ADVERTISEMENT

IPL Mega Auction 2022: ಪಂಜಾಬಿಗೆ ಲಿವಿಂಗ್‌ಸ್ಟೋನ್; ಮುಂಬೈಗೆ ಜೋಫ್ರಾ

ಯುವ ಆಟಗಾರ ರಾಜ್‌ ಬಾವಾಗೆ ಒಲಿದ ಅದೃಷ್ಟ; ಸಕಾರಿಯಾ, ಖಲೀಲ್‌ಗೂ ದೊಡ್ಡ ಮೊತ್ತ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 22:03 IST
Last Updated 13 ಫೆಬ್ರುವರಿ 2022, 22:03 IST
ಜೋಫ್ರಾ ಆರ್ಚರ್
ಜೋಫ್ರಾ ಆರ್ಚರ್   

ಬೆಂಗಳೂರು: ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಮೆಗಾ ಹರಾಜಿನ ಎರಡನೇ ದಿನ ತಮ್ಮ ಖಜಾನೆಯನ್ನು ತೆರೆದವು.

ಹರಾಜು ಪ್ರಕ್ರಿಯೆ ಕೊನೆಯ ದಿನವಾದ ಭಾನುವಾರದಂದು ಅತಿ ಹೆಚ್ಚು ಮೌಲ್ಯ ಪಡೆದ ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟೋನ್ (₹ 11.50 ಕೋಟಿ) ಅವರನ್ನು ಪಂಜಾಬ್ ತನ್ನತ್ತ ಸೆಳೆದುಕೊಂಡಿತು. ಅವರ ಸಹ ಆಟಗಾರ, ವೇಗಿ ಜೋಫ್ರಾ ಆರ್ಚರ್‌ ಅವರನ್ನು ಮುಂಬೈ ಇಂಡಿಯನ್ಸ್ ತಂಡವು (₹ 8 ಕೋಟಿ) ಖರೀದಿಸಿತು. ಆದರೆ ಬಹಳ ಸಮಯದಿಂದ ಗಾಯದ ಸಮಸ್ಯೆ ಎದುರಿಸುತ್ತಿರುವ ಜೋಫ್ರಾ ಮೇಲೆ ಇಷ್ಟು ದೊಡ್ಡ ಮೊತ್ತ ಹೂಡಿದ್ದು ಅಚ್ಚರಿ ತರಿಸಿತು.

ಆದರೆ, ಮೊದಲ ದಿನವೇ ಜಾಕ್‌ಪಾಟ್ ಹೊಡೆದಿದ್ದ ಇಶಾಂತ್ ಕಿಶನ್, ದೀಪಕ್ ಚಾಹರ್ ಅವರಿಗಿಂತ ಹೆಚ್ಚಿನ ಮೌಲ್ಯವನ್ನು ಎರಡನೇ ದಿನ ಯಾರೂ ಪಡೆಯಲಿಲ್ಲ. ಇದರಿಂದಾಗಿ ಇಶಾಂತ್ (₹15.25 ಕೋಟಿ) ಈ ಬಾರಿಯ ದುಬಾರಿ ಆಟಗಾರನಾದರು.

ADVERTISEMENT

ಆದರೆ ಹರಾಜು ಪ್ರಕ್ರಿಯೆಯಲ್ಲಿ ಅಚ್ಚರಿ ಮೂಡಿಸಿದ ಇನ್ನೊಂದು ವಿಷಯವೆಂದರೆ; ಆಸ್ಟ್ರೇಲಿಯಾದ ಬ್ಯಾಟರ್ ಸ್ಟೀವ್ ಸ್ಮಿತ್, ಆ್ಯರನ್ ಫಿಂಚ್, ಭಾರತದ ಸುರೇಶ್ ರೈನಾ, ವೇಗಿ ಇಶಾಂತ್ ಶರ್ಮಾ ಅವರು ಬಿಕರಿಯಾಗಲಿಲ್ಲ.

ಪಂಜಾಬ್‌ ಧಾರಾಳ:
ನೆಸ್ ವಾಡಿಯಾ ಸಹಮಾಲೀಕತ್ವದ ಪಂಜಾಬ್ ತಂಡವು ಸಬಲ ತಂಡವನ್ನು ಕಟ್ಟಲು ವಿದೇಶಿ ಆಟಗಾರರತ್ತ ಒಲವು ತೋರಿದೆ. ಮೊದಲ ದಿನ ಇಂಗ್ಲೆಂಡ್‌ನ ಜಾನಿ ಬೆಸ್ಟೊ, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ, ಭಾನುವಾರ ಲಿಯಾಮ್, ವಿಂಡೀಸ್ ಆಟಗಾರ ಓಡಿಯನ್ ಸ್ಮಿತ್, ಶ್ರೀಲಂಕೆಯ ಭಾನುಕಾ, ನೇಥನ್ ಎಲ್ಲಿಸ್ ಅವರನ್ನೂ ಸೇರ್ಪಡೆ ಮಾಡಿಕೊಂಡಿತು.

