ADVERTISEMENT

IPL 2025 |ತವರು ನೆಲದಲ್ಲಿಯೇ ಲಖನೌಗೆ ಸೋಲು; ಡೆಲ್ಲಿ ಕ್ಯಾಪಿಟಲ್ಸ್‌ಗೆ ಭರ್ಜರಿ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2025, 15:43 IST
Last Updated 22 ಏಪ್ರಿಲ್ 2025, 15:43 IST
<div class="paragraphs"><p>ಏಡೆನ್ ಮಾರ್ಕರಂ</p></div>

ಏಡೆನ್ ಮಾರ್ಕರಂ

   

(ಚಿತ್ರ ಕೃಪೆ: ಐಪಿಎಲ್)

ಲಖನೌ: ಕನ್ನಡಿಗ ಕೆ.ಎಲ್. ರಾಹುಲ್ ಅವರ ಆಕರ್ಷಕ ಅರ್ಧಶತಕ ಮತ್ತು ವೇಗಿ ಮುಕೇಶ್ ಕುಮಾರ್ ಅವರ ಪರಿಣಾಮಕಾರಿ ದಾಳಿಯಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆತಿಥೇಯ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿತು. 

ADVERTISEMENT

ಏಕನಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಏಡನ್ ಮರ್ಕರಂ (52; 33ಎ, 4X2, 6X3) ಮತ್ತು ಮಿಚೆಲ್ ಮಾರ್ಷ್ (45; 36ಎ, 4X3, 6X1) ಉತ್ತಮ ಆರಂಭ ನೀಡಿದರು. ಅವರ ಆಟದಿಂದಾಗಿ ತಂಡವು 10 ಓವರ್‌ಗಳಲ್ಲಿ 87 ರನ್‌ ಗಳಿಸಿತು. ಆದರೆ ನಂತರದ ಹಂತದಲ್ಲಿ ತಂಡದ ಉಳಿದ ಬ್ಯಾಟರ್‌ಗಳು ಅಬ್ಬರಿಸದಂತೆ ಮುಕೇಶ್ (33ಕ್ಕೆ4) ನೋಡಿಕೊಂಡರು. ಅದರ ಪರಿಣಾಮವಾಗಿ ಲಖನೌ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 159 ರನ್ ಗಳಿಸಿತು. ಅದಕ್ಕುತ್ತರವಾಗಿ
ಡೆಲ್ಲಿ ಕ್ಯಾಪಿಟಲ್ಸ್ ತಂಡವು 17.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 161 ರನ್ ಗಳಿಸಿತು. ಇದರೊಂದಿಗೆ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿತು. 

ಡೆಲ್ಲಿ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಪೊರೆಲ್‌ (51; 36ಎ, 4X5, 6X1) ಮತ್ತು ರಾಹುಲ್ (ಅಜೇಯ 57; 42ಎ, 4X3, 6X3) ಅವರ ಅರ್ಧಶತಕಗಳ ನೆರವಿನಿಂದ ಗೆಲುವು ಸುಲಭವಾಯಿತು. ನಾಯಕ ಅಕ್ಷರ್ ಪಟೇಲ್ ಕೂಡ ಅಜೇಯ 34 ರನ್‌ಗಳ ಕಾಣಿಕೆ ನೀಡಿದರು. ಅದರಲ್ಲಿ 4 ಸಿಕ್ಸರ್ ಸಿಡಿಸಿದರು.  ಇನಿಂಗ್ಸ್‌ ಆರಂಭಿಸಿದ ಕರುಣ್ ನಾಯರ್ 9 ಎಸೆತಗಳಲ್ಲಿ 15 ರನ್ ಹೊಡೆದರು. 

ಮುಕೇಶ್ ಮ್ಯಾಜಿಕ್:  ದುಷ್ಮಂತ ಚಮೀರಾ ಹಾಕಿದ ಹತ್ತನೇ ಓವರ್‌ನ ಕೊನೆಯ ಎಸೆತದಲ್ಲಿ ಮರ್ಕರಂ ಔಟಾದರು. ಅದರೊಂದಿಗೆ ಮೊದಲ ವಿಕೆಟ್ ಜೊತೆಯಾಟ ಮುರಿಯಿತು. ನಂತರದ ಓವರ್‌ನಲ್ಲಿ ಮುಕೇಶ್ ಕುಮಾರ್ ಅವರ ಎಸೆತದಲ್ಲಿ ಮಾರ್ಷ್ ಕ್ಲೀನ್‌ಬೌಲ್ಡ್ ಆದರು. 

