ADVERTISEMENT

ಐಪಿಎಲ್ ಮ್ಯಾಚ್, ಬಿಡ್ಡಿಂಗ್ ಫಿಕ್ಸಿಂಗ್ ಮಾಡುತ್ತಿದ್ದ ಶ್ರೀನಿವಾಸನ್: ಲಲಿತ್ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ನವೆಂಬರ್ 2024, 16:51 IST
Last Updated 27 ನವೆಂಬರ್ 2024, 16:51 IST
ಲಲಿತ್ ಮೋದಿ
ಲಲಿತ್ ಮೋದಿ   

ಬೆಂಗಳೂರು: ದೇಶಬಿಟ್ಟು ತೆರಳಿರುವ ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ವಿರುದ್ಧ ಗಂಭೀರ ಫಿಕ್ಸಿಂಗ್ ಆರೋಪಗಳನ್ನು ಮಾಡಿದ್ದಾರೆ.

ತಮ್ಮ ತಂಡ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲೇ ಫಿಕ್ಸಿಂಗ್ ಮಾಡಿಕೊಳ್ಳುತ್ತಿದ್ದ ಶ್ರೀನಿವಾಸನ್, ಸಿಎಸ್‌ಕೆ ಪಂದ್ಯಗಳಿದ್ದಾಗ ತಂಡಕ್ಕೆ ಅನುಕೂಲ ಮಾಡಿಕೊಡಲೆಂದು ಚೆನ್ನೈ ಮೂಲದ ಅಂಪೈರ್‌ಗಳನ್ನೇ ನೇಮಕ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ರಾಜ್ ಶರ್ಮಾ ಅವರ ಯೂಟ್ಯೂಬ್ ಚಾನಲ್‌ನ ‘ಫಿಗರಿಂಗ್ ಔಟ್’ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಆಗ ಬಿಸಿಸಿಐ ಕಾರ್ಯದರ್ಶಿ ಆಗಿದ್ದ ಶ್ರೀನಿವಾಸನ್ ವಿರುದ್ಧ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಶ್ರೀನಿವಾಸನ್‌ಗೆ ಐಪಿಎಲ್ ಏಳಿಗೆಗಿಂತ ತಮ್ಮ ಮಾಲೀಕತ್ವದ ಸಿಎಸ್‌ಕೆ ತಂಡದ ಯಶಸ್ಸು ಮುಖ್ಯವಾಗಿತ್ತು. ಅದಕ್ಕಾಗಿ ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದರು. ಚೆನ್ನೈ ಮೂಲದ ಅಂಪೈರ್‌ಗಳನ್ನೇ ಪಂದ್ಯಕ್ಕೆ ನಿಯೋಜಿಸುತ್ತಿದ್ದರು ಎಂದು ಮೋದಿ ಆರೋಪಿಸಿರುವುದಾಗಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ADVERTISEMENT

'ಐಪಿಎಲ್ ಅನ್ನು ಶ್ರೀನಿವಾಸನ್ ಇಷ್ಟಪಡುತ್ತಿರಲಿಲ್ಲ. ಐಪಿಎಲ್ ಸಕ್ಸಸ್ ಆಗುತ್ತದೆ ಎಂದು ಅವರು ಭಾವಿಸಿರಲಿಲ್ಲ. ಆದರೆ, ಅದು ಸಕ್ಸಸ್ ಆದಾಗ ಎಲ್ಲರೂ ಲಾಭ ಪಡೆಯಲು ಶುರು ಮಾಡಿದರು. ಬಿಸಿಸಿಐ ಸದಸ್ಯ ಮತ್ತು ಕಾರ್ಯದರ್ಶಿಯಾಗಿದ್ದ ಶ್ರೀನಿವಾಸನ್, ನನ್ನ ದೊಡ್ಡ ವಿರೋಧಿಯಾಗಿದ್ದರು. ಅಂಪೈರ್ ಫಿಕ್ಸಿಂಗ್ ಸೇರಿದಂತೆ ಹಲವು ಅಕ್ರಮ ಎಸಗಿದರು’ ಎಂದು ಆರೋಪಿಸಿದ್ದಾರೆ.

ಮೊದ ಮೊದಲು ಅವರು ಅಂಪೈರ್‌ಗಳನ್ನು ಬದಲಿಸುತ್ತಿದ್ದಾಗ ನನಗೆ ಅದರ ಮರ್ಮ ಅರಿವಿಗೆ ಬಂದಿರಲಿಲ್ಲ. ಸಿಎಸ್‌ಕೆ ಪಂದ್ಯಗಳಲ್ಲಿ ಚೆನ್ನೈ ಅಂಪೈರ್ ಅನ್ನು ಹಾಕುತ್ತಿದ್ದಾರೆಂದು ಆಮೇಲೆ ಅರಿತುಕೊಂಡೆ. ಅದನ್ನು ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ. ಅದನ್ನು ನಾನು ಬಹಿರಂಗಪಡಿಸಲು ಪ್ರಯತ್ನಿಸಿದಾಗ ಸಂಪೂರ್ಣವಾಗಿ ನನ್ನ ವಿರೋಧಿಯಾಗಿದ್ದರು ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.

ಫ್ಲಿಂಟಾಫ್‌ಗೆ ಬಿಡ್ ಮಾಡದಂತೆ ಫ್ರಾಂಚೈಸಿಗಳಿಗೆ ಸಂದೇಶ

2009ರ ಐಪಿಎಲ್ ಆವೃತ್ತಿಯಲ್ಲಿ ಫ್ಲಿಂಟಾಪ್ ಅವರಿಗೆ ಬಿಡ್ ಮಾಡದಂತೆ ಶ್ರೀನಿವಾಸನ್ ಅವರು ಇತರೆ ಫ್ರಾಂಚೈಸಿಗಳಿಗೆ ಹೇಳಿದ್ದರು. ಈ ಬಗ್ಗೆ ವಿಚಾರಿಸಿದಾಗ, ಹೌದು ನಾನು ಸಂದೇಶ ಕಳುಹಿಸಿದ್ದು ನಿಜ. ಫ್ಲಿಂಟಾಫ್ ನನ್ನ ತಂಡಕ್ಕೆ ಬೇಕಿತ್ತು ಎಂಬುದಾಗಿ ಶ್ರೀನಿವಾಸನ್ ಹೇಳಿದ್ದರು ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.

2013ರ ಐಪಿಎಲ್ ಫಿಕ್ಸಿಂಗ್ ಹಗರಣ

2013ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗಂಭೀರ ಸ್ಪಾಟ್ ಫಿಕ್ಸಿಂಗ್ ಹಗರಣದ ಆರೋಪ ಕೇಳಿಬಂದಿತ್ತು. ಇದಕ್ಕಾಗಿ ಫ್ರಾಂಚೈಸಿಯ ಉನ್ನತ ಅಧಿಕಾರಿ ಮತ್ತು ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರನ್ನು ಫೋರ್ಜರಿ ಮತ್ತು ವಂಚನೆ ಆರೋಪದ ಮೇಲೆ ಬಂಧಿಸಲಾಗಿತ್ತು. ಬುಕ್ಕಿಗಳ ಜೊತೆ ಸಂಪರ್ಕ ಹೊಂದಿದ್ದ ಬಂಧಿತ ವೀರೇಂದ್ರ ‘ವಿಂದೂ’ ದಾರಾ ಸಿಂಗ್ ಅವರೊಂದಿಗೆ ಗುರುನಾಥ್ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.