ADVERTISEMENT

IPL: ಸುದರ್ಶನ್‌ ಭರ್ಜರಿ ಬ್ಯಾಟಿಂಗ್, ಚೆನ್ನೈ ಗೆಲುವಿಗೆ 215 ರನ್ ಗುರಿ ನೀಡಿದ ಗುಜರಾತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮೇ 2023, 16:04 IST
Last Updated 29 ಮೇ 2023, 16:04 IST
   

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಹದಿನಾರನೇ ಆವೃತ್ತಿ ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸುತ್ತಿವೆ.

ಗುಜರಾತ್ ಟೈಟನ್ಸ್‌ ವಿರುದ್ಧ ಟಾಸ್‌ ಗೆದ್ದ ಚೆನ್ನೈ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಟೈಟನ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿದೆ.

ಯುವ ಆಟಗಾರ ಸಾಯ್ ಸುದರ್ಶನ್ 47 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ ಸಹಿತ 96 ರನ್ ಗಳಿಸಿ ಶತಕ ವಂಚಿತರಾದರು. ವೃದ್ಧಿಮಾನ್ ಸಹಾ 54, ಶುಭ್​ಮನ್ ಗಿಲ್ 39, ಹಾರ್ದಿಕ್ ಪಾಂಡ್ಯ ಔಟಾಗದೆ 21 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ADVERTISEMENT

ಚೆನ್ನೈ ಪರ ಮತೀಶ ಪತಿರಾನ 2, ರವೀಂದ್ರ ಜಡೇಜ ಹಾಗೂ ದೀಪಕ್ ಚಾಹರ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಭಾನುವಾರ ರಾತ್ರಿ ನಡೆಯಬೇಕಿದ್ದ ಐಪಿಎಲ್‌ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಇದರಿಂದ ಪಂದ್ಯವನ್ನು ಮೀಸಲು ದಿನವಾದ ಇಂದಿಗೆ (ಸೋಮವಾರ) ಮುಂದೂಡಲಾಯಿತ್ತು. ಐಪಿಎಲ್‌ ಟೂರ್ನಿಯ 16 ವರ್ಷಗಳ ಇತಿಹಾಸದಲ್ಲಿ ಫೈನಲ್‌ ಪಂದ್ಯ ಮೀಸಲು ದಿನಕ್ಕೆ ಮುಂದೂಡಿದ್ದು ಇದೇ ಮೊದಲು.

ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡವು ಸತತ ಎರಡನೇ ಬಾರಿ ಪ್ರಶಸ್ತಿ ಜಯಿಸುವ ಛಲದಲ್ಲಿದೆ. ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡವು ಐದನೇ ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.