‘ಹದಿನಾಲ್ಕು ವರ್ಷದವನಿದ್ದಾಗ ನಾನೇನು ಮಾಡುತ್ತಿದ್ದೆ?’
ಹಲವು ಮಂದಿ ಕ್ರಿಕೆಟಿಗರು ಈಗ ಇಂಥದ್ದೊಂದು ಪ್ರಶ್ನೆ ಹಾಕಿಕೊಳ್ಳುತ್ತಿದ್ದಾರಂತೆ. ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಕೂಡ ಈ ಪ್ರಶ್ನೆ ಹಾಕಿಕೊಂಡು, ‘ನಾನು, ಆಗ ಹದಿನೈದು ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದೆ. ಆದರೆ, ಭಾರತದ ವೈಭವ್ ಸೂರ್ಯವಂಶಿಯನ್ನು ನೋಡಿ, ಆ ವಯಸ್ಸಲ್ಲಿ ಘಟಾನುಘಟಿ ಬೌಲರ್‌ಗಳ ಎದುರು ಶತಕ ಬಾರಿಸಿದ್ದಾನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಜೈವಿಕ ನಿಯಮದ ಶಿಲಾಶಾಸನ ಅಲ್ಲವಾದರೂ ಹದಿನಾಲ್ಕು ವರ್ಷದ ಹುಡುಗನ ಶರೀರವೆಂದರೆ ಅದಿನ್ನೂ ಮಕ್ಕಳದು ಎಂಬುದು ಸಾಮಾನ್ಯ ಗ್ರಹಿಕೆ. ಶರೀರದಲ್ಲಿ ಮಾಂಸ–ಖಂಡಗಳು ಒಂದು ಸ್ವರೂಪ ಪಡೆಯುತ್ತಿರುವಂತಹ ವಯೋಮಾನ ಅದು. ವೈಭವ್‌ನ ಮುಂದೆ ಇದನ್ನೆಲ್ಲ ವಿವರಿಸಲು ಹೋದರೆ, ಆತ ನಕ್ಕು ಬಿಟ್ಟಾನು. ಏಕೆಂದರೆ, ಪ್ರಚಲಿತ ಕ್ರಿಕೆಟ್ ಜಗತ್ತಿನ ಕೆಲವು ಶ್ರೇಷ್ಠ ಬೌಲರ್‌ಗಳ ಎದುರು ಶತಕ ಸಿಡಿಸಿ, ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಶ್ರೇಯಕ್ಕೆ ಪಾತ್ರನಾದ ದಿಟ್ಟ ಬಾಲಕ ಆತ.
ಹದಿನೆಂಟು ವರ್ಷಗಳ ಹಿಂದೆ ಐಪಿಎಲ್ ಶುರುವಾದಾಗ ವೈಭವ್ ಇನ್ನೂ ಜನಿಸಿರಲೇ ಇಲ್ಲ. ಆದರೆ, ಬಿಹಾರದ ಸಮಷ್ಟಿಪುರ ಹತ್ತಿರದ ತಾಜಪುರದ ಈ ಹುಡುಗ, ಐಪಿಎಲ್‌ನಲ್ಲಿ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ್ದಾನೆ. ರಾಜಸ್ಥಾನ ರಾಯಲ್ಸ್ ತಂಡದ ಈ ಆಟಗಾರ, ಗುಜರಾತ್ ಟೈಟನ್ಸ್ ತಂಡದ ಎದುರು ಕೇವಲ 38 ಎಸೆತಗಳಲ್ಲಿ 101 ರನ್‌ಗಳ ಮಹಾಪೂರ ಹರಿಸಿದಾಗ ಆತನ ಎರಡು ಅಸಾಧಾರಣ ಗುಣಗಳು ಕ್ರಿಕೆಟ್ ಜಗತ್ತಿನ ಕಣ್ಣು ಸೆಳೆದವು. ಅವುಗಳೇ ಆತನ ಅತ್ಯದ್ಭುತ ಎನಿಸುವಂತಹ ತೋಳ್ಬಲ ಮತ್ತು ಬೆರಗು ಮೂಡಿಸುವಂತಹ ಆತ್ಮವಿಶ್ವಾಸ. ಭಾರತದ ಇಂದಿನ ಹದಿಹರೆಯದ ಪೀಳಿಗೆಯಲ್ಲಿ, ಯಾರೇ ಆಗಲಿ, ಒಂದು ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸಬಹುದು. ಅದೆಂದರೆ, ಹಿಂದಿನವರ ಹಾಗೆ ಇಂದಿನ ಮಕ್ಕಳು ನಾಚಿಕೆ ಇಲ್ಲವೆ ಹಿಂಜರಿಕೆ ಮನೋಭಾವದವರಲ್ಲ. ಎಂತಹ ಸನ್ನಿವೇಶದಲ್ಲೂ ಅವರು ಮುನ್ನುಗ್ಗುವ ಛಾತಿ ಉಳ್ಳವರು. ವೈಭವ್, ಅಂತಹ ಪೀಳಿಗೆಯ ಪ್ರತಿನಿಧಿ. ‘ಯಾವುದೇ ಎಸೆತದಿಂದ ನಾನು ಸಿಕ್ಸರ್ ಎತ್ತಲು ಸಾಧ್ಯವಿರುವಾಗ ಅದರಿಂದ ಒಂದು ರನ್ ಏಕೆ ಹೊಡೆಯಬೇಕು’ ಎಂದು ತನ್ನ ಮೊದಲ ಕೋಚ್ ಮನೀಶ್ ಓಝಾ ಅವರನ್ನು ಪ್ರಶ್ನಿಸಿದ್ದ ಪೋರನೀತ. ಐಪಿಎಲ್‌ನಲ್ಲಿ ತಾನು ಎದುರಿಸಿದ ಮೊದಲ ಎಸೆತವನ್ನೇ (ಶಾರ್ದೂಲ್ ಠಾಕೂರ್ ಬೌಲರ್) ಸಿಕ್ಸರ್‌ಗೆ ಅಟ್ಟಿ, ಅಂತಹ ಛಾತಿಯನ್ನು ಢಾಳಾಗಿ ಪ್ರದರ್ಶಿಸಿದ ದಾಂಡಿಗನೂ ಹೌದು.
ತಾಂತ್ರಿಕವಾಗಿ ಹೇಳುವುದಾದರೆ, ಆಡುವ ಹನ್ನೊಂದರ ತಂಡದಲ್ಲಿ ಆತ ಸ್ಥಾನ ಪಡೆದಿದ್ದೇ ಗಾಯಗೊಂಡ ಸಂಜು ಸ್ಯಾಮ್ಸನ್ ಅವರ ಬದಲಿ ಆಟಗಾರನಾಗಿ. ಮತ್ತೆ, ಎದುರಿನ ಬೌಲಿಂಗ್ ದಾಳಿಯ ಅನುಭವ ಹೇಗಿತ್ತೆಂದರೆ ಆ ಎಲ್ಲ ಬೌಲರ್‌ಗಳು ಒಟ್ಟಾರೆಯಾಗಿ 697 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದವರಾಗಿದ್ದರು. ಪಂದ್ಯ ನಡೆದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣ ಪ್ರೇಕ್ಷಕರಿಂದ ಖಚಾಖಚ್ ಭರ್ತಿಯಾಗಿತ್ತು. ಈ ಯಾವ ಸಂಗತಿಯೂ ವೈಭವ್‌ನ ಪಟಾಕಿ ಸಿಡಿಸಾಟದಂತಹ ಸ್ಫೋಟಕ ಬ್ಯಾಟಿಂಗ್‌ಗೆ ಅಡ್ಡಿಯಾಗಲಿಲ್ಲ. ಆತನಿಗೆ ತಾನು ಮುಂದೆ ಎದುರಿಸಲಿರುವ ಎಸೆತ ಮಾತ್ರ ಮುಖ್ಯವಾಗಿತ್ತು. ಗಟ್ಟಿಯಾದ ಮತ್ತು ಸಮತಟ್ಟಾದ ನಿರ್ಜೀವ ಪಿಚ್ ಬೇರೆ ‘ನಿನಗೆ ಬೇಕಾದ ಹೊಡೆತಗಳನ್ನು ಹೊಡೆದುಕೊ’ ಎಂಬ ಪರವಾನಗಿಯನ್ನು ಆತನಿಗೆ ಕೊಟ್ಟಂತಿತ್ತು. ಆತನ ಬೀಸಾಟದಲ್ಲಿ ಅಂಜಿಕೆ, ಅಳುಕು ಎನ್ನುವ ಪದಗಳು ಸಹ ಬೌಂಡರಿ ಗೆರೆಯನ್ನು ದಾಟಿ ಆಚೆಗೆ ಹೋಗಿ ಬಿದ್ದಿದ್ದವು. ರಶೀದ್ ಖಾನ್ ಅವರ ಎಸೆತದಲ್ಲಿ ಮಿಡ್ ವಿಕೆಟ್‌ನಲ್ಲಿ ಸೊಗಸಾದ ಸಿಕ್ಸರ್ ಎತ್ತಿ, ಶತಕ ಪೂರೈಸಿದಾಗ ವೈಭವ್, ಬ್ಯಾಟ್‌ನೊಂದಿಗೆ ಒಂದು ಸೆಲ್ಯೂಟ್ ಮಾಡಿ ಗಹನವಾಗಿಯೇ ಸಂಭ್ರಮಾಚರಣೆ ಮಾಡಿದ್ದ.
