ADVERTISEMENT

ಧೋನಿ ಔಟ್ ಆದಾಗ ಕೊಹ್ಲಿ ಸಂಭ್ರಮ ಮಿತಿ ಮೀರಿತೇ? - ಮಹಿ ಅಭಿಮಾನಿಗಳ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮೇ 2022, 13:39 IST
Last Updated 5 ಮೇ 2022, 13:39 IST
ಟ್ವಿಟರ್ ಚಿತ್ರ
ಟ್ವಿಟರ್ ಚಿತ್ರ   

ಪುಣೆ: ಮೈದಾನದಲ್ಲಿ ಸದಾ ಆಕ್ರಮಣಕಾರಿ ವರ್ತನೆ ತೋರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮಗದೊಮ್ಮೆ ಸುದ್ದಿಯಲ್ಲಿದ್ದಾರೆ.

ಐಪಿಎಲ್ 2022 ಟೂರ್ನಿಯಲ್ಲಿ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಔಟ್ ಆದಾಗ ವಿರಾಟ್ ಆಕ್ರಮಣಕಾರಿಯಾಗಿ ಸಂಭ್ರಮ ಆಚರಿಸಿದ್ದರು.

ಇದು ಮಹಿ ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ವಿರಾಟ್ ವರ್ತನೆ ಮಿತಿ ಮೀರಿತ್ತು ಎಂದು ಟೀಕಿಸಿದ್ದಾರೆ. ಅಲ್ಲದೆ ಧೋನಿಯನ್ನು ಕೊಹ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಿರ್ಣಾಯಕ ಹಂತದಲ್ಲಿ ಜೋಶ್ ಹ್ಯಾಜಲ್‌ವುಡ್ ದಾಳಿಯಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದ್ದ ಧೋನಿ, ರಜತ್ ಪಾಟಿದಾರ್ ಕೈಗೆ ಕ್ಯಾಚ್ ನೀಡಿ ನಿರ್ಗಿಮಿಸಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು.

ಧೋನಿ ಬಗ್ಗೆ ವಿರಾಟ್ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಈ ಕುರಿತು ಅನೇಕ ಬಾರಿ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಆದರೆ ಮೈದಾನದಲ್ಲಿ ಮಾತ್ರ ಆಕ್ರಮಣಶೀಲ ವರ್ತನೆಯಿಂದಲೇ ಗಮನ ಸೆಳೆದಿದ್ದಾರೆ.

ಚೆನ್ನೈ ವಿರುದ್ಧ 13 ರನ್ ಅಂತರದ ಗೆಲುವು ದಾಖಲಿಸಿದ್ದ ಆರ್‌ಸಿಬಿ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.