ADVERTISEMENT

IPL 2024 | ಕ್ರಿಕೆಟ್‌ಗೆ ಮರಳಿದ ಪಂತ್; ಎದ್ದು ನಿಂತು ಹುರಿದುಂಬಿಸಿದ ಅಭಿಮಾನಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮಾರ್ಚ್ 2024, 11:19 IST
Last Updated 23 ಮಾರ್ಚ್ 2024, 11:19 IST
<div class="paragraphs"><p>ಕ್ರೀಸ್‌ಗೆ ಬರುವಾಗ ಆಕಾಶದತ್ತ ನೋಡಿದ ರಿಷಭ್‌ ಪಂತ್‌</p></div>

ಕ್ರೀಸ್‌ಗೆ ಬರುವಾಗ ಆಕಾಶದತ್ತ ನೋಡಿದ ರಿಷಭ್‌ ಪಂತ್‌

   

ಚಂಡೀಗಢ: ಕಾರು ಅಪಘಾತದ ಬಳಿಕ ಚೇತರಿಸಿಕೊಂಡಿರುವ ವಿಕೆಟ್‌ಕೀಪರ್–ಬ್ಯಾಟರ್‌ ರಿಷಭ್‌ ಪಂತ್‌, ಐಪಿಎಲ್ ಪಂದ್ಯದ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ.

ಚಂಡೀಗಢದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕನಾಗಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್‌ ಅಂತರರಾಷ್ಟ್ರೀಯ ಕ್ರೀಡಾಂಗಣ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು.

ADVERTISEMENT

ಮೊದಲು ಬ್ಯಾಟಿಂಗ್ ಮಾಡುತ್ತಿರುವ ಡೆಲ್ಲಿ ಪಡೆಯ ಎರಡನೇ ವಿಕೆಟ್‌ ಪತನವಾದಾಗ ಕ್ರೀಸ್‌ಗೆ ಬಂದ ಪಂತ್‌ಗೆ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು, ಸಹ ಆಟಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿ ಶುಭಕೋರಿದರು. ಈ ಕ್ಷಣದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ಹರಿದಾಡುತ್ತಿವೆ.

ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಅವರು 13 ಎಸೆತಗಳಲ್ಲಿ ಎರಡು ಬೌಂಡರಿ ಸಹಿತ 18 ರನ್ ಗಳಿಸಿ ಔಟಾಗಿದ್ದಾರೆ. 13 ಓವರ್‌ಗಳ ಅಂತ್ಯಕ್ಕೆ ಡೆಲ್ಲಿ ತಂಡದ ಮೊತ್ತ 4 ವಿಕೆಟ್‌ಗೆ 111 ರನ್‌ ಆಗಿದೆ. ಡೇವಿಡ್‌ ವಾರ್ನರ್‌ (29), ಮಿಚೇಲ್‌ ಮಾರ್ಷ್‌ (19), ಶಾಯ್‌ ಹೋಪ್‌ ಸಹ ಪೆವಿಲಿಯನ್‌ ಸೇರಿಕೊಂಡಿದ್ದಾರೆ.

3 ರನ್ ಗಳಿಸಿರುವ ರಿಕಿ ಭುಯಿ ಮತ್ತು ಇನ್ನೂ ಖಾತೆ ತೆರೆಯದ ಟಿಸ್ಟನ್‌ ಸ್ಟಬ್ಸ್‌ ಕ್ರೀಸ್‌ನಲ್ಲಿದ್ದಾರೆ.

'ಅಚ್ಚರಿ ನೀಡಲು ಹೋಗುವಾಗ ಅಪಘಾತ'
2023ರ ಹೊಸ ವರ್ಷಾಚರಣೆಗೆ ಮನೆಗೆ ತೆರಳಿ ತಮ್ಮ ತಾಯಿಗೆ ಅಚ್ಚರಿ ನೀಡಲು ಹೊರಟಿದ್ದ ರಿಷಭ್‌ ಅವರ ಬಿಎಂಡಬ್ಲ್ಯು ಕಾರು, 2022ರ ಡಿ.30ರ ಬೆಳಗ್ಗೆ ದೆಹಲಿ-ಡೆಹ್ರಾಡೂನ್‌ ಹೆದ್ದಾರಿಯಲ್ಲಿ ಅಪಘಾತವಾಗಿತ್ತು. ಈ ವೇಳೆ ಪಂತ್‌ ಅವರ ತಲೆ, ಕಾಲು, ಬಲಗೈ ಹಾಗೂ ಬೆನ್ನಿಗೆ ಗಾಯವಾತ್ತು.

ರಸ್ತೆ ಗುಂಡಿ ತಪ್ಪಿಸಲು ಹೋದಾಗ, ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಕಕ್ಕೆ ಡಿಕ್ಕಿ ಹೊಡೆದಿದೆ ಎಂದು ಉತ್ತರಾಖಂಡ್‌ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.