ADVERTISEMENT

IPL-2020 | RCB vs DC: ಸೋತರೂ ಪ್ಲೇ ಆಫ್‌ ಸ್ಥಾನ ಖಚಿತಪಡಿಸಿಕೊಂಡ ಆರ್‌ಸಿಬಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 14:26 IST
Last Updated 3 ನವೆಂಬರ್ 2020, 14:26 IST
   

ಅಬುಧಾಬಿ: ಪ್ಲೇ ಆಫ್‌ ಹಂತಕ್ಕೆ ತಲುಪಲು ಮಹತ್ವ ಎನಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 6 ವಿಕೆಟ್‌ ಅಂತರದ ಸೋಲು ಅನುಭವಿಸಿತು. ಆದರೂ..19ನೇ ಓವರ್‌ನ ಮುಕ್ತಾಯದವರೆಗೆ ಸೋಲೊಪ್ಪಿಕೊಳ್ಳದೆ ಆಡಿದ ಕಾರಣ ರನ್‌ರೇಟ್‌ ಆಧಾರದಲ್ಲಿ ಪ್ಲೇ ಆಫ್‌ ಸ್ಥಾನವನ್ನು ಖಚಿತ ಪಡಿಸಿಕೊಂಡಿತು.

ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 152 ರನ್ ಕಲೆಹಾಕಿತ್ತು. ಮಹತ್ವದ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಕನ್ನಡಿಗ ದೇವದತ್ತ ಪಡಿಕ್ಕಲ್‌ 41 ಎಸೆತಗಳಲ್ಲಿ 50 ರನ್‌ ಗಳಿಸಿದರು. ನಾಯಕ ವಿರಾಟ್‌ ಕೊಹ್ಲಿ (29) ಮತ್ತು ಎಬಿ ಡಿ ವಿಲಿಯರ್ಸ್‌ (35) ಅಲ್ಪ ಕಾಣಿಕೆ ನೀಡಿದ್ದರಿಂದ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಗಿತ್ತು.

ಈ ಗುರಿ ಎದುರು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿಎರಡನೇ ಓವರ್‌ನಲ್ಲೇ ಪೃಥ್ವಿ ಶಾ (9) ವಿಕೆಟ್‌ ಕಳೆದುಕೊಂಡಿತು. ಆದರೆ, 2ನೇ ವಿಕೆಟ್‌ಗೆ ಜೊತೆಯಾದ ಶಿಖರ್ ಧವನ್‌ ಮತ್ತು ಅಜಿಂಕ್ಯ ರಹಾನೆ 77 ರನ್‌ ಕಲೆಹಾಕಿದರು.ಧವನ್‌ 41 ಎಸೆತಗಳಲ್ಲಿ 54 ರನ್ ಗಳಿಸಿದರೆ, ರಹಾನೆ 46 ಎಸೆತಗಳಲ್ಲಿ 60 ರನ್ ಕಲೆಹಾಕಿದರು. ಇವರಿಬ್ಬರ ಆಟದ ಬಲದಿಂದ ಡೆಲ್ಲಿ ಜಯ ಸುಲಭವಾಯಿತು.

ADVERTISEMENT

ಕೊನೆಯಲ್ಲಿ ವಿಕೆಟ್ ಕೊಡದೆ ಆಡಿದ ರಿಷಭ್‌ ಪಂತ್‌ (8) ಮತ್ತು ಮಾರ್ಕಸ್‌ ಸ್ಟೋಯಿನಿಸ್‌ (10) ತಮ್ಮ ತಂಡಕ್ಕೆ ಗೆಲುವಿನ ರನ್‌ ಗಳಿಸಿಕೊಟ್ಟರು. ಇದರೊಂದಿಗೆ ಶ್ರೇಯಸ್‌ ಅಯ್ಯರ್‌ ಪಡೆ ಟೂರ್ನಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 8ನೇ ಜಯ ಸಾಧಿಸಿ ಎರಡನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿತು.

ಆರ್‌ಸಿಬಿ ಪರ ಉತ್ತಮವಾಗಿ ಬೌಲಿಂಗ್ ಮಾಡಿದ ಶಹಬಾಜ್‌ ಅಹಮದ್‌, ಕೇವಲ 26 ರನ್ ನೀಡಿ 2 ವಿಕೆಟ್ ಉರುಳಿಸಿದರು. ವಾಷಿಂಗ್ಟನ್ ಸುಂದರ್ (24/1) ಮತ್ತು ಮೊಹಮದ್ ಸಿರಾಜ್ (29/1) ಒಂದೊಂದು ವಿಕೆಟ್ ಪಡೆದುಕೊಂಡರು.

ಸೋತರೂ ಪ್ಲೇಆಫ್‌ಗೆ ಸಾಗಿದ ಆರ್‌ಸಿಬಿ
ಈ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ ಗುರಿ ಎದುರು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 19ನೇ ಓವರ್‌ನ ಕೊನೆಯ ಎಸೆತದಲ್ಲಿ 154 ರನ್‌ ಗಳಿಸಿತು. ಒಂದು ವೇಳೆ ಡೆಲ್ಲಿ ತಂಡ 17.3ಓವರ್‌ ಆಗುವಷ್ಟರಲ್ಲಿ ಗುರಿ ಮುಟ್ಟಿದ್ದಿದ್ದರೆ, ಆರ್‌ಸಿಬಿ ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿಯುತ್ತಿತ್ತು ಮತ್ತು ಮುಂದಿನ ಪಂದ್ಯದ ಫಲಿತಾಂಶಕ್ಕಾಗಿ ಕಾಯಬೇಕಾಗಿತ್ತು. ಆದರೆ, ಹಾಗಾಗಲಿಲ್ಲ.

ಸದ್ಯ ಮುಂಬೈ ಇಂಡಿಯನ್ಸ್‌ 18 ಅಂಕಗಳೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಡೆಲ್ಲಿ 16 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಆರ್‌ಸಿಬಿ ಮತ್ತು ಕೆಕೆಆರ್‌ ತಲಾ 7 ಜಯದೊಂದಿಗೆ 14 ಪಾಯಿಂಟ್ಸ್‌ಗಳನ್ನು ಹೊಂದಿವೆಯಾದರೂ, ಆರ್‌ಸಿಬಿ ರನ್‌ರೇಟ್‌ ಕೆಕೆಆರ್‌ಗಿಂತ ಉತ್ತಮವಾಗಿರುವುದರಿಂದ ಮೂರನೇ ಸ್ಥಾನದಲ್ಲಿ ಉಳಿದಿದೆ.

ನಾಳೆ ನಡೆಯಲಿರುವ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್‌ ಮತ್ತು 5ನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ಸೆಣಸಾಟ ನಡೆಸಲಿವೆ. ರೈಸರ್ಸ್ ಖಾತೆಯಲ್ಲಿ 12 ಅಂಕಗಳಿದ್ದುಒಂದುವೇಳೆ ಈ ಪಂದ್ಯದಲ್ಲಿ ಜಯ ಸಾಧಿಸಿದರೆ, ಕೋಲ್ಕತ್ತ ಟೂರ್ನಿಯಿಂದ ಹೊರಬೀಳಬೇಕಾಗುತ್ತದೆ. ಏಕೆಂದರೆ ರೈಸರ್ಸ್‌ ತಂಡದ ರನ್‌ರೇಟ್‌ ಕೋಲ್ಕತ್ತಕ್ಕಿಂತ ಉತ್ತಮವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.