ಮುಂಬೈ: ಆರಂಭದ ಹಿನ್ನಡೆಯ ಬಳಿಕ ಈಗ ವಿಜಯಯಾತ್ರೆಯಲ್ಲಿರುವ ಮುಂಬೈ ಇಂಡಿಯನ್ಸ್ ತಂಡ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಅಪಾಯಕಾರಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಮುಂಬೈ ಮತ್ತು ಎಲ್‌ಎಸ್‌ಜಿ ತಂಡಗಳು 9 ಪಂದ್ಯಗಳಿಂದ ತಲಾ 10 ಪಾಯಿಂಟ್ಸ್ ಗಳಿಸಿವೆ. ಐದು ಗೆದ್ದು, ನಾಲ್ಕು ಸೋತಿವೆ. ಮಧ್ಯಾಹ್ನದ ಪಂದ್ಯದಲ್ಲಿ ಮುಂಬೈನ ಬಿಸಿಲು ಮತ್ತು ಸೆಕೆ ತಂಡಗಳಿಗೆ ಸವಾಲಾಗಲಿದೆ.
ಲಖನೌ ತಂಡದ ಮುಂದೆ ನಕಾರಾತ್ಮಕ ನೆಟ್ ರನ್‌ರೇಟ್ (–0.054) ಸುಧಾರಿಸುವ ಸವಾಲು ಇದೆ. ಇದರ ಜೊತೆಗೆ ತಂಡವು, ನಾಯಕ ರಿಷಭ್ ಪಂತ್ ಅವರಿಂದ ದೊಡ್ಡದೊಂದು ಇನಿಂಗ್ಸ್‌ನ ವಿಶ್ವಾಸದಲ್ಲಿದೆ. ಈ ಐಪಿಎಲ್‌ನಲ್ಲಿ ಪಂತ್ 9 ಪಂದ್ಯಗಳಿಂದ ಗಳಿಸಿರುವುದು ಬರೇ 106 ರನ್‌ಗಳನ್ನು. ಭಾರತದ ಈ ವಿಕೆಟ್ ಕೀಪರ್– ಬ್ಯಾಟರ್ ಕ್ರಮಾಂಕ ಬದಲಿಸಿದರೂ ವ್ಯತ್ಯಾಸ ಏನೂ ಆಗಿಲ್ಲ.
ಮೆಗಾ ಹರಾಜಿನಲ್ಲಿ ದಾಖಲೆ ಮೌಲ್ಯ ಪಡೆದ ಪಂತ್‌ಗೆ ಮಹತ್ವದ ಇನಿಂಗ್ಸ್ ಆಡಬೇಕಾದ ಒತ್ತಡವಿದೆ.
ತವರಿನಲ್ಲಿ ಆಡುತ್ತಿರುವುದರ ಜೊತೆಗೆ, ಸತತ ನಾಲ್ಕು ಪಂದ್ಯ ಗೆದ್ದಿರುವ ಮುಂಬೈ ತಂಡ ವಿಶ್ವಾಸದಲ್ಲಿದೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೌಲ್ಟ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಲಯಕ್ಕೆ ಮರಳಿದ್ದಾರೆ.
ಎರಡು ಅರ್ಧ ಶತಕ ಸಿಡಿಸಿರುವ ಭಾರತ ತಂಡದ ನಾಯಕ ರೋಹಿತ್ ರನ್‌ಬರದಿಂದ ಹೊರಬಂದಿದ್ದಾರೆ. ಕೊನೆಯ ಎರಡು ಇನಿಂಗ್ಸ್‌ಗಳಲ್ಲಿ ಅಜೇಯ 76 ಮತ್ತು 70 ರನ್ ಸಿಡಿಸಿದ್ದಾರೆ. ಪಾಂಡ್ಯ ಮುಂಬೈ ಇಂಡಿಯನ್ಸ್‌ನ ಯಶಸ್ವಿ ಆಟಗಾರ ಎನಿಸಿದ್ದಾರೆ. ಬಿಗು ಓವರುಗಳ ಜೊತೆ ಆಕ್ರಮಣಕಾರಿ ಆಟ ಆಡುತ್ತಿದ್ದಾರೆ.
ಬೌಲಿಂಗ್‌ನಲ್ಲಿ ದೀಪಕ್ ಚಾಹರ್ ಮತ್ತು ಟ್ರೆಂಟ್ ಬೌಲ್ಟ್ ಅವರೂ ಪರಿಣಾಮಕಾರಿ ಎನಿಸಿದ್ದಾರೆ.
ನಿಕೋಲಸ್ ಪೂರನ್ (377 ರನ್), ಮಿಚೆಲ್ ಮಾರ್ಷ್ (344) ಮತ್ತು ಏಡನ್ ಮರ್ಕರಂ (326) ಅವರು ಲಖನೌ ತಂಡದ ಬ್ಯಾಟಿಂಗ್ ಆಧಾರಸ್ತಂಭ ಎನಿಸಿದ್ದಾರೆ. ಕೊನೆಗಳಿಗೆಯಲ್ಲಿ ತಂಡಕ್ಕೆ ಸೇರ್ಪಡೆಗೊಂಡ ಶಾರ್ದೂಲ್ ಠಾಕೂರ್ (12 ವಿಕೆಟ್) ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ಪಿನ್ನರ್ ರವಿ ಬಿಷ್ಣೋಯಿ ನಿರೀಕ್ಷಿತ ಮಟ್ಟದಲ್ಲಿ ಮಿಂಚುತ್ತಿಲ್ಲ. ಆದರೆ ಇನ್ನೊಬ್ಬ ಸ್ಪಿನ್ನರ್ ದಿಗ್ವೇಶ್ ರಾಠಿ ಈ ಆವೃತ್ತಿಯಲ್ಲಿ ಛಾಪು ಮೂಡಿಸಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 3.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.