ADVERTISEMENT

ಮುಂದಿನ ವರ್ಷದಿಂದ ಹಳೆಯ ಸ್ವರೂಪಕ್ಕೆ ಮರಳಲಿರುವ ಐಪಿಎಲ್

ಪಿಟಿಐ
Published 22 ಸೆಪ್ಟೆಂಬರ್ 2022, 9:08 IST
Last Updated 22 ಸೆಪ್ಟೆಂಬರ್ 2022, 9:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯು ಮುಂದಿನ ವರ್ಷದಿಂದ ತನ್ನ ನೈಜ ಸ್ವರೂಪಕ್ಕೆ ಮರಳಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ಇದರೊಂದಿಗೆ ಕೋವಿಡ್‌ಗಿಂತಲೂ ಮುನ್ನ ಚಾಲ್ತಿಯಲ್ಲಿದ್ದಂತೆ ಐಪಿಎಲ್ 2023ರಲ್ಲಿ ಪ್ರತಿ ತಂಡಗಳು ಹೋಮ್ ಹಾಗೂ ಅವೇ ಪಂದ್ಯಗಳನ್ನು ಆಡಲಿವೆ ಎಂಬುದು ಖಚಿತವಾಗಿದೆ.

2020ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಆವರಿಸಿದ ಬಳಿಕ ಐಪಿಎಲ್ ಟೂರ್ನಿಯು ನಿರ್ದಿಷ್ಟ ತಾಣಗಳಲ್ಲಷ್ಟೇ ಮುಚ್ಚಿದ ಕ್ರೀಡಾಂಗಣಗಳಲ್ಲಿ ಆಯೋಜನೆಯಾಗಿತ್ತು.

2020ನೇ ಐಪಿಎಲ್ ಯುಎಇನ ಮೂರು ಮೈದಾನಗಳಲ್ಲಿ (ದುಬೈ, ಶಾರ್ಜಾ ಮತ್ತು ಅಬುದಾಬಿ) ಆಯೋಜನೆಯಾಗಿತ್ತು. 2021ರಲ್ಲಿ ಟೂರ್ನಿಯು ಡೆಲ್ಲಿ, ಅಹಮದಾಬಾದ್, ಮುಂಬೈ ಮತ್ತು ಚೆನ್ನೈನಲ್ಲಿ ನಡೆದಿತ್ತು.

ಈಗ ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿರುವುದರಿಂದ ಹಳೆಯ ಸ್ವರೂಪದಂತೆ ಹೋಮ್ ಹಾಗೂ ಅವೇ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.

ಮುಂದಿನ ವರ್ಷದಿಂದ ಐಪಿಎಲ್‌‌ನ ಎಲ್ಲ 10 ತಂಡಗಳು ತನ್ನ ಹೋಮ್ ಪಂದ್ಯಗಳನ್ನು ತವರು ಮೈದಾನದಲ್ಲಿ ಆಡುವುದರಿಂದ ಅಭಿಮಾನಿಗಳಿಗೂ ಕ್ರಿಕೆಟ್‌ನ ಮನರಂಜನೆ ಸವಿಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.