ಚೆನ್ನೈ: ಕೋಲ್ಕತ್ತ ನೈಟ್‌ರೈಡರ್ಸ್ ತಂಡದ ಸುನಿಲ್ ನಾರಾಯಣ್ ಮತ್ತು ವರುಣ್ ಚಕ್ರವರ್ತಿ ಅವರ ಸ್ಪಿನ್ ಮೋಡಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶರಣಾಯಿತು.
ಶುಕ್ರವಾರ ಚೆಪಾಕ್ ಕ್ರೀಡಾಂಗಣದಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದ ಚೆನ್ನೈ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 103 ರನ್ ಗಳಿಸಿತು. ಅದಕ್ಕುತ್ತರವಾಗಿ ಕೋಲ್ಕತ್ತ ತಂಡವು 10.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 107 ರನ್ ಗಳಿಸಿ, 8 ವಿಕೆಟ್‌ಗಳಿಂದ ಜಯಿಸಿತು. ಚೆನ್ನೈ ತಂಡಕ್ಕೆ ಇದು ಸತತ ಐದನೇ ಸೋಲು.
ಶಿವಂ ದುಬೆ (ಔಟಾಗದೇ 31; 29ಎ, 4X3) ಅವರು ತಂಡವು ಮೂರಂಕಿ ಮೊತ್ತ ದಾಖಲಿಸಲು ನೆರವಾದರು. ಚೆನ್ನೈ ತಂಡವು ಮೊದಲ ಇನಿಂಗ್ಸ್ ಆಡಿದಾಗ ಗಳಿಸಿದ ಎರಡನೇ ಅತಿ ಕಡಿಮೆ ಮೊತ್ತ ಇದಾಗಿದೆ. ಋತುರಾಜ್ ಗಾಯಕವಾಡ ಅವರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಕಾರಣ ಧೋನಿ ಮತ್ತೆ ನಾಯಕತ್ವ ಅವರು ವಹಿಸಿಕೊಂಡಿದ್ದಾರೆ.
ಟಾಸ್ ಗೆದ್ದ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸುನಿಲ್ (13ಕ್ಕೆ3) ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು. ಅವರಿಗೆ ಸ್ಪಿನ್ನರ್ ವರುಣ್ ಚಕ್ರವರ್ತಿ (22ಕ್ಕೆ2) ಮತ್ತು ಹರ್ಷಿತ್ ರಾಣಾ (16ಕ್ಕೆ2) ಉತ್ತಮ ಜೊತೆ ನೀಡಿದರು. ಚೆನ್ನೈ ಬ್ಯಾಟರ್‌ಗಳು ಆರಂಭದಿಂದಲೇ ತಡಬಡಾಯಿಸಿದರು. ಆರಂಭಿಕ ಜೋಡಿ ರಚಿನ್ ರವೀಂದ್ರ (4; 9ಎ) ಮತ್ತು ಡೆವೊನ್ ಕಾನ್ವೆ (12; 11ಎ, 4X4) ಅವರಿಗೆ ಉತ್ತಮ ಆರಂಭ ನೀಡಲು ಸಾಧ್ಯವಾಗಲಿಲ್ಲ. ನಾಲ್ಕನೇ ಓವರ್‌ನಲ್ಲಿ ಮೋಯಿನ್ ಅಲಿ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಕಾನ್ವೆ ಬಿದ್ದರು. ನಂತರದ ಓವರ್‌ನಲ್ಲಿ ರಚಿನ್ ರವೀಂದ್ರ ಅವರ ವಿಕೆಟ್ ವೇಗಿ ಹರ್ಷಿತ್ ರಾಣಾ ಪಾಲಾಯಿತು.
ರಾಹುಲ್ ತ್ರಿಪಾಠಿ (16; 11ಎ) ಅವರನ್ನು ಕ್ಲೀನ್‌ಬೌಲ್ಡ್ ಮಾಡುವ ಮೂಲಕ ಸುನಿಲ್ ಅವರು ಬೇಟೆ ಆರಂಭಿಸಿದರು. ರವೀಂದ್ರ ಜಡೇಜ ಹಾಗೂ ಮಹೇಂದ್ರಸಿಂಗ್ ಧೋನಿ ಅವರಿಗೂ ಪೆವಿಲಿಯನ್ ದಾರಿ ತೋರಿಸಿದರು.
ಒಂದೆಡೆ ವಿಕೆಟ್‌ಗಳು ಪತನವಾಗುತ್ತಿದ್ದರೂ ಶಿವಂ ದುಬೆ, ಇನಿಂಗ್ಸ್‌ಗೆ ಚೇತರಿಕೆ ನೀಡುವ ಪ್ರಯತ್ನ ಮುಂದುವರಿಸಿದರು. ಅವರೊಂದಿಗೆ ವಿಜಯ್ ಶಂಕರ್ (29; 21ಎ) ಕೂಡ ಸ್ವಲ್ಪ ಹೊತ್ತು ಹೋರಾಡಿದರು. ತಂಡವು 79 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ದುಬೆ ಮತ್ತು ಅನ್ಷುಲ್ ಕಾಂಭೋಜ್ (ಔಟಾಗದೇ 3) ಮುರಿಯದ ಕೊನೆಯ ವಿಕೆಟ್ ಜೊತೆಯಾಟದಲ್ಲಿ 24 ರನ್ ಸೇರಿಸಿದರು. ಚೆನ್ನೈ ತಂಡದ ಇನಿಂಗ್ಸ್‌ನಲ್ಲಿ ದಾಖಲಾಗಿದ್ದು 1 ಸಿಕ್ಸರ್ ಮಾತ್ರ. ಅದನ್ನು ವಿಜಯಶಂಕರ್ ಹೊಡೆದಿದ್ದರು. ಒಟ್ಟು 8 ಬೌಂಡರಿಗಳಷ್ಟೇ ದಾಖಲಾದವು.
ಸಂಕ್ಷಿಪ್ತ ಸ್ಕೋರು: ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಲ್ಲಿ 9ಕ್ಕೆ103 (ರಾಹುಲ್ ತ್ರಿಪಾಠಿ 16, ವಿಜಯಶಂಕರ್ 29, ಶಿವಂ ದುಬೆ ಔಟಾಗದೇ 31, ಹರ್ಷಿತ್ ರಾಣಾ 16ಕ್ಕೆ2, ವರುಣ್ ಚಕ್ರವರ್ತಿ 22ಕ್ಕೆ2, ಸುನಿಲ್ ನಾರಾಯಣ್ 13ಕ್ಕೆ3). ಕೋಲ್ಕತ್ತ ನೈಟ್ ರೈಡರ್ಸ್: 10.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 107 (ಕ್ವಿಂಟನ್ ಡಿ ಕಾಕ್ 23, ಸುನಿಲ್ ನಾರಾಯಣ್ 44, ಅಜಿಂಕ್ಯ ರಹಾನೆ ಔಟಾಗದೇ 20, ರಿಂಕು ಸಿಂಗ್ ಔಟಾಗದೇ 15) ಫಲಿತಾಂಶ: ಕೆಕಆರ್‌ಗೆ 8 ವಿಕೆಟ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.