ADVERTISEMENT

IPL 2022 KKR vs GT: ರಸೆಲ್ ಹೋರಾಟ ವ್ಯರ್ಥ; ಗುಜರಾತ್‌ಗೆ ಒಲಿದ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಏಪ್ರಿಲ್ 2022, 14:12 IST
Last Updated 23 ಏಪ್ರಿಲ್ 2022, 14:12 IST
   

ಮುಂಬೈ: ನಾಯಕ ಹಾರ್ದಿಕ್ ಪಾಂಡ್ಯ ಸಮಯೋಚಿತ ಅರ್ಧಶತಕದ (67) ನೆರವಿನಿಂದ ಗುಜರಾತ್ ಟೈಟನ್ಸ್ ತಂಡವು ಶನಿವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಎಂಟು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಇದರೊಂದಿಗೆ ಕೆಕೆಆರ್ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ (4 ವಿಕೆಟ್ ಹಾಗೂ 48 ರನ್) ಹೋರಾಟವು ವ್ಯರ್ಥವೆನಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಒಂಬತ್ತು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಕೆಕೆಆರ್ ಎಂಟು ವಿಕೆಟ್ ನಷ್ಟಕ್ಕೆ 148 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಇದರೊಂದಿಗೆ ಆಡಿರುವ ಏಳು ಪಂದ್ಯಗಳಲ್ಲಿ ಆರನೇ ಗೆಲುವು ದಾಖಲಿಸಿರುವ ಗುಜರಾತ್, 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮತ್ತೊಮ್ಮೆಅಗ್ರಸ್ಥಾನಕ್ಕೇರಿದೆ.

ADVERTISEMENT

ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಕೆಕೆಆರ್ ಆರಂಭ ಉತ್ತಮವಾಗಿರಲಿಲ್ಲ. 34 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತು. ಸ್ಯಾಮ್ ಬಿಲ್ಲಿಂಗ್ಸ್ (4), ಸುನಿಲ್ ನಾರಾಯಣ್ (5), ನಿತೀಶ್ ರಾಣಾ (2) ಹಾಗೂ ನಾಯಕ ಶ್ರೇಯಸ್ ಅ್ಯಯರ್ (12) ವಿಕೆಟ್‌ಗಳನ್ನು ಕಳೆದುಕೊಂಡಿತು.

ಉತ್ತಮವಾಗಿ ಆಡುತ್ತಿದ್ದ ರಿಂಕ್ ಸಿಂಗ್ (35) ಸಹ ಔಟ್ ಆಗುವುದರೊಂದಿಗೆ 75 ರನ್ನಿಗೆ ಅರ್ಧ ತಂಡವು ಪೆವಿಲಿಯನ್‌ಗೆ ಮರಳಿತು.

ವೆಂಕಟೇಶ್ ಅಯ್ಯರ್ (17) ಕಳಪೆ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿದರು.

ಈ ನಡುವೆ ಏಳನೇಯವರಾಗಿ ಕ್ರೀಸಿಗಿಳಿದ ಆ್ಯಂಡ್ರೆ ರಸೆಲ್, ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಗುಜರಾತ್ ಪಾಳಯದಲ್ಲಿ ನಡುಕ ಸೃಷ್ಟಿಸಿದರು.

ಆದರೆ ಅಂತಿಮ ಓವರ್‌ನಲ್ಲಿ ವಿಕೆಟ್ ಒಪ್ಪಿಸುವದರೊಂದಿಗೆ ಕೆಕೆಆರ್ ಗೆಲುವಿನ ಕನಸು ಕಮರಿತು. 25 ಎಸೆತಗಳನ್ನು ಎದುರಿಸಿದ ರಸೆಲ್ ಆರು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 48 ರನ್ ಗಳಿಸಿದರು.

