ADVERTISEMENT

IPL 2025 | ಕೊಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ಭರ್ಜರಿ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಏಪ್ರಿಲ್ 2025, 15:44 IST
Last Updated 21 ಏಪ್ರಿಲ್ 2025, 15:44 IST
<div class="paragraphs"><p>ಶುಭಮನ್ ಗಿಲ್ ಬ್ಯಾಟಿಂಗ್ ವೈಖರಿ</p></div>

ಶುಭಮನ್ ಗಿಲ್ ಬ್ಯಾಟಿಂಗ್ ವೈಖರಿ

   

– ಪಿಟಿಐ ಚಿತ್ರ

ಕೋಲ್ಕತ್ತ: ನಾಯಕ ಶುಭಮನ್ ಗಿಲ್ (90;55ಎ) ಮತ್ತು ಸಾಯಿ ಸುದರ್ಶನ್‌ (52;36ಎ) ಅವರ ಅರ್ಧಶತಕಗಳ ಬಳಿಕ ಬೌಲರ್‌ಗಳ ಸಾಂಘಿಕ ದಾಳಿಯ ನೆರವಿನಿಂದ ಗುಜರಾತ್‌ ಟೈಟನ್ಸ್‌ ತಂಡವು ‌ಸೋಮವಾರ ಐಪಿಎಲ್‌ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ 39 ರನ್‌ಗಳಿಂದ ಜಯ ಗಳಿಸಿತು. ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.

ADVERTISEMENT

ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 199 ರನ್‌ ಬೆನ್ನಟ್ಟಿದ ಹಾಲಿ ಚಾಂಪಿಯನ್‌ ಕೋಲ್ಕತ್ತ ತಂಡವು ಯಾವುದೇ ಹಂತದಲ್ಲೂ ಪ್ರತಿರೋಧ ತೋರದೆ 8ಕ್ಕೆ 159 ರನ್‌ ಗಳಿಸಿ ಸವಾಲನ್ನು ಮುಗಿಸಿತು. ನಾಯಕ ಅಜಿಂಕ್ಯ ರಹಾನೆ (50;36ಎ, 4x5, 6x1) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಕ್ವಿಂಟನ್‌ ಡಿ ಕಾಕ್‌ ಬದಲು ಆರಂಭಿಕ ಆಟಗಾರನಾಗಿ ಅವಕಾಶ ಪಡೆದ ರೆಹಮಾನುಲ್ಲಾ ಗುರ್ಬಾಜ್ (1) ನಿರಾಸೆ ಮೂಡಿಸಿದರು. ಅವರಿಗೆ ಮೊದಲ ಓವರ್‌ನಲ್ಲೇ ವೇಗಿ ಮೊಹಮ್ಮದ್‌ ಸಿರಾಜ್‌ ಪೆವಿಲಿಯನ್‌ ದಾರಿ ತೋರಿ ಸಿದರು. ಸುನೀಲ್‌ ನಾರಾಯಣ್‌ (17), ವೆಂಕಟೇಶ್‌ ಅಯ್ಯರ್‌ (14), ರಿಂಕು ಸಿಂಗ್‌ (17) ಮತ್ತೆ ವಿಫಲರಾದರು. ತವರಿನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಕೋಲ್ಕತ್ತ ತಂಡಕ್ಕೆ ಇದು ಮೂರನೇ ಸೋಲು.

‘ಪರ್ಪಲ್‌ ಕ್ಯಾಪ್‌’ ಧರಿಸಿರುವ ಟೈಟನ್ಸ್‌ನ ವೇಗಿ, ಕನ್ನಡಿಗ ಪ್ರಸಿದ್ಧ ಕೃಷ್ಣ ಮತ್ತೆ ಎರಡು ವಿಕೆಟ್‌ ಗಳಿಸಿ ಮಿಂಚಿದರು. ಲಯಕ್ಕೆ ಪರದಾಡುತ್ತಿದ್ದ ಸ್ಪಿನ್ನರ್‌ ರಶೀದ್‌ ಖಾನ್‌ ಎರಡು ವಿಕೆಟ್‌ ಕಬಳಿಸಿದರು.

ಗಿಲ್‌ ಅಬ್ಬರ: ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಗುಜರಾತ್‌ ತಂಡವು ಗಿಲ್‌, ಸುದರ್ಶನ್‌ ಮತ್ತು ಜೋಸ್‌ ಬಟ್ಲರ್‌ ಅವರ ಬಿರುಸಿನ ಆಟದಿಂದ 3 ವಿಕೆಟ್‌ಗೆ 196 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು.

