ADVERTISEMENT

IPL 2022: ನಾಯಕತ್ವ ಹಸ್ತಾಂತರ ವಿಚಾರ ಜಡೇಜಗೆ ಮೊದಲೇ ತಿಳಿಸಲಾಗಿತ್ತು: ಧೋನಿ

ಐಎಎನ್ಎಸ್
Published 2 ಮೇ 2022, 10:34 IST
Last Updated 2 ಮೇ 2022, 10:34 IST
ರವೀಂದ್ರ ಜಡೇಜ ಹಾಗೂ ಮಹೇಂದ್ರ ಸಿಂಗ್ ಧೋನಿ
ರವೀಂದ್ರ ಜಡೇಜ ಹಾಗೂ ಮಹೇಂದ್ರ ಸಿಂಗ್ ಧೋನಿ   

ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಸ್ಥಾನವನ್ನು ಆಲ್‌ರೌಂಡರ್ ರವೀಂದ್ರ ಜಡೇಜ ಅವರಿಗೆ ಹಸ್ತಾಂತರ ಮಾಡುವ ಕುರಿತು ಮೊದಲೇ ತಿಳಿಸಲಾಗಿತ್ತು ಎಂದು ಮಹೇಂದ್ರ ಸಿಂಗ್ ಧೋನಿ ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ 13 ರನ್ ಅಂತರದ ಗೆಲುವು ದಾಖಲಿಸಿತ್ತು. ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮತ್ತೆ ಸಿಎಸ್‌ಕೆ ನಾಯಕನ ಪಟ್ಟ ವಹಿಸಿರುವ ಕುರಿತು ನಾಯಕ ಧೋನಿ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ:

'ಕಳೆದ ವರ್ಷವೇ ರವೀಂದ್ರ ಜಡೇಜ ಅವರಿಗೆ ಈ ವರ್ಷ ನಾಯಕರಾಗುತ್ತಾರೆ ಎಂದು ತಿಳಿಸಲಾಗಿತ್ತು. ಹಾಗಾಗಿ ಸಿದ್ಧರಾಗಲು ಸಾಕಷ್ಟು ಸಮಯವನ್ನು ಪಡೆದಿದ್ದರು. ಅವರು ತಂಡವನ್ನು ಮುನ್ನಡೆಸಬೇಕು ಮತ್ತು ನಾಯಕತ್ವ ಹಸ್ತಾಂತರ ಪ್ರಕ್ರಿಯೆ ಸುಗಮವಾಗಿ ನಡೆಯಬೇಕು ಎಂದು ನಾನು ಬಯಸಿದ್ದೆ. ಮೊದಲೆರಡು ಪಂದ್ಯಗಳಲ್ಲಿ ನಾನು ನೆರವು ಮಾಡಿದ್ದೆ. ಬಳಿಕ ಸಂಪೂರ್ಣ ಜವಾಬ್ದಾರಿಯನ್ನು ಜಡೇಜ ಅವರಿಗೆ ಬಿಟ್ಟು ಕೊಡಲಾಯಿತು' ಎಂದು ಹೇಳಿದ್ದಾರೆ.

ADVERTISEMENT

'ಟೂರ್ನಿ ಅಂತ್ಯದಲ್ಲಿ ನಾಯಕತ್ವವನ್ನು ಬೇರೆಯವರು ಮಾಡಿದ್ದಾರೆ. ನಾನು ಬರೀ ಟಾಸ್‌ಗೆ ಮಾತ್ರ ಹೋಗುತ್ತಿದ್ದೆ ಎಂಬ ಭಾವನೆ ಜಡೇಜ ಅವರಲ್ಲಿ ಉಂಟಾಗಬಾರದು. ಈ ಕಾರಣಕ್ಕಾಗಿ ಸಂಪೂರ್ಣವಾಗಿ ನಾಯಕತ್ವ ಹಸ್ತಾಂತರವನ್ನು ಬಯಸಿದ್ದೆ. ಏಕೆಂದರೆ ಎಲ್ಲವನ್ನು ಹೇಳಿಕೊಡಲು ಸಾಧ್ಯವಿಲ್ಲ. ಮೈದಾನದಲ್ಲಿ ನೀವೇ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ಆ ನಿರ್ಧಾರಗಳಿಗೆ ಸಂಪೂರ್ಣ ಹೊಣೆ ವಹಿಸಬೇಕು' ಎಂದು ಹೇಳಿದ್ದಾರೆ.

ಆದರೆ ನಾಯಕತ್ವ ಜವಾಬ್ದಾರಿಯು ಜಡೇಜ ಮೇಲೆ ಹೆಚ್ಚಿನ ಹೊರೆಯನ್ನುಂಟು ಮಾಡಿತು ಎಂದು ಧೋನಿ ವಿವರಿಸಿದರು. 'ಜಡೇಜ ಅವರಿಗೆ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೇಲೆ ಶ್ರದ್ಧೆ ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ಅವರ ಆಟದ ಮೇಲೆ ಅಡ್ಡ ಪರಿಣಾಮ ಬೀರಿತು. ಕಪ್ತಾನಗಿರಿಯ ಹೊರೆಯಿಲ್ಲದೆ ನಿಮಗೆ ನಿಮ್ಮ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾದರೆ ತಂಡದ ಪಾಲಿಗೆ ಅದೇ ಮುಖ್ಯವೆನಿಸುತ್ತದೆ' ಎಂದು ತಿಳಿಸಿದ್ದಾರೆ.

ಆದರೆ ನಾಯಕತ್ವ ಬದಲಾವಣೆಯಿಂದ ಮಾತ್ರ ಗೆಲುವು ದಾಖಲಿಸಲು ಸಾಧ್ಯವಾಗಿದೆ ಎಂಬುದನ್ನು ಧೋನಿ ಒಪ್ಪಿಕೊಳ್ಳಲಿಲ್ಲ.

'ನಾನು ವಿಭಿನ್ನವಾಗಿ ಏನೂ ಮಾಡಿಲ್ಲ. ಈ ವಿಕೆಟ್‌ನಲ್ಲಿ ಡಿಫೆಂಡ್ ಮಾಡುವ ಮೊತ್ತ ಇದಾಗಿತ್ತು. ನಾಯಕನ ಬದಲಾವಣೆಯಿಂದ ಹೆಚ್ಚಿನ ಬದಲಾವಣೆಯಾಗಿಲ್ಲ. ನಾವು ಉತ್ತಮ ಆರಂಭವನ್ನು ಪಡೆದು ದೊಡ್ಡ ಮೊತ್ತ ಕಲೆ ಹಾಕಿದ್ದೇವೆ. ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ಸ್ಪಿನ್ನರ್‌ಗಳು ಜವಾಬ್ದಾರಿಯನ್ನು ನಿರ್ವಹಿಸಿದರು. ಇದರಿಂದ ಗೆಲುವು ಸಾಧ್ಯವಾಗಿದೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.