ಹೈದರಾಬಾದ್: ಈ ಹಿಂದಿನ ಋತುವಿನಂತೆ ಆಕ್ರಮಣಕಾರಿ ಆಟದಿಂದ ಎದುರಾಳಿಗಳನ್ನು ಕಂಗೆಡಿಸುವ ತಂತ್ರವನ್ನು ಸನ್‌ರೈಸರ್ಸ್ ಈ ಆವೃತ್ತಿಯಲ್ಲೂ ಮುಂದುವರಿಸಿದೆ. ಸನ್‌ರೈಸರ್ಸ್ ತಂಡದ ಈ ದಾಳಿಕೋರ ಮನೋಭಾವದ ಆಟ, ಗುರುವಾರ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಆ ತಂಡವನ್ವು ಎದುರಿಸಲಿರುವ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಸವಾಲಾಗಲಿದೆ.
2024ರಲ್ಲಿ ಆಡಿದ ರೀತಿಯನ್ನೇ ಮುಂದುವರಿಸಿರುವ ಸನ್‌ರೈಸರ್ಸ್ ತಂಡ, ರಾಜಸ್ಥಾನ ರಾಯಲ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ತನ್ನದೇ ಹೆಸರಿನಲ್ಲಿದ್ದ ಅತ್ಯಧಿಕ ಮೊತ್ತದ ದಾಖಲೆಯನ್ನು (287) ಬರೇ ಎರಡು ರನ್‌ಗಳಿಂದ ಕಳೆದುಕೊಂಡಿತು. 44 ರನ್‌ಗಳ ದೊಡ್ಡ ಗೆಲುವು ಆ ತಂಡಕ್ಕೆ ಮೊದಲ ಸುತ್ತಿನ ಪಂದ್ಯಗಳ ನಂತರ ಆ ತಂಡಕ್ಕೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ನೀಡಿದೆ.
ತಂಡಕ್ಕೆ ಹೊಸದಾಗಿ ಸೇರಿಕೊಂಡ ಇಶಾನ್ ಕಿಶನ್, ಉಪ್ಪಳದ ರಾಜೀವ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹಾಲಿ ಐಪಿಎಲ್‌ನ ಮೊದಲ ಶತಕ (106, 47ಎ) ಹೊಡೆದರು. ಐಪಿಎಲ್ ತಂಡಗಳಲ್ಲೇ ಸನ್‌ರೈಸರ್ಸ್ ಆಕ್ರಮಣದ ಆಟವಾಡುವ ತಂಡ ಎನಿಸಿದೆ.
ಕಿಶನ್ ಜೊತೆ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ಹೆನ್ರಿಚ್ ಕ್ಲಾಸೆನ್ ಅಂಥ ಸ್ಫೋಟಕ ಆಟವಾಡಬಲ್ಲ ಪಡೆ ಆ ತಂಡದಲ್ಲಿದೆ. ನಿತೀಶ್ ಕುಮಾರ್ ರೆಡ್ಡಿ ಕೂಡ ತಾವೇನೂ ಕಡಿಮೆಯಿಲ್ಲ ಎಂದು ಹಿಂದಿನ ಪಂದ್ಯದಲ್ಲಿ 200ಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್‌ನಲ್ಲಿ ಇದರು.
ಹೀಗಾಗಿ ಲಖನೌ ತಂಡ ತನ್ನ ಬೌಲಿಂಗ್ ತಂತ್ರದಲ್ಲಿ ಸ್ಪಷ್ಟತೆ ಹೊಂದಿರಬೇಕಾಗಿದೆ. ಸ್ವಲ್ಪ ಎಡವಟ್ಟಾದರೂ ಅಪಾಯ ತಪ್ಪಿದ್ದಲ್ಲ.
ಈ ಬಾರಿಯ ಐಪಿಎಲ್‌ನಲ್ಲಿ ಬ್ಯಾಟರ್‌ಗಳ ಅಬ್ಬರ ಎದ್ದುಕಂಡಿದೆ. ಮೊದಲ ಐದು ಪಂದ್ಯಗಳಲ್ಲಿ 119 ಸಿಕ್ಸರ್‌ಗಳು ದಾಖಲಾಗಿವೆ.
ರೋಚಕ ಹೋರಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಒಂದು ವಿಕೆಟ್‌ನಿಂದ ಸೋತ ಲಖನೌ ತಂಡ, ಆ ಪಂದ್ಯದಲ್ಲಿ ಮಧ್ಯಮ ಹಂತದ ಓವರುಗಳಲ್ಲಿ ಚೆನ್ನಾಗಿ ಹೊಡೆಸಿಕೊಂಡಿತು. ಅಪಾಯದಲ್ಲಿದ್ದ ಡೆಲ್ಲಿ ಚೇತರಿಸಿದ್ದು ಆ ಹಂತದಲ್ಲಿಯೇ. ಅಶುತೋಷ್ ಶರ್ಮಾ ಗೆಲುವಿನ ರೂವಾರಿಯಾದರು. ಲಖನೌ ತಂಡದ ನಾಯಕ ಪಂತ್ ಬ್ಯಾಟಿಂಗ್‌ನಲ್ಲಿ ವಿಫಲರಾದರು. ಕೊನೆಯ ಓವರಿನಲ್ಲಿ ಸ್ಟಂಪಿಂಗ್ ಸಹ ಕೈತಪ್ಪಿದ್ದು ದುಬಾರಿಯಾಯಿತು.
ಲಖನೌ ತಂಡದ ನಿಕೋಲಸ್ ಪೂರನ್ ಅವರ ಆಕರ್ಷಕ ಸ್ಟ್ರೋಕ್ ಪ್ಲೇ ಹಾಗೂ ಮಿಚೆಲ್ ಮಾರ್ಷ್ ಅವರ ಅಮೋಘ ಆಟ ಲಖನೌ ತಂಡದ ಪಾಲಿಗೆ ಸಕಾರಾತ್ಮಕ ಅಂಶ.
ತಂಡದ ಅನುಭವಿ ಸ್ಪಿನ್ನರ್ ರವಿ ಬಿಷ್ಟೋಯಿ ಮೇಲೆ ತಂಡ ಹೆಚ್ಚಿನ ವಿಶ್ವಾಸ ಇಟ್ಟುಕೊಂಡಿದೆ. ಡೆಲ್ಲಿ ವಿರುದ್ಧ ಧರನ್ ಸಿದ್ಧಾರ್ಥ್ ಮತ್ತು ದಿಗ್ವೇಶ್ ರಾಥಿ ಅವರ ಬೌಲಿಂಗ್ ನಿಯಂತ್ರಣದಿಂದ ಕೂಡಿತ್ತು. ಆದರೆ ಆ ಪಂದ್ಯದಲ್ಲಿ ಎರಡು ವಿಕೆಟ್ ಪಡೆದರೂ, ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಎರಡು ಓವರುಗಳಿಗೆ ಸೀಮಿತಗೊಳಿಸಿದ್ದು ಹುಬ್ಬೇರಿಸಿತ್ತು.
ಪಂದ್ಯ ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೊ ಸ್ಟಾರ್ ಆ್ಯಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.