ಮಹೇಂದ್ರ ಸಿಂಗ್ ಧೋನಿ
(ಪಿಟಿಐ)
ಕೋಲ್ಕತ್ತ (ಪಿಟಿಐ): ತಾವು ಕ್ರಿಕೆಟ್ ಜೀವನದ ಸಂಧ್ಯಾಕಾಲದಲ್ಲಿರುವ ವಿಷಯವನ್ನು ಅಲ್ಲಗೆಳೆಯಲು ಆಗದು. ಆದರೆ ಮುಂದಿನ ಆರರಿಂದ ಎಂಟು ತಿಂಗಳ ಒಳಗೆ, ಕಠಿಣ ಶ್ರಮದ ಒತ್ತಡಕ್ಕೆ ತಮ್ಮ ದೇಹ ಹೇಗೆ ಸ್ಪಂದಿಸುವುದೊ ಅದರ ಆಧಾರದಲ್ಲಿ ತಮ್ಮ ಐಪಿಎಲ್ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ಭಾರತದ ಕ್ರಿಕೆಟ್ ದಿಗ್ಗಜ ಈಡನ್‌ನಲ್ಲಿ ಕೊನೆಯ ಪಂದ್ಯ ಆಡುವರೆಂಬ ನಿರೀಕ್ಷೆಯಲ್ಲಿ ಬುಧವಾರ ಅಭಿಮಾನಿಗಳ ದೊಡ್ಡ ದಂಡೇ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿತ್ತು.
‘ನನ್ನ ಕ್ರಿಕೆಟ್ ಬದುಕಿನುದ್ದಕ್ಕೂ ಅಭಿಮಾನಿಗಳ ಪ್ರೀತಿ ಮತ್ತು ಅಕ್ಕರೆ ತಮಗೆ ಲಭಿಸಿದೆ. ಆದರೆ ನನಗೆ ಈಗ 43 ವರ್ಷ ಎಂಬುದನ್ನು ಮರೆಯುವಂತಿಲ್ಲ. ದೀರ್ಘ ಕಾಲದಿಂದ ಆಡುತ್ತಿದ್ದೇನೆ. ನನ್ನ ಕೊನೆಯ ಪಂದ್ಯ ಯಾವುದು ಇರಬಹುದು ಎಂಬುದು ಅವರಲ್ಲಿ ಬಹುತೇಕರಿಗೆ ಗೊತ್ತಿಲ್ಲ. ಹೀಗಾಗಿ ಅವರು ಕ್ರೀಡಾಂಗಣಕ್ಕೆ ಬಂದು ಆಡುವುದನ್ನು ನೋಡಲು ಬಯಸುತ್ತಾರೆ’ ಎಂದು ಧೋನಿ ಅವರು ತಮ್ಮ ತಂಡ ಬುಧವಾರ ಕೆಕೆಆರ್ ತಂಡವನ್ನು 2 ವಿಕೆಟ್‌ಗಳಿಂದ ಸೋಲಿಸಿದ ನಂತರ ತಿಳಿಸಿದರು.
‘ಯಾವುದನ್ನೂ ಈಗಲೇ ನಿರ್ಧರಿಸವುದಿಲ್ಲ. ಆದರೆ ನನಗೆ ಸಿಗುತ್ತಿರುವ ಪ್ರೀತಿ ಮತ್ತು ಅಭಿಮಾನ ಅತ್ಯುನ್ನತವಾದುದು’ ಎಂದು ಧೋನಿ ಹೇಳಿದರು.
2023ರಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಅವರು ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಧೋನಿ ಅವರಿಂದ 10 ಓವರುಗಳಷ್ಟೂ ಬ್ಯಾಟ್ ಮಾಡುವುದೂ ಕಷ್ಟ ಎಂದು ಸಿಎಸ್‌ಕೆ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದರು.
ಈ ಬಾರಿಯ ಐಪಿಎಲ್ ಈ ದಿಗ್ಗಜ ವಿಕೆಟ್ ಕೀಪರ್– ಬ್ಯಾಟರ್‌ಗೆ ಕೊನೆಯದಾಗಬಹುದೆಂಬ ಮಾತುಗಳು ಕೇಳಿಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.