ಬಿಹಾರದ ಈ ಪುಟಾಣಿಗೆ ಬ್ಯಾಟ್ ಹಿಡಿದ ದಿನದಿಂದಲೂ ವೆಸ್ಟ್ ಇಂಡೀಸ್‌ನ ಬ್ರಯಾನ್ ಲಾರಾ ಅವರ ಜಪವಂತೆ. ಲಾರಾ ಅವರಂತೆಯೇ ವೈಭವ್ ಕೂಡ ಎಡಗೈ ಬ್ಯಾಟ್ಸ್‌ಮನ್. ಲಾರಾ ಅವರಂತೆಯೇ ಚೆಂಡಿನ ಗತಿಯನ್ನು ಕ್ಷಣಮಾತ್ರದಲ್ಲಿ ಅಳೆದು, ಸರ‍್ರನೆ ಹಿಂದೆ ಸರಿದು ಬ್ಯಾಟ್ ಬೀಸುವ ಕಲೆ ವೈಭವ್‌ಗೆ ಸಿದ್ಧಿಸಿದೆ. ಹೆದರಿಕೆಯಾಗಲಿ, ದಣಿವಾಗಲಿ ಆತನ ಆಂಗಿಕ ‘ಭಾಷೆ’ಯಲ್ಲಿ ಗೋಚರಿಸದೇ ಇರುವುದನ್ನು ತಜ್ಞರು ಗುರುತಿಸಿದ್ದಾರೆ.
‘ನಾನು ಇಂದು ಏನಾಗಿದ್ದೇನೆಯೋ ಅದಕ್ಕೆ ನನ್ನ ತಂದೆ–ತಾಯಿಯೇ ಕಾರಣ’ ಎಂದು ವೈಭವ್ ಹೇಳಿದ್ದಾನೆ. ಹೌದು, ವೈಭವ್‌ನ ಕೌಶಲ ಹೀಗೆ ಹರಳುಗಟ್ಟುವಲ್ಲಿ ಆತನ ತಂದೆ–ತಾಯಿಯ ಪಾತ್ರ ದೊಡ್ಡದಿದೆ. ಇಂತಹ ಪ್ರತಿಭೆಯನ್ನು ಶೋಧಿಸಿ, ₹ 1.1 ಕೋಟಿ ಕೊಟ್ಟು ಖರೀದಿಸಿ, ತರಬೇತಿ ನೀಡಿದ ರಾಜಸ್ಥಾನ ರಾಯಲ್ಸ್ ತಂಡದ ಕೊಡುಗೆಯೂ ಇದೆ. ವರ್ಷಗಳ ಹಿಂದೆ ಮಗನನ್ನು ತೋಳಲ್ಲಿ ಹೊತ್ತುಕೊಂಡು ಐಪಿಎಲ್ ಪಂದ್ಯ ತೋರಿಸಿದ್ದ ಸಂಜೀವ್ ಸೂರ್ಯವಂಶಿ, ಆತನ ಭವಿಷ್ಯವನ್ನು ರೂಪಿಸುವುದಕ್ಕಾಗಿ ತಮ್ಮ ಕೃಷಿಭೂಮಿಯನ್ನೇ ಮಾರಿದ್ದರು. ತನ್ನ ತಾಯಿ ತನಗಾಗಿ ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದನ್ನೂ ವೈಭವ್ ಹೇಳಿಕೊಂಡಿದ್ದಾನೆ. ಈಗ ಕೋಟಿ, ಕೋಟಿ ರೂಪಾಯಿಯ ಹಣದ ಹೊಳೆ ಈ ಕ್ರಿಕೆಟ್ ವಾಮನನ ಮನೆ ಹುಡುಕಿಕೊಂಡು ಬರುತ್ತಿದೆ. ಹಣ ಮತ್ತು ಜನಪ್ರಿಯತೆಯಿಂದ ಕೂಡಿದ ವೈಭವದ ಆಕಾಶದಲ್ಲಿ ಈ ಹುಡುಗ ತೇಲದಿರಲಿ ಎಂದು ಸೂಕ್ಷ್ಮ ಮನಸ್ಸಿನ ಹಲವು ಕ್ರಿಕೆಟಿಗರು ಎಚ್ಚರಿಸಿದ್ದಾರೆ.