ಉಮೇಶ್ ಯಾದವ್ 15 ರನ್ ಗಳಿಸಿ ಔಟಾಗದೆ ಉಳಿದರು. ಕೆಕೆಆರ್ ಪರ ಮೊಹಮ್ಮದ್ ಶಮಿ, ಯಶ್ ದಯಾಲ್ ಹಾಗೂ ರಶೀದ್ ಖಾನ್ ತಲಾ ಎರಡು ವಿಕೆಟ್ ಕಬಳಿಸಿದರು.

ನಾಯಕನ ಆಟವಾಡಿದಹಾರ್ದಿಕ್...

ಈ ಮೊದಲು ಹಾರ್ದಿಕ್ ಪಾಂಡ್ಯ ಬಿರುಸಿನ ಅರ್ಧಶತಕದ (67) ನೆರವಿನಿಂದ ಗುಜರಾತ್ ಒಂಬತ್ತು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು.

ಕೆಕೆಆರ್ ಪರ ಆ್ಯಂಡ್ರೆ ರಸೆಲ್ ನಾಲ್ಕು ಹಾಗೂಟಿಮ್ ಸೌಥಿ ಮೂರು ವಿಕೆಟ್ ಕಬಳಿಸಿದರು.ರಿಂಕು ಸಿಂಗ್ ನಾಲ್ಕು ಕ್ಯಾಚ್ ಪಡೆದು ಮಿಂಚಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಆರಂಭ ಉತ್ತಮವಾಗಿರಲಿಲ್ಲ. ಶುಭಮನ್ ಗಿಲ್ (7) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು.

ಈ ಹಂತದಲ್ಲಿ ಜೊತೆಗೂಡಿದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ (25) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ದ್ವಿತೀಯ ವಿಕೆಟ್‌ಗೆ 75 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು.

ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಪಾಂಡ್ಯ 36 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಬಳಿಕ ಮೂರನೇ ವಿಕೆಟ್‌ಗೆ ಡೇವಿಡ್ ಮಿಲ್ಲರ್ (27 ರನ್, 20 ಎಸೆತ) ಜೊತೆಗೂ ಅರ್ಧಶತಕದ ಜೊತೆಯಾಟ ಕಟ್ಟಿದರು.

ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಪಾಂಡ್ಯ ಔಟ್ ಆದರು. ಆಗಲೇ 49 ಎಸೆತಗಳಲ್ಲಿ 67 ರನ್ (4 ಬೌಂಡರಿ, 2 ಸಿಕ್ಸರ್) ಗಳಿಸಿದರು.

ಇನ್ನುಳಿದಂತೆ ರಾಹುಲ್ ತೆವಾಟಿಯಾ 17 ರನ್ ಗಳಿಸಿದರು. ಆದರೆ ರಶೀದ್ ಖಾನ್ ಶೂನ್ಯಕ್ಕೆ ಔಟ್ ಆದರು.

ಟಾಸ್ ಗೆದ್ದ ಗುಜರಾತ್ ಬ್ಯಾಟಿಂಗ್ ಆಯ್ಕೆ...
ಈ ಮೊದಲು ಇತರೆಲ್ಲ ತಂಡಗಿಂತಲೂ ವಿಭಿನ್ನವಾಗಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ಹನ್ನೊಂದರ ಬಳಗ:

ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಗುಜರಾತ್, ಆಡಿರುವ ಆರು ಪಂದ್ಯಗಳಲ್ಲಿ ಐದು ಗೆಲುವು ದಾಖಲಿಸಿದ್ದು, ಒಟ್ಟು 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಸಂಪೂರ್ಣ ಫಿಟ್ನೆಸ್ ಮರಳಿ ಪಡೆದಿರುವ ಪಾಂಡ್ಯ, ತಂಡವನ್ನು ಮುನ್ನಡೆಸುತ್ತಿದ್ದಾರೆ.

ಇನ್ನೊಂದೆಡೆ ಕೆಕೆಆರ್, ಏಳು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.