ADVERTISEMENT

IPL 2022 RR vs MI: ಸತತ 8 ಸೋಲಿನ ಬಳಿಕ ಮುಂಬೈ ಗೆಲುವಿನ 'ಸೂರ್ಯ' ಉದಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಏಪ್ರಿಲ್ 2022, 18:29 IST
Last Updated 30 ಏಪ್ರಿಲ್ 2022, 18:29 IST
   

ಮುಂಬೈ: ಸೂರ್ಯಕುಮಾರ್ ಯಾದವ್ ಸಮಯೋಚಿತ ಅರ್ಧಶತಕದ (51) ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.

ಇದರೊಂದಿಗೆ ಸತತ ಎಂಟು ಸೋಲುಗಳ ಮುಖಭಂಗಕ್ಕೆ ಒಳಗಾಗಿದ್ದ ರೋಹಿತ್ ಶರ್ಮಾ ಬಳಗವು ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಖಾತೆ ತೆರೆದುಕೊಂಡಿದೆ.

ಅಲ್ಲದೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮುಂಬೈ ನಾಯಕ ರೋಹಿತ್ ಶರ್ಮಾಗೆ ಗೆಲುವಿನ ಉಡುಗೊರೆ ಲಭಿಸಿದೆ.

ಅತ್ತ ಈ ಸೋಲಿನ ಹೊರತಾಗಿಯೂ ಒಂಬತ್ತು ಪಂದ್ಯಗಳಲ್ಲಿ 12 ಅಂಕ ಹೊಂದಿರುವ ರಾಜಸ್ಥಾನ್, ಎರಡನೇ ಸ್ಥಾನ ಕಾಯ್ದುಕೊಂಡಿದೆ.

ADVERTISEMENT

ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್, ಜೋಸ್ ಬಟ್ಲರ್ ಅರ್ಧಶತಕದ (67) ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು.

ಬಳಿಕ ಗುರಿ ಬೆನ್ನತ್ತಿದ ಮುಂಬೈ ಇನ್ನೂ ನಾಲ್ಕು ಎಸೆತಗಳು ಬಾಕಿ ಉಳಿದಿರುವಂತೆಯೇ 19.2 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಮುಂಬೈಗೆ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ (2) ರೂಪದಲ್ಲಿ ಆಘಾತ ಎದುರಾಗಿತ್ತು.

ಇಶಾನ್ ಕಿಶನ್ (26 ರನ್, 18 ಎಸೆತ, 4 ಬೌಂಡರಿ, 1 ಸಿಕ್ಸರ್) ಸ್ಪಲ್ವ ಹೊತ್ತು ಪ್ರಭಾವಿ ಎನಿಸಿದರೂ ಅದೇ ಆವೇಗ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.

ಈ ಹಂತದಲ್ಲಿ ಜೊತೆಗೂಡಿದ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ತಂಡಕ್ಕೆ ಆಸರೆಯಾದರು. ಧನಾತ್ಮಕ ಚಿಂತನೆಯೊಂದಿಗೆ ಬ್ಯಾಟ್ ಬೀಸಿದ ಈ ಜೋಡಿ ಮೂರನೇ ವಿಕೆಟ್‌ಗೆ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು.

ಈ ಮೂಲಕ ರಾಜಸ್ಥಾನ್ ತಂಡದ ಮೇಲೆ ಒತ್ತಡವನ್ನು ಸೃಷ್ಟಿ ಮಾಡಿದರು. ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು.

ಅಲ್ಲದೆ ಮೂರನೇ ವಿಕೆಟ್‌ಗೆ ತಿಲಕ್ ಜೊತೆ 81 ರನ್‌ಗಳ ಜೊತೆಯಾಟ ಕಟ್ಟಿದರು. 39 ಎಸೆತಗಳನ್ನು ಎದುರಿಸಿದ ಸೂರ್ಯ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು.

ಆದರೆ ಸೂರ್ಯ ಬೆನ್ನಲ್ಲೇ ತಿಲಕ್ ವಿಕೆಟ್ ಕಳೆದುಕೊಂಡಿರುವುದು ಪಂದ್ಯ ರೋಚಕ ಹಂತ ತಲುಪಲು ಕಾರಣವಾಯಿತು.