‘ಸ್ಫೋಟಕ ಶೈಲಿ’ಯ ಬ್ಯಾಟರ್ ನಿಕೋಲಸ್‌ ಪೂರನ್ 5 ಎಸೆತಗಳಲ್ಲಿ 9 ರನ್‌ ಗಳಿಸಿದರು.  ಅದರಲ್ಲಿ  ಎರಡು ಬೌಂಡರಿ ದಾಖಲಿಸಿದ್ದ ಅವರು ಮತ್ತೊಂದು ಬೀಸಾಟದ ಇನಿಂಗ್ಸ್‌ಗೆ ಸಿದ್ಧರಾಗಿದ್ದರು. ಆದರೆ ಅವರ ಆಟಕ್ಕೆ ಮಿಚೆಲ್ ಸ್ಟಾರ್ಕ್ ತಡೆಯೊಡ್ಡಿದರು. ಸ್ಟಾರ್ಕ್ ಹಾಕಿದ ಸ್ವಿಂಗ್ ಎಸೆತವನ್ನು ಹೊಡೆಯುವ ಯತ್ನದಲ್ಲಿ ಪೂರನ್ ಬ್ಯಾಟಿನ ಒಳ ಅಂಚಿಗೆ ಬಡಿದ ಚೆಂಡು ಸ್ಟಂಪ್‌ಗೆ ಅಪ್ಪಳಿಸಿತು. ಪೂರನ್ ಹತಾಶೆಯಿಂದ ಡಗ್‌ಔಟ್‌ಗೆ ಮರಳಿದರು. 

ಮುಕೇಶ್ ತಮ್ಮ ಇನ್ನೊಂದು ಓವರ್‌ನಲ್ಲಿ ಅಬ್ದುಲ್ ಸಮದ್ (2 ರನ್) ಅವರು ನೇರವಾಗಿ ಹೊಡೆಯಲು ಯತ್ನಿಸಿದ ಚೆಂಡನ್ನು ಕ್ಯಾಚ್ ಮಾಡುವಲ್ಲಿ ಯಶಸ್ವಿಯಾದರು. ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದ ಆಯುಷ್ ಬಡೋನಿ (36; 21ಎ, 4X6)  ಮತ್ತು ರಿಷಭ್ ಪಂತ್ ಅವರನ್ನು ಒಂದೇ ಓವರ್‌ನಲ್ಲಿ ಕ್ಲೀನ್‌ಬೌಲ್ಡ್‌ ಮಾಡುವಲ್ಲಿ ಮುಕೇಶ್ ಯಶಸ್ವಿಯಾದರು. 

ಆದರೆ ಡೇವಿಡ್ ಮಿಲ್ಲರ್ ಅವರು ತಮ್ಮ ಎಂದಿನ ಅಬ್ಬರದ ಆಟಕ್ಕೆ ಕಡಿವಾಣ ಹಾಕಿದರು. ತಾಳ್ಮೆಯಿಂದ ಆಡಿದರು. 15 ಎಸೆತಗಳಲ್ಲಿ 14 ರನ್ ಗಳಿಸಿದರು. 

ಸಂಕ್ಷಿಪ್ತ ಸ್ಕೋರು: ಲಖನೌ ಸೂಪರ್‌ಜೈಂಟ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 159 (ಏಡನ್ ಮರ್ಕರಂ 52, ಮಿಚೆಲ್ ಮಾರ್ಷ್ 45, ಡೇವಿಡ್ ಮಿಲ್ಲರ್  ಔಟಾಗದೇ 14, ಆಯುಷ್ ಬಡೋನಿ 36, ಮುಕೇಶ್ ಕುಮಾರ್ 33ಕ್ಕೆ4) ಡೆಲ್ಲಿ ಕ್ಯಾಪಿಟಲ್ಸ್: 17.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 161 (ಅಭಿಷೇಕ್ ಪೊರೆಲ್ 51, ಕೆ.ಎಲ್. ರಾಹುಲ್ ಔಟಾಗದೇ 57, ಅಕ್ಷರ್ ಪಟೇಲ್ ಔಟಾಗದೇ 34, ಏಡನ್ ಮರ್ಕರಂ 30ಕ್ಕೆ2) ಫಲಿತಾಂಶ:ಡೆಲ್ಲಿ ಕ್ಯಾಪಿಟಲ್ಸ್ ತಂಡದ 8 ವಿಕೆಟ್‌ಗಳ ಜಯ. ಪಂದ್ಯ ಶ್ರೇಷ್ಠ: ಮುಕೇಶ್ ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.