ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿಯ ರಂಗು ವಿಭಿನ್ನವಾಗುವ ಸಾಧ್ಯತೆ ಇದೆ. ಏಕೆಂದರೆ; ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ‘ರನ್ ಯಂತ್ರ’ ವಿರಾಟ್ ಕೊಹ್ಲಿ ಮತ್ತು ಗರಿಷ್ಠ ಸಂಖ್ಯೆಯ ವಿಕೆಟ್ ಸಂಪಾದಿಸಿರುವ ‘ಸ್ಪಿನ್ ತಂತ್ರಗಾರ’ ಯಜುವೇಂದ್ರ ಚಾಹಲ್ ಮುಖಾಮುಖಿಯಾಗುತ್ತಿದ್ದಾರೆ.
ಮೂರು ವರ್ಷಗಳ ಹಿಂದೆ ತಾವು ಪ್ರತಿನಿಧಿಸುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಯಜುವೇಂದ್ರ ಚಾಹಲ್ ಅವರು ಕಣಕ್ಕಿಳಿಯಲಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡದ ‘ಟ್ರಂಪ್ ಕಾರ್ಡ್’ ಅವರಾಗಿದ್ದಾರೆ. ಮೂರು ದಿನಗಳ ಹಿಂದಷ್ಟೇ; ಮುಲ್ಲನಪುರದ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್‌ಗೆ 111 ರನ್‌ಗಳ ಅಲ್ಪಗುರಿ ನೀಡಿತ್ತು. ಆದರೆ ಚೆಸ್ ಆಟಗಾರ ಕೂಡ ಆಗಿರುವ ಚಾಹಲ್ ಅವರು ಕೋಲ್ಕತ್ತ ತಂಡಕ್ಕೆ ‘ಚೆಕ್ ಮೇಟ್’ ನೀಡಿದರು. 4 ವಿಕೆಟ್‌ಗಳನ್ನು ಗಳಿಸಿದ್ದ ಅವರು ಪಂಜಾಬ್ ಗೆಲುವಿಗೆ ಕಾರಣರಾಗಿದ್ದರು.
ಚಾಹಲ್‌ಗೆ ಬೆಂಗಳೂರಿನ ಪಿಚ್ ಚಿರಪರಿಚಿತ. 2014ರಿಂದ ಎಂಟು ಆವೃತ್ತಿಗಳಲ್ಲಿ ಚಾಹಲ್ ಅವರು ಆರ್‌ಸಿಬಿಯಲ್ಲಿ ಆಡಿದ್ದರು. ಆಗ ನಾಯಕರಾಗಿದ್ದ ಕೊಹ್ಲಿಗೆ ಚಾಹಲ್ ನೆಚ್ಚಿನ ಬೌಲರ್ ಆಗಿದ್ದರು. 2016ರಲ್ಲಿ ಆರ್‌ಸಿಬಿ ಫೈನಲ್ ತಲುಪುವಲ್ಲಿ ಚಾಹಲ್ ಕಾಣಿಕೆ ಮಹತ್ವದ್ದಾಗಿತ್ತು. 2022ರಲ್ಲಿ ರಾಜಸ್ಥಾನ ರಾಯಲ್ಸ್‌ಗೆ ಸೇರ್ಪಡೆಯಾದ ಅವರು ಅಲ್ಲಿಯೂ ತಮ್ಮ ಕೈಚಳಕ ತೋರಿದ್ದರು. ಈಗ ಕಿಂಗ್ಸ್‌ನಲ್ಲಿ ಮೆರೆಯುತ್ತಿದ್ದಾರೆ.
ರಜತ್ ಪಾಟೀದಾರ್ ನಾಯಕತ್ವದ ಬೆಂಗಳೂರು ತಂಡವು ಈ ಬಾರಿ ತವರಿನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಜಯಿಸಿಲ್ಲ. ಅದರಲ್ಲೂ ಹೋದವಾರ ಇಲ್ಲಿ ನಡೆದಿದ್ದ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಜಯಿಸಲು ಕನ್ನಡಿಗ ಕೆ.ಎಲ್. ರಾಹುಲ್ ಕಾರಣರಾಗಿದ್ದರು. ರಾಹುಲ್ ಕೂಡ ಈ ಹಿಂದೆ ಕೆಲವರ್ಷ ಆರ್‌ಸಿಬಿಯಲ್ಲಿ ಆಡಿದ್ದರು. ಅದೇ ರೀತಿ ಈ ಪಂದ್ಯದಲ್ಲಿ ಕಿಂಗ್ಸ್‌ನಲ್ಲಿರುವ ಚಾಹಲ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವೇಗಿ ವೈಶಾಖ ವಿಜಯಕುಮಾರ್ ಇದ್ದಾರೆ. ಮೂವರೂ ಈ ಹಿಂದೆ ಆರ್‌ಸಿಬಿಯಲ್ಲಿ ಆಡಿದ್ದವರು. ಅವರೇ ಈಗ ರಜತ್ ಬಳಗಕ್ಕೆ ‘ತಿರುಗುಬಾಣ’ವಾಗುವರೇ?
ಮ್ಯಾಕ್ಸ್‌ವೆಲ್ ಇದುವರೆಗೆ ಬ್ಯಾಟ್‌ಗಿಂತ ಹೆಚ್ಚು ಆಫ್‌ಬ್ರೆಕ್ ಬೌಲಿಂಗ್‌ನಲ್ಲಿ ಉಪಯುಕ್ತ ಕಾಣಿಕೆ ನೀಡಿದ್ದಾರೆ. ವೈಶಾಖ ಅವರು ಗುಜರಾತ್ ಜೈಂಟ್ಸ್ ಎದುರಿನ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿ ತಂಡದ ಸೋಲು ತಪ್ಪಿಸಿದ್ದರು. ವಿಕೆಟ್ ಪಡೆಯದಿದ್ದರೂ ಕಡಿಮೆ ರನ್ ನೀಡಿ ಬ್ಯಾಟರ್‌ಗಳನ್ನು ಕಾಡಿದ್ದರು.
