ADVERTISEMENT

ಬಲಿಷ್ಠ ತಂಡಗಳ ಪ್ರಬಲ ಪೈಪೋಟಿ ನಿರೀಕ್ಷೆ

ಮೊಹಾಲಿಯಲ್ಲಿ ಇಂದು ಆತಿಥೇಯ ಕಿಂಗ್ಸ್‌ ಇಲೆವನ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲು

ಪಿಟಿಐ
Published 1 ಏಪ್ರಿಲ್ 2019, 0:26 IST
Last Updated 1 ಏಪ್ರಿಲ್ 2019, 0:26 IST
ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ಕಿಂಗ್ಸ್ ಇಲೆವನ್‌ ತಂಡದ ಡೇವಿಡ್ ಮಿಲ್ಲರ್‌ (ಎಡ) ಮತ್ತು ಕೆ.ಎಲ್‌.ರಾಹುಲ್ ಮಿಂಚುವ ಭರವಸೆಯಲ್ಲಿದ್ದಾರೆ – ಪಿಟಿಐ ಚಿತ್ರ
ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ಕಿಂಗ್ಸ್ ಇಲೆವನ್‌ ತಂಡದ ಡೇವಿಡ್ ಮಿಲ್ಲರ್‌ (ಎಡ) ಮತ್ತು ಕೆ.ಎಲ್‌.ರಾಹುಲ್ ಮಿಂಚುವ ಭರವಸೆಯಲ್ಲಿದ್ದಾರೆ – ಪಿಟಿಐ ಚಿತ್ರ   

ಮೊಹಾಲಿ: ನಗರದಲ್ಲಿ ಈಗ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಅವರ ಯಾರ್ಕರ್‌ ಬೌಲಿಂಗ್‌ನದೇ ಮಾತು.

ಶನಿವಾರ ರಾತ್ರಿ ಪ್ರಬಲ ಅಸ್ತ್ರ ಬಳಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದ ರಬಾಡ ಸೋಮವಾರದ ಪಂದ್ಯದಲ್ಲಿ ಆತಿಥೇಯ ಕಿಂಗ್ಸ್ ಇಲೆವನ್ ತಂಡದ ಬ್ಯಾಟಿಂಗ್ ಬಳಗವನ್ನು ಕಟ್ಟಿಹಾಕಬಲ್ಲರೇ ಎಂಬ ಕುತೂಹಲಕಾರಿ ಪ್ರಶ್ನೆ ಈಗ ಕ್ರಿಕೆಟ್‌ ಪ್ರಿಯರನ್ನು ಕಾಡುತ್ತಿದೆ.

ಕಿಂಗ್ಸ್ ಇಲೆವನ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಆಡಿದ ಮೂರು ಪಂದ್ಯ ಗಳಲ್ಲಿ ಎರಡನ್ನು ಗೆದ್ದಿವೆ. ಈ ತಂಡಗಳ ನಡುವೆ ರೋಚಕ ಹಣಾಹಣಿ ನಿರೀಕ್ಷಿಸಲಾಗಿದ್ದು ಅದರ ಸವಿ ಅನುಭವಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.

ADVERTISEMENT

ಕ್ರಿಸ್‌ ಗೇಲ್‌, ಕೆ.ಎಲ್‌.ರಾಹುಲ್ ಮತ್ತು ಮಯಂಕ್ ಅಗರವಾಲ್ ಅವರನ್ನು ಒಳಗೊಂಡ ಕಿಂಗ್ಸ್ ಇಲೆವನ್‌ ಬ್ಯಾಟಿಂಗ್ ವಿಭಾಗದವರು ಮಿಂಚಲು ಸಜ್ಜಾಗಿದ್ದಾರೆ. ಅತ್ತ ಡೆಲ್ಲಿ ತಂಡದಲ್ಲಿ ಪೃಥ್ವಿ ಶಾ, ರಿಷಭ್‌ ಪಂತ್‌, ಶಿಖರ್ ಧವನ್‌ ಮತ್ತು ಶ್ರೇಯಸ್‌ ಅಯ್ಯರ್ ಅವರಿಂದಲೂ ಸ್ಫೋಟಕ ಬ್ಯಾಟಿಂಗ್ ನಿರೀಕ್ಷಿಸಲಾಗಿದೆ.

ಮೊದಲ ಎರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ಕೆ.ಎಲ್‌.ರಾಹುಲ್ ಮೂರನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಕ್ರಿಸ್ ಗೇಲ್ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಮಯಂಕ್‌ ಅಗರವಾಲ್ ಕೂಡ ಉತ್ತಮ ಲಯದಲ್ಲಿದ್ದಾರೆ.

