ಮಹೇಂದ್ರ ಸಿಂಗ್ ಧೋನಿ, ವೈಭವ್ ಸೂರ್ಯವಂಶಿ
ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬುಧವಾರ ದೆಹಲಿಯಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಜಯ ಗಳಿಸಿರುವ ರಾಜಸ್ಥಾನ ರಾಯಲ್ಸ್, ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ.
ಈ ನಡುವೆ ಬಿರುಸಿನ ಅರ್ಧಶತಕ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿರುವ 14ರ ಹರೆಯದ ಯುವ ಎಡಗೈ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಮಗದೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.
ಪಂದ್ಯದ ಬಳಿಕ ಸೂರ್ವವಂಶಿ ಅವರು ದಿಗ್ಗಜ ಕ್ರಿಕೆಟಿಗ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ 43 ವರ್ಷದ ಮಹೇಂದ್ರ ಸಿಂಗ್ ಧೋನಿ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಇದು ಐಪಿಎಲ್‌ನ ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಯಿತು.
ಪ್ರಸ್ತುತ ವಿಡಿಯೊವನ್ನು ಐಪಿಎಲ್ ಅಧಿಕೃತ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿವೆ.
ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯವಂಶಿ, ಕೇವಲ 33 ಎಸೆತಗಳಲ್ಲಿ ತಲಾ ನಾಲ್ಕು ಸಿಕ್ಸರ್ ಹಾಗೂ ಬೌಂಡರಿಗಳ ನೆರವಿನಿಂದ 57 ರನ್ ಗಳಿಸಿ ಅಬ್ಬರಿಸಿದರು. ಸೂರ್ಯವಂಶಿ ಬಿರುಸಿನ ಆಟದ ನೆರವಿನಿಂದ ಚೆನ್ನೈ ಒಡ್ಡಿದ 188 ರನ್‌ಗಳ ಗುರಿಯನ್ನು ರಾಜಸ್ಥಾನ 17.1 ಓವರ್‌ಗಳಲ್ಲೇ ನಾಲ್ಕು ವಿಕೆಟ್ ನಷ್ಟಕ್ಕೆ ತಲುಪಿತು.
ಇದು ರಾಜಸ್ಥಾನ ಪಾಲಿಗೆ ಈ ಆವೃತ್ತಿಯ ಕೊನೆಯ ಪಂದ್ಯವಾಗಿತ್ತು. 14 ಪಂದ್ಯಗಳಲ್ಲಿ ನಾಲ್ಕು ಗೆಲುವಿನೊಂದಿಗೆ ಒಟ್ಟು ಎಂಟು ಅಂಕ ಮಾತ್ರ ಸಂಪಾದಿಸಿದೆ. ಸದ್ಯ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಕೊನೆಯ ಸ್ಥಾನದಲ್ಲಿರುವ ಚೆನ್ನೈ, 13 ಪಂದ್ಯಗಳಲ್ಲಿ ಆರು ಅಂಕ ಮಾತ್ರ ಗಳಿಸಿದೆ. ಚೆನ್ನೈ ಬಳಿ ಇನ್ನೊಂದು ಪಂದ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.