ನಿಕೋಲಸ್ ಪೂರನ್
ಲಖನೌ: ಲಖನೌ ಸೂಪರ್ ಜೈಂಟ್ಸ್‌ನ ಆಕ್ರಮಣಕಾರಿ ಬ್ಯಾಟರ್ ನಿಕೋಲಸ್ ಪೂರನ್ ಮತ್ತು ಬೆಂಕಿಯುಗುಳುತ್ತಿರುವ ಮೊಹಮ್ಮದ್ ಸಿರಾಜ್ ಅವರ ಮುಖಾಮುಖಿಗೆ ವೇದಿಕೆ ಸಿದ್ಧಗೊಂಡಿದೆ. ಲಖನೌ ತಂಡವು ಶನಿವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದ್ದು ಸಿರಾಜ್ ಸವಾಲನ್ನು ಲಯದಲ್ಲಿರುವ ಪೂರನ್ ಹೇಗೆ ಉತ್ತರಿಸುತ್ತಾರೆ ಎಂಬ ಕುತೂಹಲವಿದೆ.
ಲಖನೌದ ಉರಿಬಿಸಿಲಿನಲ್ಲಿ ನಡೆಯುವ ಈ ಪಂದ್ಯದಲ್ಲಿ ಹೋರಾಟ ನಿರೀಕ್ಷಿಸಲಾಗಿದೆ. ಟೈಟನ್ಸ್ (8) ಸತತವಾಗಿ ನಾಲ್ಕು ಪಂದ್ಯಗಳನ್ನು ಗೆದ್ದಿದ್ದು ನಿವ್ವಳ ರನ್‌ರೇಟ್ ಆಧಾರದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎಲ್‌ಎಸ್‌ಜಿ ತಂಡದ ಆಟ ಕೂಡ ಏರುಹಾದಿಯಲ್ಲಿದೆ.
ಮೂರನೇ ಕ್ರಮಾಂಕದಲ್ಲಿ ಆಡುವ ಪೂರನ್ ಐದು ಇನಿಂಗ್ಸ್‌ಗಳಲ್ಲಿ ಒಮ್ಮೆ ಮಾತ್ರ ವಿಫಲರಾಗಿದ್ದಾರೆ. 24 ಸಿಕ್ಸರ್, 25 ಬೌಂಡರಿಗಳು ಈ ಬಾರಿ ಅವರ ಬ್ಯಾಟಿನಿಂದ ಹರಿದಿದ್ದು ಅವರು ಸಾಧಿಸಿರುವ ಪ್ರಾಬಲ್ಯಕ್ಕೆ ಪುರಾವೆಯಾಗಿವೆ. 288 ರನ್ ಹೊಡೆದು ಬ್ಯಾಟರ್‌ಗಳ ಪಂಕ್ತಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 225ರ ಸ್ಟ್ರೈಕ್‌ರೇಟ್ ಅವರ ತೋರಿರುವ ಪರಾಕ್ರಮ ಸೂಚಿಸುತ್ತಿದೆ.
ಸಿರಾಜ್ ಕೂಡ ಒಳ್ಳೆಯ ಲಯದಲ್ಲಿದ್ದಾರೆ. ಐದು ಪಂದ್ಯಗಳಿಂದ 10 ವಿಕೆಟ್‌ಗಳನ್ನು ಪಡೆದಿದ್ದು ಇಕಾನಮಿ ದರ 7.70ರ ಬಳಿಯಿದೆ. ತಂಡಕ್ಕೆ ಎರಡು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಪವರ್‌ಪ್ಲೇ ಅವಧಿಯಲ್ಲಿ ಅವರು ಬಿಗುದಾಳಿ ಸಂಘಟಿಸಿದ್ದಾರೆ. ಹೀಗಾಗಿ ಪೂರನ್ ಮಾತ್ರವಲ್ಲ, ಏಡನ್ ಮರ್ಕರಂ ಮತ್ತು ಮಿಚೆಲ್ ಮಾರ್ಷ್ ಕೂಡ ಅವರನ್ನು ಎದುರಿಸುವಾಗ ಎಚ್ಚರಿಕೆ ವಹಿಸಬೇಕಾಗಬಹುದು.
ಕಗಿಸೊ ರಬಾಡ ಅನುಪಸ್ಥಿತಿ ಟೈಟನ್ಸ್‌ಗೆ ಸಮಸ್ಯೆ ತಂದಿಲ್ಲ. ಪ್ರಸಿದ್ಧಕೃಷ್ಣ (8 ವಿಕೆಟ್) ಈ ಬಾರಿ ಗಮನ ಸೆಳೆಯುತ್ತಿದ್ದಾರೆ. ಎಡಗೈ ಸ್ಪಿನ್ನರ್ ಆರ್.ಸಾಯಿಕಿಶೋರ್ (10 ವಿಕೆಟ್) ಅವರ ತಂಡದ ಅನುಭವಿ ರಶೀದ್ ಖಾನ್ ಹಿನ್ನಡೆ ಮರೆಮಾಚಿದ್ದಾರೆ.
ನಾಯಕರ ವೈಫಲ್ಯ: ಟೈಟನ್ಸ್ ನಾಯಕ ಶುಭಮನ್ ಗಿಲ್ ಮತ್ತು ಲಖನೌ ನಾಯಕ ರಿಷಭ್ ಪಂತ್ ಇಬ್ಬರೂ ಸೊಗಸಾದ ಆಟಕ್ಕೆ ಹೆಸರುವಾಸಿ. ಆದರೆ ಐಪಿಎಲ್‌ನಲ್ಲಿ ಇವರು ಕಿಚ್ಚೆಬ್ಬಿಸಿಲ್ಲ.
ಗಿಲ್ 2023ರಲ್ಲಿ 890 ರನ್ ಹೊಡೆದು ರನ್ ಹೊಳೆ ಹರಿಸಿದ್ದರು. ತಂಡದ ನಾಯಕತ್ವ ವಹಿಸಿಕೊಂಡ ಮೇಲೆ ಅವರು ಸರಾಗವಾಗಿ ಆಡಲು ವಿಫಲರಾಗಿದ್ದಾರೆ. ಇದುವರೆಗೆ 146ರ ಸ್ಟ್ರೈಕ್‌ರೇಟ್‌ನಲ್ಲಿ 148 ರನ್ ಗಳಿಸಿದ್ದಾರೆ. ಸಾಯಿ ಸುದರ್ಶನ್ (273), ಜೋಸ್ ಬಟ್ಲರ್ (203) ಟೈಟನ್ಸ್ ಬ್ಯಾಟರ್‌ಗಳಲ್ಲಿ ಯಶಸ್ಸು ಕಂಡಿದ್ದಾರೆ.
ಈ ಬಾರಿಯ ಮೆಗಾ ಹರಾಜಿನಲ್ಲಿ ದಾಖಲೆ ₹27 ಕೋಟಿ ಮೌಲ್ಯ ಪಡೆದಿರುವ ಪಂತ್ ಒಮ್ಮೆಯೂ ಮಿಂಚಿಲ್ಲ. ನಾಲ್ಕು ಇನಿಂಗ್ಸ್‌ಗಳಲ್ಲಿ ಅವರು ಗಳಿಸಿರುವುದು ಬರೇ 19 ರನ್‌ಗಳನ್ನಷ್ಟೇ.
ಪಂದ್ಯ ಆರಂಭ: ಮಧ್ಯಾಹ್ನ 3.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.