ADVERTISEMENT

IPL 2021: ಶತಕದಂಚಿನಲ್ಲಿ ನಾಯಕ ಕೊಹ್ಲಿಗೆ ಪಡಿಕ್ಕಲ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಏಪ್ರಿಲ್ 2021, 13:16 IST
Last Updated 23 ಏಪ್ರಿಲ್ 2021, 13:16 IST
   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ದೇವದತ್ತ ಪಡಿಕ್ಕಲ್, ಚೊಚ್ಚಲ ಶತಕ ಸಾಧನೆ ಮಾಡಿದ್ದಾರೆ. ಆದರೆ ವೈಯಕ್ತಿಕ ಮೈಲಿಗಲ್ಲು ತಲುಪುವ ಗುರಿ ಅವರ ಮನಸ್ಸಿಲ್ಲಿರಲಿಲ್ಲ. ಪಂದ್ಯದ ಗೆಲುವೇ ಮುಖ್ಯ ಎಂದಿದ್ದಾರೆ.

ಇದನ್ನು ನಾಯಕ ವಿರಾಟ್ ಕೊಹ್ಲಿ ಸಹ ಖಚಿತಪಡಿಸಿಕೊಂಡಿದ್ದಾರೆ. ಮೈದಾನದಲ್ಲಿ ಪಡಿಕ್ಕಲ್ ಅವರೊಂದಿಗಿನ ಸಂಭಾಷಣೆಯನ್ನು ಕೊಹ್ಲಿ ಬಹಿರಂಗಪಡಿಸಿದ್ದಾರೆ.

'ಶತಕದ ಬಗ್ಗೆ ನಾವು ಮಾತನಾಡಿದ್ದೇವೆ. ಆದರೆ ಅವರು ಪಂದ್ಯವನ್ನು ಬೇಗನೇ ಮುಗಿಸಲು ತಿಳಿಸಿದರು. ಇನ್ನೂ ಅನೇಕ ಶತಕಗಳು ದಾಖಲಾಗಲಿವೆ ಎಂದವರು ಹೇಳಿದರು. ಈ ಸಂದರ್ಭದಲ್ಲಿ ಮೊದಲು ಈ ಶತಕವನ್ನು ಗಳಿಸು, ಬಳಿಕ ಈ ಮಾತನ್ನು ಆಡುವಂತೆ ಪಡಿಕ್ಕಲ್‌ಗೆ ತಿಳಿಸಿದ್ದೆ' ಎಂದು ವಿರಾಟ್ ವಿವರಿಸಿದ್ದಾರೆ.

ADVERTISEMENT

ಪಡಿಕ್ಕಲ್ ಮೇಲೆ ನಾಯಕ ವಿರಾಟ್ ಅಪಾರ ನಂಬಿಕೆಯನ್ನಿರಿಸಿದ್ದು, ಇನ್ನು ಮುಂದಕ್ಕೆ ಇಂತಹ ಇನ್ನಿಂಗ್ಸ್‌ಗಳನ್ನು ಕಟ್ಟಿ ತಂಡಕ್ಕೆ ನೆರವಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ. ನಿಜಕ್ಕೂ ಪಡಿಕ್ಕಲ್ ಶತಕಕ್ಕೆ ಅರ್ಹವಾಗಿದ್ದರು ಎಂದು ನಾಯಕ ಶ್ಲಾಘಿಸಿದ್ದಾರೆ.

ಪಡಿಕ್ಕಲ್ ಕೂಡಾ ಶತಕ ಗಳಿಸುವ ಯಾವುದೇ ಒತ್ತಡವಿರಲಿಲ್ಲ ಎಂದು ಹೇಳಿದ್ದಾರೆ. 'ನಾನು ನಾಯಕ ವಿರಾಟ್ ಅವರಲ್ಲಿ ಪಂದ್ಯ ಬೇಗನೇ ಮುಗಿಸುವಂತೆ ಹೇಳಿದ್ದೆ. ಅಂತಿಮವಾಗಿ ನಾನು ಶತಕ ಗಳಿಸದಿದ್ದರೂ ಅದು ಮುಖ್ಯವೆನಿಸುವುದಿಲ್ಲ. ಪಂದ್ಯ ಗೆಲುವಷ್ಟೇ ನನ್ನ ಪಾಲಿಗೆ ಮಹತ್ವದೆನಿಸಿದೆ. ನಮ್ಮಿಬ್ಬರ ನಡುವಣ ಸಂಭಾಷಣೆಯು ಸ್ಪಷ್ಟವಾಗಿತ್ತು. ಒಬ್ಬರನೊಬ್ಬರು ನೆಚ್ಚಿಕೊಂಡು ಆಡಿದೆವು' ಎಂದು ವಿವರಿಸಿದ್ದಾರೆ.

'ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಇನ್ನಿಂಗ್ಸ್ ನನ್ನ ಪಾಲಿಗೆ ವಿಶೇಷವೆನಿಸಿದೆ. ನನ್ನ ಸರದಿಗಾಗಿ ಕಾಯುತ್ತಿದ್ದೆ. ನಾನು ಕೊರೊನಾ ಸೋಂಕಿಗೊಳಗಾಗಿದ್ದಾಗ ಇಲ್ಲಿಗೆ ಬಂದು ಆಟವಾಡುವ ಬಗ್ಗೆ ಯೋಚಿಸುತ್ತಿದ್ದೆ. ಮೊದಲ ಪಂದ್ಯಕ್ಕೆ ಅಲಭ್ಯರಾದಾಗ ತುಂಬಾ ನೋವಾಗಿತ್ತು. ಈಗ ತಂಡದ ಗೆಲುವಿಗಾಗಿ ಕೊಡುಗೆ ಸಲ್ಲಿಸಲು ಸಾಧ್ಯವಾಗಿರುವುದು ಅತೀತ ಸಂತಸ ನೀಡಿದೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.