ADVERTISEMENT

ತವರಿನಲ್ಲಿ ಗೆಲುವಿನ ‘ಶ್ರೇಯ’ ಯಾರಿಗೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು–ರಾಜಸ್ಥಾನ್ ರಾಯಲ್ಸ್ ನಡುವಣ ಹಣಾಹಣಿ ಇಂದು

ಗಿರೀಶದೊಡ್ಡಮನಿ
Published 29 ಏಪ್ರಿಲ್ 2019, 20:00 IST
Last Updated 29 ಏಪ್ರಿಲ್ 2019, 20:00 IST
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ (ಎಡ) ಮತ್ತು ಕೋಚ್‌ ಪ್ಯಾಡ್ ಆಪ್ಟನ್ ಅಭ್ಯಾಸದ ಸಂದರ್ಭದಲ್ಲಿ ಕಂಡುಬಂದ ಬಗೆ –ಪ್ರಜಾವಾಣಿ ಚಿತ್ರ/ಆರ್‌. ಶ್ರೀಕಂಠ ಶರ್ಮಾ
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ (ಎಡ) ಮತ್ತು ಕೋಚ್‌ ಪ್ಯಾಡ್ ಆಪ್ಟನ್ ಅಭ್ಯಾಸದ ಸಂದರ್ಭದಲ್ಲಿ ಕಂಡುಬಂದ ಬಗೆ –ಪ್ರಜಾವಾಣಿ ಚಿತ್ರ/ಆರ್‌. ಶ್ರೀಕಂಠ ಶರ್ಮಾ   

ಬೆಂಗಳೂರು: ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಸುಮಾರು ಮೂವತ್ತೈದು ದಿನಗಳ ನಂತರ ತವರೂರಿಗೆ ಮರಳಿದ್ದಾರೆ.

ಕರ್ನಾಟಕದ ಲೆಗ್‌ಸ್ಪಿನ್ನರ್ ಶ್ರೇಯಸ್ ಈ ಅವಧಿಯಲ್ಲಿ ತಮ್ಮ ರಾಜಸ್ಥಾನ್ ರಾಯಲ್ಸ್‌ ತಂಡವು ಪುಟಿದೇಳಲು ನೆನಪಿಡುವಂತಹ ಕಾಣಿಕೆಗಳನ್ನು ಕೊಟ್ಟಿದ್ದಾರೆ. ಐಪಿಎಲ್ ಟೂರ್ನಿಯ ಬಹುತೇಕ ಎಲ್ಲ ತಂಡಗಳ ಪ್ರಮುಖ ಬ್ಯಾಟ್ಸ್‌ಮನ್‌ಗಳ ವಿಕೆಟ್ ಹಾರಿಸುವಲ್ಲಿ ಸಫಲರಾಗಿದ್ದಾರೆ. ಒಟ್ಟು 15 ವಿಕೆಟ್‌ಗಳು ಅವರ ಜೇಬಿನಲ್ಲಿವೆ.

ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಶ್ರೇಯಸ್ ಯಾವ ರೀತಿಯ ಸವಾಲು ಒಡ್ಡವರು ಎಂಬ ಕುತೂಹಲ ಗರಿಗೆದರಿದೆ.

ADVERTISEMENT

ತಾವು ಆಡಿ ಬೆಳೆದ ಅಂಗಳದಲ್ಲಿ ಮಿಂಚುವ ತವಕದಲ್ಲಿ ಶ್ರೇಯಸ್ ಕೂಡ ಇದ್ದಾರೆ. ಏಪ್ರಿಲ್ 2ರಂದು ಜೈಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿಯ ‘ಟ್ರಂಪ್‌ಕಾರ್ಡ್‌’ ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್‌ಗಳನ್ನು ಶ್ರೇಯಸ್ ಗಳಿಸಿದ್ದರು. ಅದು ಆ ಪಂದ್ಯದ ಫಲಿತಾಂಶವು ರಾಜಸ್ಥಾನದತ್ತ ಒಲಿಯಲು ಕಾರಣವಾಗಿತ್ತು.

ಭಾನುವಾರ ರಾತ್ರಿ ದೆಹಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿಯು ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಸೋತಿತ್ತು. ಅದರೊಂದಿಗೆ ಪ್ಲೇ ಆಫ್‌ ಹಾದಿಯಿಂದ ಹೊರಬಿದ್ದಿತ್ತು.

