ಜೇಮ್ಸ್ ಹೋಪ್ಸ್
ಎಕ್ಸ್ ಚಿತ್ರ
ಮುಲ್ಲನ್‌ಪುರ್: ‘ಕಳೆದ ಹನ್ನೊಂದು ವರ್ಷಗಳಲ್ಲಿ ಫೈನಲ್ ಪ್ರವೇಶದ ಹೊಸ್ತಿಲಲ್ಲಿರುವ ಪಂಜಾಬ್ ಕಿಂಗ್ಸ್ ತಂಡದವರು ಎರಡನೇ ಸ್ಥಾನದಲ್ಲಿದ್ದೇವೆ ಎಂದುಕೊಳ್ಳುವ ಬದಲು, ಗೆಲ್ಲುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು’ ಎಂದು ಪಂಜಾಬ್ ತಂಡದ ಬೌಲಿಂಗ್ ಕೋಚ್ ಜೇಮ್ಸ್ ಹೋಪ್ಸ್ ಸಲಹೆ ನೀಡಿದ್ದಾರೆ.
ಲೀಗ್ ಹಂತದ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಈ ಹಂತಕ್ಕೆ ತಲುಪಿದ ಪಂಜಾಬ್ ತಂಡವು, ಗುರುವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧ ಎಂಟು ವಿಕೆಟ್‌ಗಳ ಅಂತರ ಸೋಲುಂಡಿತು. ಆದರೆ 2ನೇ ಕ್ವಾಲಿಫೈಯರ್ ವಿಜೇತರೊಂದಿಗೆ ಆಡಿ ಗೆದ್ದಲ್ಲಿ ಫೈನಲ್ ಪ್ರವೇಶಿಸುವ ತಂಡದ ಆಸೆ ಜೀವಂತವಾಗಿದೆ. ಹೀಗಾಗಿ ಟ್ರೋಫಿ ಗೆಲ್ಲಲು ಭಾನುವಾರದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಪಂಜಾಬ್ ತಂಡದ್ದಾಗಿದೆ.
‘ನಾವು ಮೊದಲ ಓವರ್ ಉತ್ತಮವಾಗಿ ಆಡಿದೆವು. ಆದರೆ ನಂತರ ವಿಕೆಟ್‌ಗಳನ್ನು ಕಳೆದುಕೊಳ್ಳಲಾರಂಭಿಸಿದೆವು. ಕಂಡ ಸೋಲನ್ನು ಅರಗಿಸಿಕೊಂಡು ಮುಂದೆ ಸಾಗುವ ಕಡೆ ಗಮನ ನೀಡಬೇಕು. ಏಕೆಂದರೆ ನಾಳೆ ಮುಂದಿನ ಪಂದ್ಯ ನಡೆಯುವ ಅಹಮದಾಬಾದ್‌ನತ್ತ ನಾವು ಪ್ರಯಾಣಿಸಬೇಕು. ಜತೆಗೆ ಭಾನುವಾರದ ಪಂದ್ಯಕ್ಕೆ ಕಠಿಣ ಅಭ್ಯಾಸ ನಡೆಸಬೇಕಿದೆ. ಮಂಗಳವಾರ ನಡೆಯುವ ಫೈನಲ್‌ನಲ್ಲಿ ಆರ್‌ಸಿಬಿ ತಂಡವನ್ನು ಮತ್ತೆ ಭೇಟಿಯಾಗುವ ಅವಕಾಶ ನಮಗೆ ಸಿಗುವ ವಿಶ್ವಾಸವಿದೆ’ ಎಂದು ಜೇಮ್ಸ್ ಹೋಪ್ಸ್ ಹೇಳಿದ್ದಾರೆ.
‘ಗುರುವಾರ ರಾತ್ರಿಯ ಪಂದ್ಯದಲ್ಲಿ ನಾವು ಉತ್ತಮವಾಗಿ ಆಡಿಲ್ಲ. ಆದರೆ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶ ಇರುವುದರಿಂದ ಕಠಿಣ ಅಭ್ಯಾಸ ನಡೆಸುವುದು ಅನಿವಾರ್ಯ. ಹಲವು ತಿಂಗಳು ಬೆವರು ಹರಿಸಿದ್ದೇವೆ. ಹೀಗಾಗಿ ನಾವು ಕನಿಷ್ಠ ಎರಡು ಅವಕಾಶಕ್ಕೆ ಅರ್ಹರು ಎಂದು ಭಾವಿಸಿದ್ದೇನೆ. ಆ ಎರಡನೇ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಬ್ಯಾಟರ್‌ಗಳಿಗೆ ಹೆಚ್ಚು ನೆರವಾಗಲಿದೆ. ಹೀಗಾಗಿ ಬೇಗನೆ ಉತ್ತಮ ಸ್ಕೋರ್ ಕಲೆಹಾಕಬೇಕೆಂದರೆ ಕಠಿಣ ಅಭ್ಯಾಸ ಅಗತ್ಯ’ ಎಂದು ಹೋಪ್ಸ್ ಹೇಳಿದ್ದಾರೆ.
ವೇಗಿಗಳಿಗೆ ನೆರವಾಗಿದ್ದ ಚಂಡೀಗಡದ ಮಹಾರಾಜ ಯದವೀಂದ್ರಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದ ಪಿಚ್‌ನಲ್ಲಿ ಪಂಜಾಬ್ ಕಿಂಗ್ಸ್ ಬಹುಬೇಗನೆ ಹಾಗೂ ಅಲ್ಪ ಮೊತ್ತಕ್ಕೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆರ್‌ಸಿಬಿ ಪರವಾಗಿ ಲೆಗ್ ಸ್ಪಿನ್ನರ್ ಸುಯಶ್ ಶರ್ಮಾ ಅವರು ಮಧ್ಯಮ ಕ್ರಮಾಂಕಕ್ಕೆ ಭಾರೀ ಆಘಾತ ನೀಡಿದರು. ತಂಡಕ್ಕೆ ಮರಳಿದ ಜೋಶ್ ಹೇಝಲ್‌ವುಡ್ ಪಂಜಾಬ್ ಬ್ಯಾಟರ್‌ಗಳನ್ನು ಕಾಡಿದರು.
ಗುರುವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಸೋತ ಪಂಜಾಬ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. 14.1 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 101 ರನ್ ಕಲೆಹಾಕಿತು. 27 ಎಸೆತಗಳಲ್ಲಿ 56 ರನ್ ಗಳಿಸಿದ ಫಿಲ್ ಸಾಲ್ಟ್ ಅವರ ಕೊಡುಗೆಯೊಂದಿಗೆ ಆರ್‌ಸಿಬಿ ಕೇವಲ 10 ಓವರ್‌ಗಳಲ್ಲಿ 2ವಿಕೆಟ್ ಕಳೆದುಕೊಂಡು 106 ರನ್ ಕಲೆಹಾಕಿ ಫೈನಲ್ ಪ್ರವೇಶಿಸಿತು. ಆರ್‌ಸಿಬಿ ತಂಡ 2009, 2011, 2016ರಲ್ಲಿ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ಬಾರಿಯಾದರೂ ಕಪ್ ಗೆಲ್ಲುವ ನಿರೀಕ್ಷೆ ಆರ್‌ಸಿಬಿ ಫ್ಯಾನ್‌ಗಳದ್ದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.