ADVERTISEMENT

IPL 2025 | ಕೊಹ್ಲಿ ತವರಲ್ಲಿ ಗೆದ್ದ RCB; ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಏಪ್ರಿಲ್ 2025, 18:15 IST
Last Updated 27 ಏಪ್ರಿಲ್ 2025, 18:15 IST
<div class="paragraphs"><p>ವಿರಾಟ್ ಕೊಹ್ಲಿ ಮತ್ತು ಕೃಣಾಲ್‌ ಪಾಂಡ್ಯ</p></div>

ವಿರಾಟ್ ಕೊಹ್ಲಿ ಮತ್ತು ಕೃಣಾಲ್‌ ಪಾಂಡ್ಯ

   

ಚಿತ್ರ ಕೃಪೆ: x/@cricbuzz

ನವದೆಹಲಿ: ಮಿಂಚಿನ ಅರ್ಧಶತಕ ಗಳಿಸಿದ ಕೃಣಾಲ್ ಪಾಂಡ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಜಯದ ಕಾಣಿಕೆ ನೀಡಿದರು. 

ADVERTISEMENT

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಿಸಿತು. ಇದರೊಂದಿಗೆ ಈ ಸಲದ ಟೂರ್ನಿಯಲ್ಲಿ ಆರ್‌ಸಿಬಿಯು  ತವರಿನಾಚೆಯ ಪಂದ್ಯಗಳಲ್ಲಿ ಅಜೇಯ ಓಟವನ್ನು ಮುಂದುವರಿಸಿತು. ಈಚೆಗೆ ಬೆಂಗಳೂರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಜಯಿಸಿತ್ತು. ಅದರ ಮುಯ್ಯಿ ತೀರಿಸಿಕೊಳ್ಳುವಲ್ಲಿಯೂ ರಜತ್ ಪಾಟೀದಾರ್ ಬಳಗ ಇಲ್ಲಿ ಯಶಸ್ವಿಯಾಯಿತು. ಅಷ್ಟೇ ಅಲ್ಲ; ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

163 ರನ್‌ಗಳ ಗೆಲುವಿನ ಗುರಿಯನ್ನು ಸುಲಭವಾಗಿ ಸಾಧಿಸುವ ವಿಶ್ವಾಸದಲ್ಲಿ ಆರ್‌ಸಿಬಿ ಇತ್ತು. ಅದಕ್ಕೆ ತಕ್ಕಂತ ಯುವಪ್ರತಿಭೆ ಜೇಕಬ್ ಬೆಥೆಲ್ (12 ರನ್) ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡುವ ವಿಶ್ವಾಸ ಮೂಡಿಸಿದರು. ಆದರೆ ಇನಿಂಗ್ಸ್‌ನ 3ನೇ ಓವರ್‌ ಬೌಲಿಂಗ್‌ ಮಾಡಿದ ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್  ಸತತ ಎರಡು ಎಸೆತಗಳಲ್ಲಿ ಜೇಕಬ್ ಮತ್ತು ದೇವದತ್ತ ಪಡಿಕ್ಕಲ್ ವಿಕೆಟ್‌ಗಳನ್ನು ಕಬಳಿಸಿದರು. ಜೇಕಬ್ ಅವರು ದೊಡ್ಡ ಹೊಡೆತ ಆಡುವ ಭರದಲ್ಲಿ ಕರುಣ್ ನಾಯರ್‌ಗೆ ಕ್ಯಾಚ್ ಆದರೆ, ಪಡಿಕ್ಕಲ್ ಕ್ಲೀನ್‌ಬೌಲ್ಡ್ ಆದರು. 

ಕ್ರೀಸ್‌ಗೆ ಬಂದ ರಜತ್ ಪಾಟೀದಾರ್ (6 ರನ್) ಅವರು ಫೀಲ್ಡರ್‌ ಕರುಣ್ ಅವರು ಮಾಡಿದ ನಿಖರ ಥ್ರೋಗೆ ರನ್‌ಔಟ್ ಆದರು. ಆಗ ತಂಡದ ಸ್ಕೋರ್ 26 ರನ್‌ಗಳಿಗೆ 3 ವಿಕೆಟ್‌ಗಳು. ಈ ಹಂತದಲ್ಲಿ ಕೊಹ್ಲಿ ಕೂಡ ತಮ್ಮ ಆಟದ ವೇಗವನ್ನು ತಗ್ಗಿಸಿದರು. ಆದರೆ ವೇಗಿ ಮಿಚೆಲ್ ಸ್ಟಾರ್ಕ್ ಅವರ ಎಸೆತಗಳಲ್ಲಿ ಬೌಂಡರಿಗಳನ್ನು ಬಾರಿಸುವ ಮೂಲಕ ತಮ್ಮ ಪರಾಕ್ರಮ ಮೆರೆದರು. 

ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಕೃಣಾಲ್ ಇನಿಂಗ್ಸ್ ದಿಕ್ಕು ಬದಲಿಸಿದರು. ಕೃಣಾಲ್ ಬೀಡುಬೀಸಾಗಿ ಬ್ಯಾಟ್‌ ಝಳಪಿಸಿದರು. ಅವರು ವಿರಾಟ್ ಗಿಂತ ಮುನ್ನವೇ ಅರ್ಧಶತಕದ ಗಡಿ ದಾಟಿದರು. 47 ಎಸೆತಗಳಲ್ಲಿ ಅಜೇಯ 73 ರನ್‌ ಗಳಿಸಿದರು. ಅಲ್ಲದೇ ವಿರಾಟ್  ಅವರೊಂದಿಗೆ ನಾಲ್ಕನೇ ವಿಕೆಟ್ ಜತೆಯಾಟದಲ್ಲಿ 119 ರನ್ ಸೇರಿಸಿದರು. ವಿರಾಟ್ 45 ಎಸೆತಗಳಲ್ಲಿ 50ರ ಗಡಿ ಮುಟ್ಟಿದರು. ಟೂರ್ನಿಯಲ್ಲಿ ಇದು ಅವರ ಆರನೇ ಅರ್ಧಶತಕ. ಅಲ್ಲದೇ ‘ಆರೆಂಜ್ ಕ್ಯಾಪ್’ ಕೂಡ ಪಡೆದರು. ಗೆಲುವಿಗೆ 17 ರನ್‌ಗಳ ಅಗತ್ಯವಿದ್ದ ಸಂದರ್ಭದಲ್ಲಿ ಚಾಮೀರಾ ಎಸೆತದಲ್ಲಿ ವಿರಾಟ್ ಅವರು ಸ್ಟಾರ್ಕ್‌ಗೆ ಕ್ಯಾಚ್ ಆದರು. ಟಿಮ್ ಡೇವಿಡ್ ಅವರು ಕೃಣಾಲ್‌ ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. 

ಭುವಿ, ಹೇಜಲ್‌ವುಡ್ ದಾಳಿ:

ಟಾಸ್ ಗೆದ್ದ ಆರ್‌ಸಿಬಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಂಡದ ವೇಗಿಗಳಾದ ಭುವನೇಶ್ವರ್ ಕುಮಾರ್ (33ಕ್ಕೆ3) ಮತ್ತು ಜೋಶ್ ಹೇಜಲ್‌ವುಡ್ (36ಕ್ಕೆ2) ಅವರ ನಿಖರ ದಾಳಿಯಿಂದಾಗಿ ಡೆಲ್ಲಿ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 162 ರನ್ ಗಳಿಸಿತು. 

ಕನ್ನಡಿಗ ಕೆ.ಎಲ್. ರಾಹುಲ್ (41; 39ಎ, 4X3) ಹಾಗೂ ಟ್ರಿಸ್ಟನ್ ಸ್ಟಬ್ಸ್‌ (34; 18ಎ, 4X5, 6X1) ಆಟ ಚೇತೋಹಾರಿಯಾಗಿತ್ತು.  

ಸಂಕ್ಷಿಪ್ತ ಸ್ಕೋರು:

ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 8ಕ್ಕೆ162 (ಅಭಿಷೇಕ್ ಪೊರೆಲ್ 28, ಫಾಫ್ ಡುಪ್ಲೆಸಿ 22, ಕೆ.ಎಲ್. ರಾಹುಲ್ 41, ಟ್ರಿಸ್ಟನ್ ಸ್ಟಬ್ಸ್‌ 34, ಭುವನೇಶ್ವರ್ ಕುಮಾರ್ 33ಕ್ಕೆ3, ಜೋಶ್ ಹೇಜಲ್‌ವುಡ್ 36ಕ್ಕೆ2) ರಾಯಲ್ ಚಾಲೆಂಜರ್ಸ್ ಬೆಂಗಳೂರು:  18.3 ಓವರ್‌ಗಳಲ್ಲಿ 4ಕ್ಕೆ165 (ವಿರಾಟ್ ಕೊಹ್ಲಿ 51, ಕೃಣಾಲ್ ಪಾಂಡ್ಯ ಅಜೇಯ 73, ಟಿಮ್ ಡೇವಿಡ್ ಅಜೇಯ 19, ಅಕ್ಷರ್ ಪಟೇಲ್ 19ಕ್ಕೆ2, ದುಷ್ಮಂತ ಚಾಮೀರ 24ಕ್ಕೆ1) ಫಲಿತಾಂಶ: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 6 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ ಕೃಣಾಲ್‌ ಪಾಂಡ್ಯ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.