ರಾಯಲ್ಸ್ ಎದುರಿನ ಪಂದ್ಯವನ್ನು ಗೆದ್ದು ನಂತರ ಮೇ 4ರಂದು ನಡೆಯುವ ಕೊನೆಯ ಪಂದ್ಯವನ್ನೂ ಗೆದ್ದರೂ ಆರ್‌ಸಿಬಿಗೆ ಪ್ಲೇ ಆಫ್‌ ಅವಕಾಶ ಸಿಗುವುದಿಲ್ಲ. ವೇಗದ ಬೌಲರ್ ಡೇಲ್ ಸ್ಟೇನ್ ಮತ್ತು ಆಲ್‌ರೌಂಡರ್ ಮೋಯಿನ್ ಅಲಿ ಅವರ ಅನುಪಸ್ಥಿತಿಯು ತಂಡವನ್ನು ಕಾಡುತ್ತಿದೆ. ಡೆಲ್ಲಿ ಎದುರಿನ ಪಂದ್ಯದಲ್ಲಿ ಕೊನೆಯ ಹಂತದ ಓವರ್‌ಗಳಲ್ಲಿ ರನ್‌ ನಿಯಂತ್ರಿಸುವಲ್ಲಿ ಆರ್‌ಸಿಬಿ ಬೌಲರ್‌ಗಳಿಗೆ ಎಡವಿದ್ದರು. ನವದೀಪ್ ಸೈನಿ, ಯಜುವೇಂದ್ರ ಚಾಹಲ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಮಾತ್ರ ಸಮಾಧಾನಕರ ಬೌಲಿಂಗ್ ಮಾಡು ತ್ತಿದ್ದಾರೆ. ಸ್ಟೋಯಿನಿಸ್ ಬ್ಯಾಟಿಂಗ್‌ನಲ್ಲಿ ಒಂದಿಷ್ಟು ರನ್‌ಗಳ ಕಾಣಿಕೆ ನೀಡುತ್ತಿದ್ದಾರೆ. ಆದರೆ ಬ್ಯಾಟಿಂಗ್ ವಿಭಾಗದಲ್ಲಿರುವ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಪಾರ್ಥಿವ್ ಪಟೇಲ್, ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಅವರು ದೊಡ್ಡ ಇನಿಂಗ್ಸ್‌ ಆಡದಿದ್ದರೆ ತಂಡ ಮುಗ್ಗರಿಸುವುದು ಖಚಿತ ಎಂಬುದು ಮತ್ತೊಮ್ಮೆ ಸಾಬೀತಾಯಿತು. ತವರಿನಲ್ಲಿ ಜಯದ ಸಿಹಿ ಸವಿಯಬೇಕಾದರೆ ಅವರ ಮೇಲೆ ಹೆಚ್ಚಿನ ಹೊಣೆ ಇರುವುದು ಖಚಿತ.

ಆರ್‌ಸಿಬಿಗೆ ಈ ಪಂದ್ಯದ ಫಲಿತಾಂಶದಿಂದ ಆಗಬೇಕಿರುವುದು ಏನೂ ಇಲ್ಲ. ಆದರೆ ಹತ್ತು ಪಾಯಿಂಟ್ಸ್‌ ಗಳಿಸಿ, ಏಳನೇ ಸ್ಥಾನದಲ್ಲಿರುವ ರಾಜಸ್ಥಾನ ತಂಡಕ್ಕೆ ಇನ್ನೂ ಸಣ್ಣ ಆಸೆ ಇದೆ. ಆದರೆ ಒಂದೊಮ್ಮೆ ಆರ್‌ಸಿಬಿ ಎದುರು ಸೋತರೆ ರಾಯಲ್ಸ್‌ನ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿದಂತಾಗುತ್ತದೆ. ಸ್ಟಿವನ್ ಸ್ಮಿತ್ ಆಡುವುದು ಖಚಿತವಿಲ್ಲ. ಆದ್ದರಿಂದ ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್ ಅವರ ಮೇಲೆ ಹೆಚ್ಚಿನ ಹೊಣೆ ಇದೆ. ಬೌಲಿಂಗ್‌ನಲ್ಲಿ ಜಯದೇವ್ ಉನದ್ಕತ್, ಶ್ರೇಯಸ್, ಕೃಷ್ಣಪ್ಪ ಗೌತಮ್ ಮತ್ತು ಸ್ಟುವರ್ಟ್ ಬಿನ್ನಿ ಅವರು ಮಿಂಚಿದರೆ ಆರ್‌ಸಿಬಿಗೆ ತೊಂದರೆ ಕಟ್ಟಿಟ್ಟ ಬುತ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.