ಮುಂಬೈ: ವೆಂಕಟೇಶ್ ಅಯ್ಯರ್ ಗಳಿಸಿದ ಅಮೋಘ ಶತಕವನ್ನು ಗೆಲುವಿನ ಮೆಟ್ಟಿಲಾಗಿಸಿಕೊಳ್ಳುವಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿಫಲವಾಯಿತು.
ಇಶಾನ್ ಕಿಶನ್ ಅರ್ಧಶತಕ ಮತ್ತು ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಬಲದಿಂದ ಮುಂಬೈ ಇಂಡಿಯನ್ಸ್ ತಂಡವು ಐದು ವಿಕೆಟ್‌ಗಳಿಂದ ಕೋಲ್ಕತ್ತ ಎದುರು ಜಯಿಸಿತು.
ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಮುಂಬೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೊಟ್ಟೆನೋವಿನಿಂದಾಗಿ ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಲಿಲ್ಲ ಹಾಗೂ ಫೀಲ್ಡಿಂಗ್ ಮಾಡಲಿಲ್ಲ. ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಿದರು.
ಕೆಕೆಆರ್ ತಂಡವು ವೆಂಕಟೇಶ್ ಅಯ್ಯರ್ ಗಳಿಸಿದ (104; 51ಎ, 4X6, 6X9) ಅಬ್ಬರದ ಶತಕದ ಬಲದಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 185 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡವು 17.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 186 ರನ್ ಗಳಿಸಿತು.
‘ಇಂಪ್ಯಾಕ್ಟ್ ಆಟಗಾರ’ನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮೊದಲ ವಿಕೆಟ್ ಜೊತೆಯಾಟದಲ್ಲಿ 65 ರನ್ ಸೇರಿಸಿದರು. ಇಶಾನ್ 25 ಎಸೆತಗಳಲ್ಲಿ 58 ರನ್ ಗಳಿಸಿದರು. ಐದು ಬೌಂಡರಿ ಹಾಗೂ ಐದು ಸಿಕ್ಸರ್ ಹೊಡೆದರು.
ಕಳೆದ ಪಂದ್ಯಗಳಲ್ಲಿ ವಿಫಲರಾಗಿದ್ದ ಸೂರ್ಯ ಇಲ್ಲಿ ಲಯ ಕಂಡುಕೊಂಡರು. ಮೂರು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳಿದ್ದ 43 ರನ್‌ಗಳನ್ನು ಗಳಿಸಿದರು. ತಿಲಕ್ ವರ್ಮಾ ಹಾಗೂ ಟಿಮ್ ಡೇವಿಡ್ ಕೂಡ ಉಪಯುಕ್ತ ಕಾಣಿಕೆ ನೀಡಿ ಮುಂಬೈಗೆ ಆಸರೆಯಾದರು.
ಅಯ್ಯರ್ ಅಬ್ಬರ: ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಎರಡನೇ ಓವರ್‌ನಲ್ಲಿಯೇ ಜಗದೀಶನ್ ವಿಕೆಟ್ ಗಳಿಸಿದ ಕ್ಯಾಮರಾನ್ ಗ್ರೀನ್ ಕೇಕೆ ಹಾಕಿದರು. ಆದರೆ ಕ್ರೀಸ್‌ಗೆ ಬಂದ ವೆಂಕಟೇಶ್ ಏಕಾಂಗಿ ಹೋರಾಟ ಮಾಡಿದರು. ಅವರ ಬ್ಯಾಟಿಂಗ್ ಅಬ್ಬರಕ್ಕೆ ಬೌಲರ್‌ಗಳು ದಂಗಾದರು.
203.92 ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು. ಇನ್ನೊಂದು ಬದಿಯಲ್ಲಿ ವಿಕೆಟ್‌ಗಳು ಪತನವಾಗುತ್ತಿದ್ದರೂ ವೆಂಕಟೇಶ್ ಮಾತ್ರ ಎದೆಗುಂದದೇ ಬ್ಯಾಟ್ ಬೀಸಿದರು. 13ನೇ ಓವರ್‌ನಲ್ಲಿ ವೆಂಕಟೇಶ್ ಹೊಡೆದ ಚೆಂಡನ್ನು ಕ್ಯಾಚ್ ಮಾಡಲು ತಿಲಕ್‌ವರ್ಮಾ ಪ್ರಯತ್ನಿಸಿದರು. ಆದರೆ ಫಲ ಸಿಗಲಿಲ್ಲ. ಈ ಜೀವದಾನವನ್ನು ಅವರು ಸಮರ್ಥವಾಗಿ ಬಳಸಿಕೊಂಡರು. ಪ್ರಸಕ್ತ ಟೂರ್ನಿಯಲ್ಲಿ ಎರಡನೇ ಶತಕ ದಾಖಲಾಗಲು ಕಾರಣರಾದರು.
ಈಚೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಹ್ಯಾರಿ ಬ್ರೂಕ್ ಶತಕ ಗಳಿಸಿದ ಮೊದಲ ಆಟಗಾರನಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.