ADVERTISEMENT

6,1,6,0,6,6: ರಶೀದ್-ತೇವಾಟಿಯಾ ಲಾಸ್ಟ್ ಓವರ್ ಥ್ರಿಲ್ಲರ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಏಪ್ರಿಲ್ 2022, 11:04 IST
Last Updated 28 ಏಪ್ರಿಲ್ 2022, 11:04 IST
ರಶೀದ್ ಖಾನ್ ಹಾಗೂ ರಾಹುಲ್ ತೇವಾಟಿಯಾ
ರಶೀದ್ ಖಾನ್ ಹಾಗೂ ರಾಹುಲ್ ತೇವಾಟಿಯಾ   

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

196 ರನ್ ಗುರಿ ಬೆನ್ನಟ್ಟಿದ್ದ ಗುಜರಾತ್, ಉಮ್ರಾನ್ ಮಲಿಕ್ (25ಕ್ಕೆ 5 ವಿಕೆಟ್) ಮಾರಕ ದಾಳಿಗೆ ಸಿಲುಕಿ 16 ಓವರ್‌ಗಳಲ್ಲಿ 140 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆದರೆ ಮುರಿಯದ ಆರನೇ ವಿಕೆಟ್‌ಗೆ 24 ಎಸೆತಗಳಲ್ಲಿ 59 ರನ್‌ಗಳ ಜೊತೆಯಾಟ ಕಟ್ಟಿದ ರಾಹುಲ್ ತೇವಾಟಿಯಾ ಹಾಗೂ ರಶೀದ್ ಖಾನ್, ಹೈದರಾಬಾದ್ ಕೈಯಿಂದ ಜಯವನ್ನು ಕಸಿದುಕೊಂಡರು.

ಮಾರ್ಕೊ ಜಾನ್ಸೆನ್ ಎಸೆದ ಅಂತಿಮ ಓವರ್‌ನಲ್ಲಿ ಗೆಲುವಿಗೆ 22 ರನ್ ಬೇಕಾಗಿತ್ತು. ಮೊದಲ ಎಸೆತವನ್ನು ತೇವಾಟಿಯಾ ಸಿಕ್ಸರ್‌ಗೆ ಅಟ್ಟಿದರು. ಎರಡನೇ ಎಸೆತದಲ್ಲಿ ಒಂಟಿ ರನ್ ಗಳಿಸಿದರು.

ಬಳಿಕ ಅಂತಿಮ ನಾಲ್ಕು ಎಸೆತಗಳಲ್ಲಿ ಮೂರು ಸಿಕ್ಸರ್ ಸಿಡಿಸಿದ ರಶೀದ್ ಗುಜರಾತ್‌ಗೆ ರೋಮಾಂಚಕ ಜಯ ಗಳಿಸಿಕೊಟ್ಟರು. ಕೇವಲ 11 ಎಸೆತಗಳನ್ನು ಎದುರಿಸಿದ್ದ ರಶೀದ್ ನಾಲ್ಕು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿ ಔಟಾಗದೆ ಉಳಿದರು.

ಕೆಲವು ದಿನಗಳ ಹಿಂದೆಯಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವೂ ರಶೀದ್ 21 ಎಸೆತಗಳಲ್ಲಿ 40 ರನ್ (2 ಬೌಂಡರಿ, 3 ಸಿಕ್ಸರ್) ಗಳಿಸಿ ತಂಡದ ಗೆಲುವಿನಲ್ಲಿ ಅಮೂಲ್ಯ ಕಾಣಿಕೆ ನೀಡಿದ್ದರು. ಈ ಮೂಲಕ ತಾವೊಬ್ಬ ಆಲ್‌ರೌಂಡರ್ ಎಂಬುದನ್ನು ಸಾಬೀತು ಮಾಡಿದ್ದಾರೆ.

ಇನ್ನೊಂದೆಡೆ ತೇವಾಟಿಯಾ 21 ಎಸೆತಗಳಲ್ಲಿ ಅಜೇಯ 40 ರನ್ (4 ಬೌಂಡರಿ, 2 ಸಿಕ್ಸರ್) ಗಳಿಸಿದರು. ಇತ್ತೀಚೆಗೆ ಪಂಜಾಬ್ ಕಿಂಗ್ಸ್ ವಿರುದ್ಧ ಕೊನೆಯ ಎರಡು ಎಸೆತಗಳನ್ನು ಸಿಕ್ಸರ್‌‌ಗೆ ಅಟ್ಟಿದ್ದ ತೇವಾಟಿಯಾ ರೋಚಕ ಗೆಲುವು ದಾಖಲಿಸಲು ನೆರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.