
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 19ನೇ ಆವೃತ್ತಿಗೆ ಡಿ.16ರಂದು ಅಬುಧಾಬಿಯಲ್ಲಿ ಮಿನಿ ಹರಾಜು ನಡೆಯಲಿದ್ದು, ಹಲವು ಪ್ರಮುಖ ಆಟಗಾರರು ಅಧಿಕ ಮೊತ್ತ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಹರಾಜು ಪ್ರಕ್ರಿಯೆಯಲ್ಲಿ 240 ಭಾರತೀಯರು ಹಾಗೂ 110 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 359 ಆಟಗಾರರ ಹೆಸರಿದೆ.
ಹತ್ತು ತಂಡಗಳಲ್ಲಿ 77 ಸ್ಥಾನಗಳು ಖಾಲಿಯಿದ್ದು, 31 ವಿದೇಶಿ ಆಟಗಾರರನ್ನು ಕೊಂಡುಕೊಳ್ಳಬಹುದಾಗಿದೆ.
ಉತ್ತಮ ಲಯದಲ್ಲಿರುವ ಕೆಲವು ದೇಶಿ ಹಾಗೂ ವಿದೇಶಿ ಆಟಗಾರರು ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗುವ ಭರವಸೆಯಲ್ಲಿದ್ದಾರೆ.
2 ಕೋಟಿ ಮೂಲಬೆಲೆಯಲ್ಲಿ 40 ಆಟಗಾರಿದ್ದು, ಅವರ ಮೇಲೆ ಫ್ರಾಂಚೈಸಿಗಳ ಕಣ್ಣು ನೆಟ್ಟಿದೆ.
ಆಸ್ಟ್ರೇಲಿಯಾದ ಪ್ರಮುಖ ಅಲ್‌ರೌಂಡರ್ ಕ್ಯಾಮೆರೂನ್ ಗ್ರೀನ್ ಅವರ ಮೇಲೆ ಹಲವು ಫ್ರಾಂಚೈಸಿಗಳು ಒಲವು ತೋರಿಸುತ್ತಿವೆ. ಉತ್ತಮ ಲಯದಲ್ಲಿರುವ ಗ್ರೀನ್, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲೂ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. 2023ರ ಐಪಿಎಲ್‌ನಲ್ಲಿ ₹17.5 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದ ಗ್ರೀನ್, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಬಾರಿ ಬ್ಯಾಟರ್‌ಗಳ ಪಟ್ಟಿಯಿಂದ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.
ಭಾರತದ ಟಿ–20 ಸ್ಪೆಷಲಿಸ್ಟ್ ಬೌಲರ್ ಆಗಿ ಗುರುತಿಸಿಕೊಂಡಿರುವ ರವಿ ಬಿಷ್ಣೋಯಿ ಅವರು ಕೂಡ ಹರಾಜಿನಲ್ಲಿ ಅತಿ ಹೆಚ್ಚು ಬೆಲೆ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್‌ಜೆಂಟ್ಸ್ ಪರ ಆಡಿರುವ ರವಿ ಬಿಷ್ಣೋಯಿ ಐಪಿಎಲ್‌ನಲ್ಲಿ 77 ಪಂದ್ಯಗಳಿಂದ 72 ವಿಕೆಟ್ ಕಬಳಿಸಿದ್ದಾರೆ.
ನಿವೃತ್ತಿ ಹಿಂಪಡೆದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರುವ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅವರು ಉತ್ತಮ ಲಯದಲ್ಲಿದ್ದಾರೆ. ಭಾರತದ ವಿರುದ್ಧ 2ನೇ ಟಿ–20 ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ, ಐಪಿಎಲ್ ಫ್ರಾಂಚೈಸಿಗಳ ಗಮನವನ್ನು ತಮ್ಮ ಕಡೆಗೆ ಸೆಳೆದುಕೊಂಡಿದ್ದಾರೆ. ಅನುಭವಿ ಡಿ ಕಾಕ್, ಐಪಿಎಲ್‌ನ 12 ಆವೃತ್ತಿಗಳಲ್ಲಿ ಭಾಗವಹಿಸಿದ್ದು, 6 ತಂಡಗಳ ಪರ ಆಡಿದ್ದಾರೆ. ಐಪಿಎಲ್‌ನಲ್ಲಿ 115 ಪಂದ್ಯಗಳಲ್ಲಿ 3,300 ರನ್ ಗಳಿಸಿದ್ದಾರೆ.
ಸ್ಪೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಕೂಡ ಉತ್ತಮ ಲಯದಲ್ಲಿದ್ದು, ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಐಪಿಎಲ್‌ನಲ್ಲಿ 141 ಪಂದ್ಯಗಳನ್ನು ಆಡಿರುವ ಮಿಲ್ಲರ್, 3077 ರನ್ ಬಾರಿಸಿದ್ದಾರೆ. ಪಂಜಾಬ್ ಕಿಂಗ್ಸ್, ರಾಯಸ್ಥಾನ ರಾಯಲ್ಸ್, ಗುಜರಾತ್ ಜೆಂಟ್ಸ್, ಲಕ್ನೋ ಸೂಪರ್‌ಜೆಂಟ್ಸ್ ಪರ ಆಡಿರುವ ಅನುಭವ ಕೂಡ ಹೊಂದಿದ್ದಾರೆ.
ನ್ಯೂಜಿಲೆಂಡ್ ಆಲ್‌ರೌಂಡರ್ ರಚಿನ್ ರವೀಂದ್ರ ಅವರು ಮೂಲಬೆಲೆ 2 ಕೋಟಿ ಹೊಂದಿದ್ದಾರೆ. ಬ್ಯಾಟಿಂಗ್ ಹಾಗೂ ಸ್ವಿನ್ ಬೌಲಿಂಗ್ ಮೂಲಕ ಗಮನ ಸೆಳೆದಿರುವ ರಚಿನ್, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 18 ಪಂದ್ಯಗಳಿಂದ 413 ರನ್ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.