ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಕುಟುಂಬದ ಸದಸ್ಯರೊಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್, ಐದು ದಿನಗಳ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.
ಐಪಿಎಲ್ 2022ನೇ ಟೂರ್ನಿಯಲ್ಲಿ ಇಂದು (ಶುಕ್ರವಾರ) ರಾಜಸ್ಥಾನ್ ರಾಯಲ್ಸ್ ವಿರುದ್ಧದ ಹಣಾಹಣಿಗೂ ಮುನ್ನ ಈ ಮಹತ್ವದ ಬೆಳವಣಿಗೆ ನಡೆದಿದೆ. ಹಾಗಿದ್ದರೂ ಪಾಂಟಿಂಗ್ ಅವರಿಗೆ ಎರಡು ಬಾರಿ ನಡೆಸಲಾದ ಕೋವಿಡ್ ಪರೀಕ್ಷಾ ವರದಿಯು ನೆಗೆಟಿವ್ ಬಂದಿದೆ.
ಕುಟುಂಬದ ಸದಸ್ಯರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಪಾಂಟಿಂಗ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಅವರ ಮೇಲೆ ಡೆಲ್ಲಿ ಫ್ರಾಂಚೈಸ್‌ನ ವೈದ್ಯಕೀಯ ತಂಡವು ನಿಗಾ ವಹಿಸುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪಾಳಯದಲ್ಲಿ ಇದುವರೆಗೆ ಆರು ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿವೆ. ಏಪ್ರಿಲ್ 20ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಟಿಮ್ ಸೀಫರ್ಟ್ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು.
ತಂಡದ ಪ್ರಯಾಣವನ್ನು ತಪ್ಪಿಸುವ ಹಾಗೂ ಮುಂಜಾಗ್ರತಾ ಕ್ರಮವಾಗಿ ರಾಜಸ್ಥಾನ್ ವಿರುದ್ಧದ ಪಂದ್ಯವನ್ನು ಪುಣೆಯಿಂದ ಮುಂಬೈನ ವಾಂಖೆಡೆ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಈ ಮೊದಲು ಪಂಜಾಬ್ ವಿರುದ್ಧದ ಪಂದ್ಯವನ್ನು ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
ಡೆಲ್ಲಿ ತಂಡದ ಆಟಗಾರ ಮಿಚೆಲ್ ಮಾರ್ಷ್, ಫಿಸಿಯೊ ಪ್ಯಾಟ್ರಿಕ್ ಫರ್ಹಾಟ್, ಮಸಾಜ್ ತಜ್ಞ ಚೇತನ್ ಕುಮಾರ್, ವೈದ್ಯ ಅಭಿಜಿತ್ ಸಾಳ್ವಿ ಮತ್ತು ಸಾಮಾಜಿಕ ಜಾಲತಾಣ ನಿರ್ವಾಹಕ ತಂಡದ ಸದಸ್ಯ ಆಕಾಶ್ ಮಾನೆ ಅವರು ಸೋಂಕಿತರಾಗಿದ್ದು, ಪ್ರತ್ಯೇಕವಾಸದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.