ಪಂಜಾಬ್‌ನ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಮೊಹಮ್ಮದ್ ಶಮಿ, ಆ್ಯಂಡ್ರ್ಯೂ ಟೈ ಮತ್ತು ಹಾರ್ಡಸ್‌ ವಿಲ್ಜಾನ್‌ ವೇಗದ ಅಸ್ತ್ರ ಹೊಂದಿದ್ದರೆ ನಾಯಕ ರವಿಚಂದ್ರನ್ ಅಶ್ವಿನ್‌ ತಂಡದ ಸ್ಪಿನ್ ಬೌಲಿಂಗ್‌ನ ಶಕ್ತಿಯಾಗಿದ್ದಾರೆ. ಡೆಲ್ಲಿ ತಂಡದಲ್ಲಿ ರಬಾಡ ಜೊತೆಗೆ ಟ್ರೆಂಟ್ ಬೌಲ್ಟ್, ಇಶಾಂತ್ ಶರ್ಮಾ ಮತ್ತು ಅಕ್ಷರ್ ಪಟೇಲ್‌ ಕೂಡ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಲು ಸಮರ್ಥರಾಗಿದ್ದಾರೆ.

ತಂಡಗಳು
ಕಿಂಗ್ಸ್ ಇಲೆವನ್ ಪಂಜಾಬ್‌:
ರವಿಚಂದ್ರನ್ ಅಶ್ವಿನ್‌ (ನಾಯಕ), ಕ್ರಿಸ್ ಗೇಲ್‌, ಕೆ.ಎಲ್‌.ರಾಹುಲ್‌, ಮಯಂಕ್‌ ಅಗರವಾಲ್‌, ಕರುಣ್ ನಾಯರ್‌, ಮೊಹಮ್ಮದ್ ಶಮಿ, ಮುಜೀಬ್‌ ಉರ್‌ ರಹಿಮಾನ್‌, ಡೇವಿಡ್ ಮಿಲ್ಲರ್, ಸ್ಯಾಮ್ ಕರನ್‌, ವರುಣ್ ಚಕ್ರವರ್ತಿ, ನಿಕೋಲಸ್‌ ಪೂರನ್‌, ಮೊಯಿಸಸ್‌ ಹೆನ್ರಿಕ್ಸ್‌, ಹಾರ್ಡಸ್‌ ವಿಲ್ಜಾನ್‌, ದರ್ಶನ್ ನಾಲ್ಕಂಡೆ, ಸರ್ಫರಾಜ್ ಖಾನ್‌, ಆರ್ಷದೀಪ್ ಸಿಂಗ್‌, ಅಗ್ನಿವೇಶ್‌ ಅಯಾಚಿ, ಹರಪ್ರೀತ್‌ ಬ್ರಾರ್‌, ಮುರುಗನ್‌ ಅಶ್ವಿನ್, ಆಂಡ್ರ್ಯೂ ಟೈ, ಅಂಕಿತ್ ರಜಪೂತ್‌, ಮನದೀಪ್ ಸಿಂಗ್‌, ಸಿಮ್ರಾನ್‌ ಸಿಂಗ್‌.

ಡೆಲ್ಲಿ ಕ್ಯಾಪಿಟಲ್ಸ್‌: ಶ್ರೇಯಸ್ ಅಯ್ಯರ್‌ (ನಾಯಕ), ಕಾಲಿನ್ ಮನ್ರೊ, ಪೃಥ್ವಿ ಶಾ, ಶಿಖರ್ ಧವನ್‌, ಹನುಮ ವಿಹಾರಿ, ಕಾಲಿನ್ ಇಂಗ್ರಾಮ್‌, ಮನಜ್ಯೋತ್ ಕಾರ್ಲಾ, ಕ್ರಿಸ್ ಮಾರಿಸ್‌, ಶೆರ್ಫಾನ್‌ ರೂಥರ್‌ಫೋರ್ಡ್‌, ಕೀಮೊ ಪೌಲ್‌, ಅಕ್ಷರ್ ಪಟೇಲ್‌, ಜಲಜ್ ಸಕ್ಸೇನ, ರಾಹುಲ್ ತೇವತಿಯಾ, ರಿಷಭ್‌ ಪಂತ್‌, ಅಂಕುಶ್ ಬೇನ್ಸ್‌, ಸಂದೀಪ್ ಲಮಿಚಾನೆ, ಆವೇಶ್ ಖಾನ್‌, ಹರ್ಷಲ್ ಪಟೇಲ್‌, ಟ್ರೆಂಟ್‌ ಬೌಲ್ಟ್‌, ಅಮಿತ್ ಮಿಶ್ರಾ, ಕಗಿಸೊ ರಬಾಡ, ಇಶಾಂತ್ ಶರ್ಮಾ, ನಾತು ಸಿಂಗ್‌, ಬಂಡಾರು ಅಯ್ಯಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.