ಗಿಲ್‌ ಈ ಋತುವಿನ ಮೊದಲ ಶತಕದತ್ತ ಕಾಲಿಡುವಂತೆ ಕಂಡರು. ಆದರೆ ವೈಭವ್ ಆರೋರಾ ಫುಲ್‌ಟಾಸ್‌ ಎಸೆತವನ್ನು ಫ್ಲಿಕ್‌ ಮಾಡುವ ಯತ್ನದಲ್ಲಿ ಡೀಪ್‌ ಸ್ಕ್ವೇರ್‌ ಲೆಗ್‌ನಲ್ಲಿದ್ದ ರಿಂಕು ಸಿಂಗ್ ಅವರಿಗೆ ಕ್ಯಾಚಿತ್ತರು. ಗಿಲ್‌ ಆಟದಲ್ಲಿ 10 ಬೌಂಡರಿ, ಮೂರು ಸಿಕ್ಸರ್‌ಗಳಿದ್ದವು. ಸುದರ್ಶನ್‌ ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ ಬಾರಿಸಿದರು. ಅವರು ಈ ಆವೃತ್ತಿಯಲ್ಲಿ ಐದನೇ ಅರ್ಧಶತಕ ದಾಖಲಿಸಿದರು.

ಗಿಲ್ ಮತ್ತು ಸುದರ್ಶನ್ ಮೊದಲ ವಿಕೆಟ್‌ಗೆ 114 (75ಎ) ರನ್‌ಗಳ ಜೊತೆಯಾಟವಾಡಿದರು. ತಂಡವು ಉತ್ತಮ ಬುನಾದಿ ಪಡೆದರೂ ಕೊನೆಯ ಹಂತದಲ್ಲಿ ನಿರೀಕ್ಷಿತ ವೇಗದಲ್ಲಿ ರನ್‌ ಗಳಿಸಲಾಗಲಿಲ್ಲ. ವಿಕೆಟ್‌ಗಳು ಕೈಲಿದ್ದರೂ ಅಂತಿಮ ಐದು ಓವರುಗಳಲ್ಲಿ 59 ರನ್‌ಗಳು ಮಾತ್ರ ಬಂದವು. ಈ ಹಿಂದಿನ ಪಂದ್ಯದಲ್ಲಿ ಅಜೇಯ 97 ರನ್ ಗಳಿಸಿದ್ದ ಬಟ್ಲರ್ ಬಿರುಸಿನ ಆಟವಾಡಿ 23 ಎಸೆತಗಳಲ್ಲಿ 8 ಬೌಂಡರಿಗಳಿದ್ದ 41 ರನ್ ಗಳಿಸಿ ಮತ್ತೆ ಅಜೇಯರಾಗುಳಿದರು.

ಸ್ಕೋರುಗಳು: ಗುಜರಾತ್ ಟೈಟನ್ಸ್‌: 20 ಓವರುಗಳಲ್ಲಿ 3ಕ್ಕೆ198 (ಸಾಯಿ ಸುದರ್ಶನ್ 52, ಶುಭಮನ್ ಗಿಲ್ 90, ಜಾಸ್ ಬಟ್ಲರ್ ಔಟಾಗದೇ 41; ವೈಭವ್ ಆರೋರಾ 44ಕ್ಕೆ1, ಹರ್ಷಿತ್ ರಾಣಾ 45ಕ್ಕೆ1, ರಸೆಲ್ 13ಕ್ಕೆ1) ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 8ಕ್ಕೆ 159 (ಅಜಿಂಕ್ಯಾ ರಹಾನೆ 50, ಆ್ಯಂಡ್ರೆ ರಸೆಲ್‌ 21, ಅಂಗ್‌ಕ್ರಿಷ್‌ ರಘುವಂಶಿ 26; ಪ್ರಸಿದ್ಧ ಕೃಷ್ಣ 25ಕ್ಕೆ 2, ರಶೀದ್‌ ಖಾನ್ 25ಕ್ಕೆ 2, ಮೊಹಮ್ಮದ್ ಸಿರಾಜ್‌ 32ಕ್ಕೆ 1, ಇಶಾಂತ್‌ ಶರ್ಮಾ 18ಕ್ಕೆ 1, ಸಾಯಿ ಕಿಶೋರ್‌ 19ಕ್ಕೆ 1). ಫಲಿತಾಂಶ: ಗುಜರಾತ್‌ ಟೈಟನ್ಸ್‌ಗೆ 39 ರನ್‌ಗಳ ಜಯ. ಪಂದ್ಯದ ಆಟಗಾರ: ಶುಭಮನ್ ಗಿಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.