ADVERTISEMENT

IPL 2021: ಉನ್ನತ ಸ್ಥಾನಕ್ಕೇರುವತ್ತ ಕೊಹ್ಲಿ ಚಿತ್ತ

ರಾಯಲ್ ಚಾಲೆಂಜರ್ಸ್ ಬೆಂಗಳೂರು–ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿ ಇಂದು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 17:52 IST
Last Updated 5 ಅಕ್ಟೋಬರ್ 2021, 17:52 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಅಬುಧಾಬಿ: ಪ್ಲೇ ಆಫ್‌ ಹಂತಕ್ಕೆ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಛಲದಲ್ಲಿದೆ.

ಬುಧವಾರ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಸನ್‌ರೈಸರ್ಸ್‌ ವಿರುದ್ಧ ಸೆಣಸಲಿದೆ. ಕೇನ್ ವಿಲಿಯಮ್ಸನ್ ನಾಯಕತ್ವದ ಹೈದರಾಬಾದ್ ಈಗಾಗಲೇ ಪ್ಲೇ ಆಫ್‌ ಹಾದಿಯಿಂದ ಹೊರಬಿದ್ದಿದೆ.

ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ. 12 ಪಂದ್ಯಗಳಿಂದ 16 ಅಂಕ ಗಳಿಸಿರುವ ವಿರಾಟ್ ಕೊಹ್ಲಿ ಬಳಗವು ಇನ್ನುಳಿದಿರುವ ಎರಡೂ ಪಂದ್ಯಗಳಲ್ಲಿ ಗೆದ್ದರೆ 20 ಅಂಕಗಳಿಗೇರಲಿದೆ. ತಲಾ 13 ಪಂದ್ಯಗಳನ್ನಾಡಿರುವ ಡೆಲ್ಲಿ 20 ಮತ್ತು ಚೆನ್ನೈ ಸೂಪರ್ ಕಿಂಗ್ಸ್ 18 ಅಂಕಗಳೊಂದಿಗೆ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ. ಆರ್‌ಸಿಬಿಯು ಶುಕ್ರವಾರ ತನ್ನ ಕೊನೆಯ ಪಂದ್ಯದಲ್ಲಿ ಡೆಲ್ಲಿಯನ್ನು ಎದುರಿಸಲಿದೆ.

ADVERTISEMENT

ಸತತ ಮೂರು ಪಂದ್ಯಗಳ ಜಯದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ವಿರಾಟ್ ಬಳಗವು ಗೆಲುವಿನ ಓಟ ಮುಂದುವರಿಸುವತ್ತ ಚಿತ್ತ ನೆಟ್ಟಿದೆ. ಸತತ ಮೂರು ಪಂದ್ಯಗಳಲ್ಲಿ ಅರ್ಧಶತಕ ಗಳಿಸಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ನಿಯಂತ್ರಿಸುವುದು ಎದುರಾಳಿ ಬೌಲ್‌ಗಳ ಮುಂದಿರುವ ಪ್ರಮುಖ ಸವಾಲು.

ವಿರಾಟ್ ಮತ್ತು ದೇವದತ್ತ ಪಡಿಕ್ಕಲ್ ಉತ್ತಮ ಅರಂಭ ನೀಡಿದರೆ, ಭರತ್, ಮ್ಯಾಕ್ಸ್‌ವೆಲ್ ಮತ್ತು ಎಬಿ ಡಿವಿಲಿಯರ್ಸ್ ದೊಡ್ಡ ಮೊತ್ತವನ್ನು ಪೇರಿಸುವ ವಿಶ್ವಾಸ ಮೂಡಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಹರ್ಷಲ್ ಪಟೇಲ್, ಸ್ಪಿನ್ನರ್ ಯಜುವೇಂದ್ರ ಚಾಹಲ್ ಅಮೋಘ ಲಯದಲ್ಲಿದ್ದಾರೆ. ಮೊಹಮ್ಮದ್ ಸಿರಾಜ್ ಮತ್ತು ಶಾಬಾಜ್ ಅಹಮದ್ ಕೂಡ ಎದುರಾಳಿಗಳಿಗೆ ಒತ್ತಡ ಹಾಕಬಲ್ಲ ಪರಿಣತರು.

ಸನ್‌ರೈಸರ್ಸ್ ತಂಡವು ಈ ಪಂದ್ಯದಲ್ಲಿಯೂ ಡೇವಿಡ್ ವಾರ್ನರ್ ಮತ್ತು ಕರ್ನಾಟಕದ ಮನೀಷ್ ಪಾಂಡೆಯವರನ್ನು ಕಣಕ್ಕಿಳಿಸುವುದು ಅನುಮಾನವಾಗಿದೆ. ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್ ಅವರನ್ನು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಛಲದ ಆಟ ಕಂಡುಬಂದಿಲ್ಲ. ಜೇಸನ್ ಹೋಲ್ಡರ್ ಮತ್ತು ಭುವನೇಶ್ವರ್ ಕುಮಾರ್ ತಮ್ಮ ಆಲ್‌ರೌಂಡ್‌ ಆಟಕ್ಕೆ ಕುದುರಿಕೊಂಡರೆ, ಆರ್‌ಸಿಬಿ ಕನಸಿಗೆ ಅಡ್ಡಗಾಲು ಹಾಕಬಹುದು.

ತಂಡಗಳು: ವಿರಾಟ್ ಕೊಹ್ಲಿ (ನಾಯಕ), ದೇವದತ್ತ ಪಡಿಕ್ಕಲ್, ಎಬಿ ಡಿವಿಲಿಯರ್ಸ್, ಶ್ರೀಕರ್ ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ಡೇನಿಯಲ್ ಕ್ರಿಸ್ಟಿಯನ್, ಕೈಲ್ ಜೆಮಿಸನ್, ಶಾಬಾಜ್ ಅಹಮದ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್, ಪವನ್ ದೇಶಪಾಂಡೆ, ಸಚಿನ್ ಬೇಬಿ.

ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಜಾನಿ ಬೆಸ್ಟೊ, ಪ್ರಿಯಂ ಗರ್ಗ್, ವೃದ್ಧಿಮಾನ್ ಸಹಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ಕೇದಾರ್ ಜಾಧವ್, ಮೊಹಮ್ಮದ್ ನಬಿ, ವಿಜಯಶಂಕರ್, ಭುವನೇಶ್ವರ್ ಕುಮಾರ್, ಜೆ. ಸುಚಿತ್, ಜೇಸನ್ ರಾಯ್, ರಶೀದ್ ಖಾನ್, ಸಂದೀಪ್ ಶರ್ಮಾ, ಡೇವಿಡ್ ವಾರ್ನರ್, ಮನೀಷ್ ಪಾಂಡೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.