ಬೀಸಾಟಕ್ಕೆ ಹೆಸರಾಗಿದ್ದ ಕ್ರಿಸ್ ಗೇಲ್ ಅವರನ್ನು ಅಭಿಮಾನಿಗಳು ಬಾಸ್ ಎಂದು ಕರೆಯುತ್ತಿದ್ದರು. ಈಗ ವೈಭವ್‌ಗೆ ‘ದಿ ಬಾಸ್ ಬೇಬಿ’/ ‘ಬೇಬಿ ಬಾಸ್’ ಎಂದು ಕೊಂಡಾಡುತ್ತಿದ್ದಾರೆ. ಶತಕ ಸಿಡಿಸಿದ ಮರು ಪಂದ್ಯದಲ್ಲಿ ‘ದಿ ಬಾಸ್ ಬೇಬಿ’ ಮುಂಬೈ ಇಂಡಿಯನ್ಸ್ ವಿರುದ್ಧ ಮಾಡಿದ್ದು ಶೂನ್ಯ ಸಂಪಾದನೆ. ಲಾಂಗ್ ಆನ್‌ನಲ್ಲಿ ಚೆಂಡು ದಾಟಿಸಲಾಗದೆ ಸುಲಭದ ಕ್ಯಾಚಿತ್ತು ಆತ ನಿರಾಸೆ ಅನುಭವಿಸಿದ್ದ. ‘ವೈಭವ್‌ನ ಹೋಮ್ ವರ್ಕ್ ಪೂರ್ಣಗೊಳಿಸಿದ್ದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಆತ ಶೂನ್ಯದೊಂದಿಗೆ ವಾಪಸ್ ಆಗಿದ್ದರಿಂದ ತಾವು ಪೂರ್ಣಗೊಳಿಸಿದ್ದ ಹೋಮ್ ವರ್ಕ್ ಅಳಿಸಿಹಾಕಿದರು’ ಎಂದು ನೆಟ್ಟಿಗರು ಕುಹಕವಾಡಿದ್ದರು. ಶತಕ ಬಾರಿಸಿದಾಗ ಹೊಗಳಿ ಅಟ್ಟಕ್ಕೆ ಏರಿಸುವುದು, ಸೋತಾಗ ಆಳಿಗೊಂದು ಕಲ್ಲು ಎಸೆಯುವುದು ಇಂದಿನ ಅಭಿಮಾನದ ಪರಿ. ಎರಡು ದಶಕಗಳ ಹಿಂದೆ ಅಮೆರಿಕದ ಫ್ರೆಡಿ ಅಡು ಎಂಬ ಬಾಲಕನ ಕಾಲ್ಚಳಕ ಕಂಡವರು ಆತನನ್ನು ಫುಟ್‌ಬಾಲ್ ದಂತಕಥೆ ಪೀಲೆಗೆ ಹೋಲಿಸಿದ್ದರು. ಆದರೆ, ಮುಂದೆ ಪೀಲೆ ಅವರ ಸಾಧನೆಯ ಹತ್ತಿರಕ್ಕೂ ಫ್ರೆಡಿ ಸುಳಿಯಲಿಲ್ಲ. ದೊಡ್ಡ ತಾರೆಗಳ ಜತೆ ಹೋಲಿಕೆಗೆ ಒಳಗಾಗುತ್ತಿರುವ ಸೂರ್ಯವಂಶಿಯ ಕ್ರಿಕೆಟ್ ವೈಭವ ಆ ರೀತಿ ಮುಕ್ಕಾಗದಿರಲಿ ಎಂಬುದಷ್ಟೇ ಸದ್ಯದ ಹಾರೈಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.