಮೊರಿಸ್ 16.25 ಕೋಟಿ ಮೊತ್ತಕ್ಕೆ ಖರೀದಿಯಾಗಿದ್ದರು. ಅಲ್ಲದೆ ಸಂಜು ಸಿಂಗಲ್ ರನ್ ನಿರಾಕರಿಸಿದ್ದಾಗ ಮೊರಿಸ್ ನೀಡಿರುವ ರಿಯಾಕ್ಷನ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.