ADVERTISEMENT

ಐಪಿಎಲ್ ಕ್ರಿಕೆಟ್: ಗೆದ್ದ ತಂಡಗಳ ನಡುವೆ ಹಣಾಹಣಿ

ಇಂದು ರಾಜಸ್ಥಾನ್ ರಾಯಲ್ಸ್‌–ಡೆಲ್ಲಿ ಕ್ಯಾಪಿಟಲ್ಸ್‌ ನಡುವಣ ಪಂದ್ಯ

ಪಿಟಿಐ
Published 21 ಏಪ್ರಿಲ್ 2019, 19:45 IST
Last Updated 21 ಏಪ್ರಿಲ್ 2019, 19:45 IST
ರಾಜಸ್ಥಾನ್‌ ರಾಯಲ್ಸ್‌ ತಂಡದವರು ಗೆಲುವಿನ ವಿಶ್ವಾಸದಲ್ಲಿದ್ದಾರೆ
ರಾಜಸ್ಥಾನ್‌ ರಾಯಲ್ಸ್‌ ತಂಡದವರು ಗೆಲುವಿನ ವಿಶ್ವಾಸದಲ್ಲಿದ್ದಾರೆ   

ಜೈಪುರ: ಹಿಂದಿನ ಪಂದ್ಯಗಳಲ್ಲಿ ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿರುವ ರಾಜಸ್ಥಾನ್ ರಾಯಲ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಸೋಮವಾರ ಮತ್ತೊಂದು ಜಯದ ಕನಸಿನೊಂದಿಗೆ ಕಣಕ್ಕಿಳಿಯಲಿವೆ.

ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಈ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಸಾರಥ್ಯದ ಕ್ಯಾಪಿಟಲ್ಸ್‌, ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.

ಶನಿವಾರ ಫಿರೋಜ್‌ ಷಾ ಕೋಟ್ಲಾ ಮೈದಾನದಲ್ಲಿ ನಡೆದಿದ್ದ ಹಣಾಹಣಿಯಲ್ಲಿ ಶ್ರೇಯಸ್ ಬಳಗ ಕಿಂಗ್ಸ್‌ ಇಲೆವನ್‌ ಪಂಜಾಬ್ ತಂಡವನ್ನು ಮಣಿಸಿತ್ತು. ಸ್ಟೀವನ್‌ ಸ್ಮಿತ್‌ ನಾಯಕತ್ವದ ರಾಜಸ್ಥಾನ್‌, ಹಿಂದಿನ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್‌ಗೆ ಸೋಲಿನ ರುಚಿ ತೋರಿಸಿತ್ತು.

ADVERTISEMENT

ಡೆಲ್ಲಿ ತಂಡ ‘ಪ್ಲೇ ಆಫ್‌’ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಆದರೆ ಸ್ಮಿತ್‌ ಪಡೆಯ ಕನಸು ಸಾಕಾರವಾಗಬೇಕಾದರೆ, ಮುಂದಿನ ಎಲ್ಲಾ ಪಂದ್ಯಗಳಲ್ಲೂ ಗೆಲ್ಲುವುದು ಅವಶ್ಯ. ಈ ನಿಟ್ಟಿನಲ್ಲಿ ಡೆಲ್ಲಿ ಎದುರಿನ ಹೋರಾಟ ಆತಿಥೇಯರ ಪಾಲಿಗೆ ಮಹತ್ವದ್ದಾಗಿದೆ.