ಕನ್ನಡಿಗ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿರುವ ಪಂಜಾಬ್ ತಂಡವುಯುವ ಆಟಗಾರರಿಗೂ ಮಣೆ ಹಾಕಿದೆ. ಈಚೆಗೆ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದ ಭಾರತ ತಂಡದ ಆಲ್‌ರೌಂಡರ್ ರಾಜಾ ಬಾವಾ ಅವರಿಗೆ ಎರಡು ಕೋಟಿ ರೂಪಾಯಿ ಕೊಟ್ಟು ಖರೀದಿಸಿತು.

ಮುಂಬೈಗೆ ಆರ್ಚರ್:
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ತನ್ನ ಬೌಲಿಂಗ್ ವಿಭಾಗವನ್ನು ಬಲಿಷ್ಠ ಗೊಳಿಸಿದೆ. ಅನುಭವಿ ಮಧ್ಯಮವೇಗಿ ಜೈದೇವ್ ಉನದ್ಕತ್, ಇಂಗ್ಲೆಂಡ್‌ನ ಜೋಫ್ರಾ ಆರ್ಚರ್, ಟೈಮಲ್ ಮಿಲ್ಸ್‌ ಅವರನ್ನು ಸೇರ್ಪಡೆ ಮಾಡಿಕೊಂಡಿತು. ಮೊದಲ ದಿನ ಇಶಾನ್ ಕಿಶನ್‌ ಅವರನ್ನು ಸೇರ್ಪಡೆ ಮಾಡಿಕೊಂಡಿತ್ತು.

ಡೆಲ್ಲಿ ಬೌಲಿಂಗ್‌ ಪಡೆ:
ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪ್ರಮುಖ ಬೌಲರ್ ಎನ್ರಿಚ್ ನಾಕಿಯಾಗೆ ಈ ಬಾರಿ ಶಾರ್ದೂಲ್ ಠಾಕೂರ್ ಮತ್ತು ಖಲೀಲ್ ಅಹಮದ್ ಅವರ ಸಾಥ್ ಸಿಗಲಿದೆ. ಅಲ್ಲದೇ ಯುವ ಪ್ರತಿಭಾವಂತ ಬೌಲರ್ ಚೇತನ್ ಸಕಾರಿಯಾ ಹಾಗೂ ಚೈನಾಮೆನ್ ಬೌಲರ್ ಕುಲದೀಪ್ ಯಾದವ್ ಕೂಡ ತಂಡ ಸೇರಿದ್ದಾರೆ.

ಚೆನ್ನೈಗೆ ಶಿವಂ ದುಬೆ:
ಮುಂಬೈ ಹುಡುಗ ಶಿವಂ ದುಬೆ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ ಸೆಳೆದುಕೊಂಡಿತು.

ದೀಪಕ್ ಚಾಹರ್, ಡ್ವೇನ್‌ ಬ್ರಾವೊ, ರವೀಂದ್ರ ಜಡೇಜ ಅವರೊಂದಿಗೆ ನಾಲ್ಕನೇ ಆಲ್‌ರೌಂಡರ್‌ ಆಗಿ ದುಬೆ ತಂಡ ಸೇರಿದ್ದಾರೆ. 19 ವರ್ಷದೊಳಗಿನವರ ಭಾರತ ತಂಡದಲ್ಲಿ ಆಡಿದ್ದ ಭರವಸೆಯಪ್ರತಿಭೆ ರಾಜವರ್ಧನ್ ಹಂಗರಗೇಕರ್ ಕೂಡ ಧೋನಿ ಬಳಗ ಸೇರಿದ್ದಾರೆ.

ಕೆಕೆಆರ್‌ಗೆ ಅಜಿಂಕ್ಯ ರಹಾನೆ:
ಭಾರತ ತಂಡದ ಆಟಗಾರ ಅಜಿಂಕ್ಯ ರಹಾನೆ ಅವರು ಈ ಬಾರಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಹಾನೆ ಕೇವಲ ಒಂದು ಕೋಟಿ ಮೌಲ್ಯ ಪಡೆದರು. ಶ್ರೇಯಸ್ ಅಯ್ಯರ್ ಮತ್ತು ವಿಂಡೀಸ್‌ನ ಆ್ಯಂಡ್ರೆ ರಸೆಲ್ ಈ ತಂಡದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.