ಮುಂಬೈ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಮಾರ್ಚ್ 26 ಶನಿವಾರದಂದು ಆರಂಭವಾಗಲಿದೆ. ಈ ನಡುವೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಗೇಮ್‌ಪ್ಲ್ಯಾನ್ ಬಗ್ಗೆ ಸುಳಿವು ನೀಡಿದ್ದಾರೆ.
ಮುಂಬೈ ಪರ ನಾಯಕ ರೋಹಿತ್ ಶರ್ಮಾ ಜೊತೆಗೆ ಯಾರು ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬುದಕ್ಕೆ ಉತ್ತರ ದೊರಕಿದ್ದು, ಇಶಾನ್ ಕಿಶನ್ ಎಂದು ಖಚಿತಪಡಿಸಿದ್ದಾರೆ.
ಸೂರ್ಯಕುಮಾರ್ ಶೀಘ್ರದಲ್ಲೇ ತಂಡಕ್ಕೆ ಸೇರ್ಪಡೆ...
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿರುವ ಸೂರ್ಯಕುಮಾರ್ ಯಾದವ್ ಸದ್ಯದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ರೋಹಿತ್ ಮಾಹಿತಿ ನೀಡಿದ್ದಾರೆ. ಆದರೆ ಮೊದಲ ಪಂದ್ಯಕ್ಕೆ ಲಭ್ಯರಾಗಲಿದ್ದಾರೆಯೇ ಎಂಬುದನ್ನು ಖಚಿತಪಡಿಸಿಲ್ಲ.
ಸೂರ್ಯಕುಮಾರ್ ಯಾದವ್ ಇನ್ನಷ್ಟೇ ತಂಡವನ್ನು ಸೇರಿಕೊಳ್ಳಬೇಕಿದ್ದು, ಮೊದಲ ಪಂದ್ಯದಲ್ಲಿ ಆಡುವುದು ಅನುಮಾನವೆನಿಸಿದೆ.
ಹೋಮ್ ಗ್ರೌಂಡ್‌ನಲ್ಲಿ ಆಡುವುದರಿಂದ ಹೆಚ್ಚಿನ ಅನುಕೂಲ?
ಈ ಬಾರಿಯ ಐಪಿಎಲ್, ಮುಂಬೈ ಹಾಗೂ ಪುಣೆಯ ಒಟ್ಟು ನಾಲ್ಕು ಮೈದಾನಗಳಲ್ಲಿ ಆಯೋಜನೆಯಾಗಲಿವೆ. ಆದ್ದರಿಂದ ಹೋಮ್ ಗ್ರೌಂಡ್‌ನಲ್ಲಿ ಆಡುವುದರಿಂದ ಮುಂಬೈ ತಂಡಕ್ಕೆ ಹೆಚ್ಚಿನ ಅನುಕೂಲ ಸಿಗಲಿದೆ ಎಂಬ ವಾದವನ್ನು ರೋಹಿತ್ ಶರ್ಮಾ ತಳ್ಳಿ ಹಾಕಿದ್ದಾರೆ.
ಇದು ಹೊಸ ತಂಡವಾಗಿದ್ದು, ಬಹುತೇಕ ಆಟಗಾರರು ಮುಂಬೈನಲ್ಲಿ ಆಡಿದ ಅನುಭವ ಹೊಂದಿಲ್ಲ. ನಾನು (ರೋಹಿತ್), ಸೂರ್ಯ, ಪೊಲಾರ್ಡ್, ಇಶಾನ್ ಹಾಗೂ ಬೂಮ್ರಾ ಮಾತ್ರ ಮುಂಬೈನಲ್ಲಿ ಆಡಿದ್ದೇವೆ. ನಾವೆಲ್ಲರೂ ಎರಡು ವರ್ಷಗಳ ಬಳಿಕ ಮುಂಬೈನಲ್ಲಿ ಆಡುತ್ತಿದ್ದೇವೆ. ಆದ್ದರಿಂದ ಅಂತಹ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದರು.
ಪೂರ್ವ ತಯಾರಿಯಲ್ಲಿ ಬದಲಾವಣೆಯಿಲ್ಲ...
ಹೊಸ ತಂಡಗಳ ಸೇರ್ಪಡೆಯೊಂದಿಗೆ ಐಪಿಎಲ್ ಲೀಗ್ ಪಂದ್ಯಗಳ ಮಾದರಿ ಬದಲಾಗಿದೆ. ಆದರೆ ತಂಡದ ಪೂರ್ವ ತಯಾರಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ರೋಹಿತ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. 2011ರಲ್ಲೂ ಇದೇ ರೀತಿಯ ಮಾದರಿಯಲ್ಲಿ ಆಡಿದ್ದೇವೆ. ಕೆಲವು ನಿರ್ದಿಷ್ಟ ತಂಡಗಳ ವಿರುದ್ಧ ಒಂದು ಬಾರಿ ಮಾತ್ರ ಆಡಬೇಕಿದೆ. ಹಾಗಾಗಿ ಅಂತಹ ತಂಡಗಳ ವಿರುದ್ಧ ಆಡುವಾಗ ಹೆಚ್ಚು ಸನ್ನದ್ಧರಾಗಿರಬೇಕು. ಏಕೆಂದರೆ ಮಗದೊಂದು ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.