ಡೆಲ್ಲಿ ತಂಡ ಬಲಾಢ್ಯ ಬ್ಯಾಟಿಂಗ್‌ ವಿಭಾಗವನ್ನು ಹೊಂದಿದೆ. ಅನುಭವಿ ಆಟಗಾರ ಶಿಖರ್‌ ಧವನ್‌ ಮತ್ತು ಪೃಥ್ವಿ ಶಾ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರೆ, ರಿಷಭ್‌ ಪಂತ್‌, ಶ್ರೇಯಸ್‌ ಮತ್ತು ಕಾಲಿನ್‌ ಇಂಗ್ರಾಮ್‌ ಅದರ ಮೇಲೆ ರನ್‌ ಗೋಪುರ ಕಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಕೆಳ ಕ್ರಮಾಂಕದಲ್ಲಿ ಆಡುವ ಅಕ್ಷರ್‌ ಪಟೇಲ್‌ ಕೂಡಾ ರನ್‌ ಕಾಣಿಕೆ ನೀಡಬಲ್ಲರು.

ಬೌಲಿಂಗ್‌ನಲ್ಲೂ ಡೆಲ್ಲಿ ತಂಡ ಶಕ್ತಿಯುತವಾಗಿದೆ. ಕಗಿಸೊ ರಬಾಡ, ಈ ತಂಡದ ವೇಗದ ಅಸ್ತ್ರವಾಗಿದ್ದಾರೆ. ದಕ್ಷಿಣ ಆಫ್ರಿಕಾದ ಆಟಗಾರ ಈ ಬಾರಿಯ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದಿದ್ದಾರೆ. ಅವರ ಖಾತೆಯಲ್ಲಿ 21 ವಿಕೆಟ್‌ಗಳಿವೆ.

ಇಶಾಂತ್‌ ಶರ್ಮಾ, ಸಂದೀಪ್‌ ಲಮಿಚಾನೆ, ಅಮಿತ್‌ ಮಿಶ್ರಾ ಮತ್ತು ಅಕ್ಷರ್‌ ಪಟೇಲ್‌ ಕೂಡಾ ಎದುರಾಳಿ ಬ್ಯಾಟ್ಸ್‌ಮನ್‌ಗಳ ರನ್‌ ಗಳಿಕೆಗೆ ಕಡಿವಾಣ ಹಾಕಬಲ್ಲರು.

ರಾಜಸ್ಥಾನ್‌ ಕೂಡಾ ತವರಿನಲ್ಲಿ ಮತ್ತೊಂದು ಗೆಲುವಿನ ತೋರಣ ಕಟ್ಟಲು ತುದಿಗಾಲಿನಲ್ಲಿ ನಿಂತಿದೆ.

ನಾಯಕತ್ವ ವಹಿಸಿಕೊಂಡ ನಂತರ ಆಡಿದ ಮೊದಲ ಪಂದ್ಯದಲ್ಲೇ (ಮುಂಬೈ ಎದುರು) ಅರ್ಧಶತಕ ಸಿಡಿಸಿದ್ದ ಸ್ಮಿತ್ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

ಜೋಸ್‌ ಬಟ್ಲರ್‌ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ, ಕರ್ನಾಟಕದ ಸ್ಟುವರ್ಟ್‌ ಬಿನ್ನಿ ಮತ್ತು ಸಂಜು ಸ್ಯಾಮ್ಸನ್‌ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಇವರು ಇದನ್ನು ಸಮರ್ಥವಾಗಿ ನಿಭಾಯಿಸಬೇಕಿದೆ.

ರಾಹುಲ್‌ ತ್ರಿಪಾಠಿ ಅಮೋಘ ಲಯದಲ್ಲಿದ್ದು, ಡೆಲ್ಲಿ ವಿರುದ್ಧವೂ ಗುಡುಗಲು ಕಾಯುತ್ತಿದ್ದಾರೆ.

ಜೊಫ್ರಾ ಆರ್ಚರ್‌, ಕರ್ನಾಟಕದ ಲೆಗ್‌ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ಬೌಲಿಂಗ್‌ನಲ್ಲಿ ತಂಡದ ಭರವಸೆಯಾಗಿದ್ದಾರೆ. ಜಯದೇವ್ ಉನದ್ಕತ್‌ ಮತ್ತು ಧವಳ್‌ ಕುಲಕರ್ಣಿ ಮಿಂಚಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.