ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಕೆ.ಎಲ್. ರಾಹುಲ್
ಪಿಟಿಐ ಚಿತ್ರ
ಮುಂಬೈ: ಐಪಿಎಲ್ ಟೂರ್ನಿಯ ಪ್ಲೇ ಆಫ್ ಹಂತಕ್ಕೆ ನಾಲ್ಕನೇ ತಂಡವಾಗಿ ಪ್ರವೇಶಿಸುವ ಪೈಪೋಟಿಯಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಬುಧವಾರ ಮುಖಾಮುಖಿಯಾಗಲಿವೆ.
ಐದು ಬಾರಿಯ ಚಾಂಪಿಯನ್ ಮುಂಬೈ ತಂಡವು ಸದ್ಯ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ತಂಡವು 13 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಉಭಯ ತಂಡಗಳ ಪಾಲಿಗೆ ತಲಾ ಎರಡು ಪಂದ್ಯಗಳು ಉಳಿದಿವೆ. ಅದರಲ್ಲಿ ಡೆಲ್ಲಿ ತಂಡವು ಎರಡೂ ಪಂದ್ಯಗಳನ್ನು ಗೆದ್ದರೆ ಪ್ಲೇ ಆಫ್ ಖಚಿತ. ಈ ಹಾದಿಯಲ್ಲಿ ಮೊದಲಿಗೆ ಡೆಲ್ಲಿ ತಂಡವು ಮುಂಬೈ ವಿರುದ್ಧ ನಂತರ ಪಂಜಾಬ್ ಕಿಂಗ್ಸ್ (ಮೇ 24) ವಿರುದ್ಧ ಜಯಿಸಬೇಕು. ಬುಧವಾರ ಒಂದೊಮ್ಮೆ ಡೆಲ್ಲಿ ಸೋತರೆ, ಮುಂಬೈ ಪ್ಲೇಆಫ್ ಪ್ರವೇಶ ಖಚಿತವಾಗಲಿದೆ. ಆದ್ದರಿಂದ ಮುಂಬೈ ಎದುರಿನ ಪಂದ್ಯವು ಡೆಲ್ಲಿಗೆ ‘ಮಾಡು ಇಲ್ಲವೇ ಮಡಿ’ ಎಂಬಂತಿದೆ.
ಡೆಲ್ಲಿ ತಂಡವು ತನ್ನ 12ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆಲುವಿನ ಅವಕಾಶವನ್ನು ಕೈಚೆಲ್ಲಿತು. ಕೆ.ಎಲ್. ರಾಹುಲ್ ಶತಕದ ಬಲದಿಂದ 200ಕ್ಕೂ ಹೆಚ್ಚು ರನ್‌ಗಳ ಮೊತ್ತ ಗಳಿಸಿತ್ತು. ಆದರೆ ಗುಜರಾತ್ ತಂಡದ ಆರಂಭಿಕ ಜೋಡಿ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರನ್ನು ಕಟ್ಟಿಹಾಕುವಲ್ಲಿ ಡೆಲ್ಲಿ ಬೌಲರ್‌ಗಳು ವಿಫಲರಾದರು. ಅದರಿಂದಾಗಿ ಗುಜರಾತ್ 10 ವಿಕೆಟ್‌ಗಳ ಜಯ ಸಾಧಿಸಿ ಪ್ಲೇಆಫ್‌ಗೆ ಲಗ್ಗೆ ಇಟ್ಟಿತು.
ಮುಂಬೈ ವಿರುದ್ಧ ಗೆಲ್ಲಬೇಕಾದರೆ ಡೆಲ್ಲಿ ತಂಡವು ತನ್ನ ಬೌಲಿಂಗ್ ಪಡೆಯನ್ನು ಬಲಿಷ್ಠಗೊಳಿಸಿಕೊಳ್ಳುವುದು ಅನಿವಾರ್ಯ. ಏಕೆಂದರೆ; ಹಾರ್ದಿಕ್ ಪಾಂಡ್ಯ ಬಳಗದಲ್ಲಿ ರಿಯಾನ್ ರಿಕೆಲ್ಟನ್, ರೋಹಿತ್ ಶರ್ಮಾ, ವಿಲ್ ಜ್ಯಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನಮನ್ ಧೀರ್ ಮತ್ತು ಕಾರ್ಬಿನ್ ಬಾಷ್ ಅವರನ್ನು ಕಟ್ಟಿಹಾಕುವುದೇ ಬೌಲರ್‌ಗಳ ಮುಂದಿರುವ ಪ್ರಮುಖ ಸವಾಲು. ಮುಂಬೈ ಬ್ಯಾಟಿಂಗ್ ಪಡೆ ಉತ್ತಮ ಲಯದಲ್ಲಿದೆ. ಬೌಲಿಂಗ್ ವಿಭಾಗವೂ ಚೆನ್ನಾಗಿದೆ. ಜಸ್‌ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್, ಅಶ್ವಿನಿ ಕುಮಾರ್ ಮತ್ತು ದೀಪಕ್ ಚಾಹರ್ ಅವರು ವೇಗದ ವಿಭಾಗದ ಪ್ರಮುಖರು. ಅವರೊಂದಿಗೆ ಪಾಂಡ್ಯ ಕೂಡ ಇದ್ದಾರೆ. ಸ್ಪಿನ್–ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಕೂಡ ತಂಡದ ಗೆಲುವಿನ ರೂವಾರಿಯಾಗಬಲ್ಲ ಸಮರ್ಥರು.
ಡೆಲ್ಲಿ ತಂಡವು ಬೌಲಿಂಗ್‌ನಲ್ಲಿ ಸ್ಪಿನ್ನರ್ ಅಕ್ಷರ್ ಮತ್ತು ಕುಲದೀಪ್ ಅವರ ಮೇಲೆ ಹೆಚ್ಚು ಅವಲಂಬಿತ ವಾಗಿದೆ. ಟಿ. ನಟರಾಜನ್ ಮತ್ತು ಮುಸ್ತಫಿಜುರ್ ರೆಹಮಾನ್ ಅವರು ನಿರೀಕ್ಷೆಗೆ ತಕ್ಕ ಫಾರ್ಮ್‌ನಲ್ಲಿ ಇಲ್ಲ. ಆದ್ದರಿಂದ ಬ್ಯಾಟರ್‌ಗಳ ಪಾತ್ರವೇ ಪ್ರಮುಖವಾಗಲಿದೆ. ರಾಹುಲ್, ಫಾಫ್ ಡುಪ್ಲೆಸಿ, ಅಭಿಷೇಕ್ ಪೊರೆಲ್, ಟ್ರಿಸ್ಟನ್ ಸ್ಟಬ್ಸ್, ಆಶುತೋಷ್ ಶರ್ಮಾ ಹಾಗೂ ಆಲ್‌ರೌಂಡರ್ ವಿಪ್ರಜ್ ನಿಗಮ್ ಅವರ ಆಟವೇ ಪ್ರಮುಖವಾಗಲಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.