ಕೊನೆಯ ಹಂತದಲ್ಲಿ ಟಿಮ್ ಡೇವಿಡ್ (ಅಜೇಯ 20, 9 ಎಸೆತ) ಹಾಗೂ ಕೀರನ್ ಪೊಲಾರ್ಡ್ (10) ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದರು. ಬಳಿಕ ಕೊನೆಯ ಓವರ್‌ನಲ್ಲಿ ಡ್ಯಾನಿಯಲ್ ಸ್ಯಾಮ್ಸ್ (6*) ಗೆಲುವಿನ ಸಿಕ್ಸರ್ ಬಾರಿಸಿದರು.

ಬಟ್ಲರ್ ಮಗದೊಂದು ಅರ್ಧಶತಕ...

ಈ ಮೊದಲುಬಟ್ಲರ್ ಮಗದೊಂದು ಆಕರ್ಷಕ ಅರ್ಧಶತಕದ (67) ನೆರವಿನಿಂದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ರಾಜಸ್ಥಾನ್ ನಿಧಾನಗತಿಯ ಆರಂಭ ಪಡೆಯಿತು. ದೇವದತ್ ಪಡಿಕ್ಕಲ್ (15) ನಿರೀಕ್ಷೆ ಮುಟ್ಟಲಿಲ್ಲ.

ನಾಯಕ ಸಂಜು ಸ್ಯಾಮ್ಸನ್ ಎರಡು ಸಿಕ್ಸರ್ ಬಾರಿಸಿ (16 ರನ್, 7 ಎಸೆತ) ಔಟ್ ಆದರು. ಡೆರಿಲ್ ಮಿಚೆಲ್ (17) ಪ್ರಭಾವಿ ಎನಿಸಿಕೊಳ್ಳಲಿಲ್ಲ.

ಅತ್ತ ವಿಕೆಟ್‌ನ ಇನ್ನೊಂದು ತುದಿಯಿಂದ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದ ಬಟ್ಲರ್ ಬಳಿಕ ಅಬ್ಬರಿಸಿದರು. ಅಲ್ಲದೆ ಹೃತಿಕ್ ಶೋಕಿನ್ ಎಸೆದ ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ ಸತತ ನಾಲ್ಕು ಸಿಕ್ಸರ್ ಸಿಡಿಸಿ ಅಬ್ಬರಿಸಿದರು.

ಈ ಮೂಲಕ ಅರ್ಧಶತಕ ಪೂರೈಸಿದರು. ಆದರೆ ಅದೇ ಓವರ್‌ನ ಐದನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. 52 ಎಸೆತಗಳನ್ನು ಎದುರಿಸಿದ ಬಟ್ಲರ್ ಐದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ರವಿಚಂದ್ರನ್ ಅಶ್ವಿನ್ 21 ರನ್‌ಗಳ (8 ಎಸೆತ, 3 ಬೌಂಡರಿ, 1 ಸಿಕ್ಸರ್) ಉಪಯುಕ್ತ ಕಾಣಿಕೆ ನೀಡಿದರು. ಆದರೆ ಶಿಮ್ರಾನ್ ಹೆಟ್ಮೆಯರ್ (ಅಜೇಯ 6, 14 ಎಸೆತ) ಹಾಗೂ ರಿಯಾನ್ ಪರಾಗ್‌ (3) ಮಿಂಚಲಾಗಲಿಲ್ಲ.

ಅಂತಿಮವಾಗಿ ಆರು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಮುಂಬೈ ಪರ ಹೃತಿಕ್ ಶೋಕಿನ್ ಹಾಗೂ ರಿಲೆ ಮೆರೆಡಿತ್ ತಲಾ ಎರಡು ವಿಕೆಟ್ ಪಡೆದರು.

ಮುಂಬೈ ಫೀಲ್ಡಿಂಗ್ ಆಯ್ಕೆ...

ಈ ಮೊದಲುಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯವನ್ನು ರಾಜಸ್ಥಾನ್ ತಂಡವು ಈಚೆಗೆ ನಿಧನರಾದ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರಿಗೆ ಅರ್ಪಿಸಿದೆ.

ಇದುವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ಆರು ಗೆಲುವು ದಾಖಲಿಸಿರುವ ರಾಜಸ್ಥಾನ್, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಅತ್ತ ಸತತ ಎಂಟು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಮುಂಬೈ ಮೊದಲ ಗೆಲುವಿನ ಹುಡುಕಾಟದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.