ADVERTISEMENT

IPL 2025: ಕೆ.ಎಲ್. ರಾಹುಲ್ 'ಕಾಂತಾರ' ಸಂಭ್ರಮದ ಹಿಂದಿನ ರಹಸ್ಯವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಏಪ್ರಿಲ್ 2025, 17:45 IST
Last Updated 11 ಏಪ್ರಿಲ್ 2025, 17:45 IST
   

ಬೆಂಗಳೂರು: ಸಾಮಾಜಿಕ ಜಾಲತಾಣಗಳ ತುಂಬ ಈಗ ಕೆ.ಎಲ್. ರಾಹುಲ್ ಮತ್ತು ಕಾಂತಾರ ಚಲನಚಿತ್ರದ್ದೇ ಮಾತು. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಆತಿಥೇಯ ಆರ್‌ಸಿಬಿ ಎದುರು ಡೆಲ್ಲಿ ಕ್ಯಾಪಿಟಲ್ಸ್ ಜಯಕ್ಕೆಕಾರಣರಾದ ಕನ್ನಡಿಗ ರಾಹುಲ್ ಅಜೇಯ 93 ರನ್ ಗಳಿಸಿದರು. ಪಂದ್ಯ ಗೆದ್ದ ನಂತರ 'ಕಾಂತಾರ" ಸಿನಿಮಾದ ದೃಶ್ಯವೊಂದನ್ನು ಅನುಕರಿಸಿದ ರಾಹುಲ್, ‘ಇದು ನನ್ನ ನೆಲ...’ ಎಂಬ ಸಂದೇಶ ಕೊಟ್ಟರು. ನಂತರ ಅಧಿಕೃತ ಪ್ರಸಾರಕರೊಂದಿಗೆ ಮಾತನಾಡುವಾಗ  ತಮ್ಮ ಸಂಭ್ರಮ ಹಾಗೂ ನೆಚ್ಚಿನ ಚಿತ್ರ ಕಾಂತಾರ ಕುರಿತು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಗತಿಯು ಬೇರೆ ಬೇರೆ ರೂಪದಲ್ಲಿ ಹೊರಹೊಮ್ಮುತ್ತಿದೆ. ಕಳೆದ ಮೆಗಾ ಹರಾಜಿನಲ್ಲಿ ತಮ್ಮನ್ನು ಖರೀದಿಸದ ಆರ್‌ಸಿಬಿ ವಿರುದ್ಧ ರಾಹುಲ್ ಈ ರೀತಿ ಸೇಡು ತೀರಿಸಿಕೊಂಡಿದ್ದಾರೆಂಬ ಸಂದೇಶಗಳು ಹರಿದಾಡುತ್ತಿವೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಡಿದ್ದ ‘ಸ್ಲೆಂಜಿಂಗ್‌‘ ರಾಹುಲ್ ಪ್ರತ್ಯುತ್ತರ ಕೊಟ್ಟ ರೀತಿ ಇದು ಎಂಬ ಸಂದೇಶಗಳೂ ಇವೆ. ಒಟ್ಟಿನಲ್ಲಿ ಶಾಂತಚಿತ್ತದ ರಾಹುಲ್ ಈ ರೀತಿ ಪ್ರತಿಕ್ರಿಯಿಸಿರುವುದು ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ. 

ADVERTISEMENT

ರಾಹುಲ್ ಅವರು ಬಾಲ್ಯದಿಂದಲೂ ಆಡಿ ಬೆಳೆದ ನೆಲ ಚಿನ್ನಸ್ವಾಮಿ ಅಂಗಳ. ಕರ್ನಾಟಕ ತಂಡವನ್ನು ಬಹಳಷ್ಟು ಪಂದ್ಯಗಳಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಗೆಲ್ಲಿಸಿಕೊಟ್ಟಿದ್ದಾರೆ.

ದಶಕದ ಹಿಂದೆ ಆರ್‌ಸಿಬಿ ತಂಡದಲ್ಲಿಯೂ ಆಡಿದ್ದರು. ಇಲ್ಲಿ ನಡೆದ ಕೆಲವು ಅಂತರರಾಷ್ಟ್ರೀಯ ಪಂದ್ಯ
ಗಳಲ್ಲಿಯೂ ಅವರು ಭಾರತ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ ಉದಾಹರಣೆಗಳಿವೆ.  ಆರ್‌ಸಿಬಿ ವಿರುದ್ಧದ ಇನಿಂಗ್ಸ್‌ನಲ್ಲಿ ಅವರು ಪ್ರಯೋಗಿಸಿದ ಬ್ಯಾಕ್‌ಫುಟ್‌ ಪಂಚ್, ಸುಂದರವಾದ ಡ್ರೈವ್ ಮತ್ತು ಫ್ಲಿಕ್‌ಗಳ ಆಟ ಮನಮೋಹಕವಾಗಿತ್ತು. 

ಅಷ್ಟೇ ಅಲ್ಲ. ಅವರು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಆರ್‌ಸಿಬಿ ಅಭಿಮಾನಿಗಳು ಕೂಡ ರಾಹುಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

‘ಚಿನ್ನಸ್ವಾಮಿಯಲ್ಲಿರುವ ಜನಸ್ತೋಮವು ರಾಹುಲ್‌..ರಾಹುಲ್‌..  ನಮ್ಮ ಹುಡುಗ ಎಂದು ಪಠಿಸುತ್ತಿದ್ದಾರೆ’ ಎಂದು ಎಕ್ಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಎಂ. ರಾಮಚಂದ್ರ ಸಂದೇಶ ಹಾಕಿದ್ದಾರೆ. 

ಇಷ್ಟೇ ಅಲ್ಲ. ರಾಹುಲ್ ಅವರ ಆಟದ ಬಗ್ಗೆಹಲವಾರು ಸಂದೇಶಗಳು ಎಕ್ಸ್‌ನಲ್ಲಿ ಹರಿದಾಡುತ್ತಿವೆ.  

‘ಕಣ್ಣಾವೂರ್ ಲೋಕೇಶ್ ರಾಹುಲ್..ಅಷ್ಟೇ. ಇದೇ ಟ್ವೀಟ್‌..’ ಎಂದು ಅಂತರರಾಷ್ಟ್ರೀಯ ಮಾಜಿ ಕ್ರಿಕೆಟಿಗ ದೊಡ್ಡಗಣೇಶ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.