ADVERTISEMENT

IPL 2023 PBKS v MI: ಪಂಜಾಬ್ ವಿರುದ್ಧ ಟಾಸ್ ಗೆದ್ದ ಮುಂಬೈ, ಬೌಲಿಂಗ್ ಆಯ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮೇ 2023, 14:10 IST
Last Updated 3 ಮೇ 2023, 14:10 IST
ರೋಹಿತ್ ಶರ್ಮಾ ಮತ್ತು ಶಿಖರ್ ಧವನ್
ರೋಹಿತ್ ಶರ್ಮಾ ಮತ್ತು ಶಿಖರ್ ಧವನ್   ಐಪಿಎಲ್ ಟ್ವಿಟರ್ ಚಿತ್ರ

ಮೊಹಾಲಿ: ಇಂಡಿಯನ್ ಪ್ರೀಮಿಯರ್‌ ಲೀಗ್‌ನ (ಐಪಿಎಲ್) ಮಹತ್ವದ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್‌ ತಂಡಗಳು ಸೆಣಸಾಟ ನಡೆಸುತ್ತಿವೆ.

ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಟಾಸ್‌ ಗೆದ್ದಿರುವ ಮುಂಬೈ, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಟೂರ್ನಿಯಲ್ಲಿ ಏರಿಳಿತ ಕಾಣುತ್ತಿರುವ ಪಂಜಾಬ್‌ ವಿರುದ್ಧದ ಈ ಪಂದ್ಯ ಮುಂಬೈ ತಂಡದ ಸಾಮರ್ಥ್ಯಕ್ಕೆ ಸತ್ವಪರೀಕ್ಷೆಯಾಗಲಿದೆ.

ADVERTISEMENT

ಪಂದ್ಯ ಗೆದ್ದಲ್ಲಿ ಮುಂಬೈ ತಂಡ ಪಾಯಿಂಟ್‌ ಪಟ್ಟಿಯಲ್ಲಿ ಬಡ್ತಿ ಪಡೆಯಲಿದೆ. ಸೋತಲ್ಲಿ ಕಳೆದ ಸಲದಂತೆ ತಳಕ್ಕಿಳಿಯುವ ಆತಂಕ ಎದುರಾಗಲಿದೆ. ಕಳೆದ ಆವೃತಿಯಲ್ಲಿ ಮುಂಬೈ ಕೊನೆಯ (10ನೇ) ಸ್ಥಾನ ಪಡೆದಿತ್ತು. ಸದ್ಯ ಎಂಟು ಪಂದ್ಯಗಳಿಂದ ಎಂಟು ಪಾಯಿಂಟ್ಸ್‌ ಗಳಿಸಿರುವ ರೋಹಿತ್ ಬಳಗ ಏಳನೇ ಸ್ಥಾನದಲ್ಲಿದೆ. ‌

ವಾಂಖೆಡೆಯಲ್ಲಿ ಎರಡು ದಿನಗಳ ಹಿಂದೆ ರಾಯಲ್ಸ್ ತಂಡದ 212 ರನ್‌ಗಳ ಗುರಿಯನ್ನು ಮೂರು ಎಸೆತಗಳಿರುವಂತೆ ದಾಟಿದ್ದು ಮುಂಬೈ ತಂಡಕ್ಕೆ ಅಗತ್ಯವಿದ್ದ ‘ಟಾನಿಕ್‌’ ಒದಗಿಸಿದೆ.

ಸಿಂಗಪುರ ಸಂಜಾತ ಆಸ್ಟ್ರೇಲಿಯಾ ಆಟಗಾರ ಟಿಮ್ ಡೇವಿಡ್ 14 ಎಸೆತಗಳಲ್ಲಿ 45 ರನ್‌ಗಳ ಸ್ಫೋಟಕ ಇನಿಂಗ್ಸ್‌ ಆಡಿದ್ದರಿಂದ ಮುಂಬೈ ಇಂಡಿಯನ್ಸ್ ಸೋಲಿನ ದವಡೆಯಿಂದ ಪಾರಾಗಿ ಸಂಭ್ರಮ ಆಚರಿಸಿತ್ತು. ಸೂರ್ಯಕುಮಾರ್ ಯಾದವ್, ಕ್ಯಾಮರೂನ್ ಗ್ರೀನ್, ಇಶಾನ್ ಕಿಶನ್, ತಿಲಕ್ ವರ್ಮ ಅವರೂ ಉಪಯುಕ್ತ ಕಾಣಿಕೆ ನೀಡಿದ್ದರು. ಆದರೆ ನಾಯಕ ರೋಹಿತ್ ಶರ್ಮಾ ಅವರಿಂದ ಸ್ಥಿರ ಪ್ರದರ್ಶನ ಬರುತ್ತಿಲ್ಲ. ಅವರ ಉತ್ತಮ ಇನಿಂಗ್ಸ್‌ ಆಡಿದಲ್ಲಿ ತಂಡದ ವಿಶ್ವಾಸ ವೃದ್ಧಿಸಲಿದೆ.

ಕಿಂಗ್ಸ್ ತಂಡ ಆಕ್ರಮಣಕಾರಿ ಆಟಕ್ಕೆ ಹೆಸರು ಪಡೆದಿದೆ. ಸಮಸ್ಯೆ ಎಂದರೆ ಮೇಲಿನ ಕ್ರಮಾಂಕದ ಆಟಗಾರರ ಪರದಾಟ. ಶಿಖರ್ ಧವನ್ ಮತ್ತು ಕೆಲಮಟ್ಟಿಗೆ ಅವರ ಆರಂಭದ ಜೊತೆಗಾರ ಪ್ರಭಸಿಮ್ರನ್ ಸಿಂಗ್ ಬಿಟ್ಟರೆ ಉಳಿದವರಿಂದ ಸ್ಥಿರ ಪ್ರದರ್ಶನ ಬಂದಿಲ್ಲ. ಆದರೆ ಏ. 30ರಂದು ಸಿಎಸ್‌ಕೆ ವಿರುದ್ಧ ಚೆಪಾಕ್‌ನಲ್ಲೇ 200 ರನ್‌ಗಳ ಗುರಿ ದಾಟಿ ಜಯಗಳಿಸಿರುವುದು ತಂಡದಲ್ಲಿ ಚೈತನ್ಯ ಮೂಡಿಸಿದೆ.

ಧವನ್– ಪ್ರಭಸಿಮ್ರನ್‌ ಉತ್ತಮ ಆರಂಭದ ನಂತರ ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್‌ ಕರನ್ ಮತ್ತು ವಿಕೆಟ್ ಕೀಪರ್‌– ಬ್ಯಾಟರ್‌ ಜೀತೇಶ್ ಶರ್ಮ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದ್ದರು. ಪಂಜಾಬ್‌ ಬ್ಯಾಟರ್‌ಗಳು ವೇಗಿ ಜೋಫ್ರಾ ಆರ್ಚರ್ ದಾಳಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.