ಆತಿಥೇಯ ತಂಡದ ಬ್ಯಾಟರ್‌ಗಳು ಉತ್ತಮ ಲಯದಲ್ಲಿದ್ದಾರೆ. ಅವರನ್ನು ಕಟ್ಟಿಹಾಕುವುದು ಸುಲಭಸಾಧ್ಯವಲ್ಲ. ಈಚೆಗೆ ಜೈಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸುವಲ್ಲಿ ಆರ್‌ಸಿಬಿ ಬ್ಯಾಟಿಂಗ್ ಪಡೆ ಪ್ರಮುಖ ಪಾತ್ರವಹಿಸಿತ್ತು. ಮೂರು ಅರ್ಧಶತಕಗಳನ್ನು ಹೊಡೆದಿರುವ ವಿರಾಟ್, ಆರು ಪಂದ್ಯಗಳಿಂದ 203 ರನ್ ಸೂರೆ ಮಾಡಿರುವ ಫಿಲ್ ಸಾಲ್ಟ್, ಲಯಕ್ಕೆ ಮರಳಿರುವ ದೇವದತ್ತ ಪಡಿಕ್ಕಲ್, ನಾಯಕ ರಜತ್ ಮತ್ತು ಫಿನಿಷರ್ ಪಾತ್ರವನ್ನು ನಿಭಾಯಿಸುತ್ತಿರುವ ಜಿತೇಶ್ ಶರ್ಮಾ ಅವರು ಮಧ್ಯಮಕ್ರಮಾಂಕದ ಶಕ್ತಿಯಾಗಿದ್ದಾರೆ. ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಟಿಮ್ ಡೇವಿಡ್ ಮಿಂಚಿದರೆ ತಂಡಕ್ಕೆ ‘ಬೋನಸ್’ ಖಚಿತ. ಇವರೆಲ್ಲರೂ ಈಗ ಚಾಹಲ್ ಸ್ಪಿನ್ ಮಾತ್ರವಲ್ಲ ಎಡಗೈ ವೇಗಿ ಮಾರ್ಕೊ ಯಾನ್ಸೆನ್ ಹಾಗೂ ಅರ್ಷದೀಪ್ ಸಿಂಗ್ ಅವರನ್ನು ಹೇಗೆ ಎದುರಿಸುತ್ತಾರೆಂಬ ಕುತೂಹಲ ಗರಿಗೆದರಿದೆ.
ಪಂಜಾಬ್ ತಂಡದಲ್ಲಿಯೂ ಉತ್ತಮ ಬ್ಯಾಟಿಂಗ್ ಪಡೆ ಇದೆ. ನಾಯಕ ಶ್ರೇಯಸ್, ಟೂರ್ನಿಯಲ್ಲಿ ಒಂದು ಶತಕ ಹೊಡೆದಿರುವ ಪ್ರಿಯಾಂಶ್ ಆರ್ಯ, ಯಾವುದೇ ಪಿಚ್‌ನಲ್ಲಿಯೂ ಗಟ್ಟಿಯಾಗಿ ನಿಲ್ಲಬಲ್ಲ ಪ್ರಭಸಿಮ್ರನ್ ಸಿಂಗ್, ನೆಹಲ್ ವಧೇರಾ ಹಾಗೂ ಶಶಾಂಕ್ ಸಿಂಗ್ ಅವರು ರನ್‌ಗಳ ಮಳೆ ಸುರಿಸುವ ಆಟಗಾರರು. ಇವರನ್ನು ಕಟ್ಟಿಹಾಕುವ ಸವಾಲು ಆತಿಥೇಯ ತಂಡದ ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್ ಮತ್ತು ಸ್ಪಿನ್ನರ್ ಕೃಣಾಲ್ ಪಾಂಡ್ಯ ಅವರ ಮುಂದಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್
ವೈಶಾಖ ವಿಜಯಕುಮಾರ್ ಉತ್ತಮ ಬೌಲರ್. ಒಂದು ಪಂದ್ಯದಲ್ಲಿ ಅವರು ಇಂಪ್ಯಾಕ್ಟ್ ಸಬ್ ಆಗಿ ಉತ್ತಮವಾಗಿ ಆಡಿದ್ದಾರೆ. ಮುಂದೆಯೂ ಅವರಿಗೆ ಉತ್ತಮ ಭವಿಷ್ಯ ಇದೆ. –ಬ್ರಾಡ್ ಹ್ಯಾಡಿನ್ ಸಹಾಯಕ ಕೋಚ್ ಪಂಜಾಬ್ ಕಿಂಗ್ಸ್
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟರ್ ಸ್ನೇಹಿಯಾಗಿರುವುದು ನಮಗೆ ಗೊತ್ತು. ಆದರೆ ಪಿಚ್ ಮೊದಲಿನಂತೆ ಈಗ ಇಲ್ಲ. ಅದಕ್ಕೆ ಕಾರಣ ನನಗೆ ತಿಳಿದಿಲ್ಲ. ಪಂದ್ಯದ ಪ್ರತಿ ಹಂತದ ಅಗತ್ಯಕ್ಕೆ ತಕ್ಕಂತೆ ಯೋಜನೆ ರೂಪಿಸುತ್ತೇವೆ.– ಭುವನೇಶ್ವರ್ ಕುಮಾರ್ ಆರ್‌ಸಿಬಿ ಬೌಲರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.