ADVERTISEMENT

ಫೆ.12, 13ರಂದು ಐಪಿಎಲ್ ಮೆಗಾ ಹರಾಜು, ಮಾರ್ಚ್ ಅಂತ್ಯದಲ್ಲಿ ಟೂರ್ನಿ: ಜಯ್ ಶಾ

ಪಿಟಿಐ
Published 23 ಜನವರಿ 2022, 2:58 IST
Last Updated 23 ಜನವರಿ 2022, 2:58 IST
ಐಪಿಎಲ್
ಐಪಿಎಲ್   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಾಗಿ ಮೆಗಾ ಹರಾಜು ಫೆಬ್ರುವರಿ 12 ಹಾಗೂ 13 ದಿನಾಂಕಗಳಲ್ಲಿ ನಡೆಯಲಿದ್ದು, ಮಾರ್ಚ್ ಅಂತ್ಯದ ವೇಳೆಗೆ ಟೂರ್ನಿ ಪ್ರಾರಂಭವಾಗಲಿದೆ. ಫ್ರಾಂಚೈಸಿಗಳ ಮಾಲೀಕರ ಆಸಕ್ತಿಯಂತೆ ಬಹುನಿರೀಕ್ಷಿತ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಐಪಿಎಲ್ ಹರಾಜು ಬೆಂಗಳೂರಿನಲ್ಲಿ ನಡೆಯಲಿದೆ. ಹಾಗೆಯೇ ಮಾರ್ಚ್ 27ರಂದು ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆರಂಭವಾಗಲಿದೆ.

ಐಪಿಎಲ್ 15ನೇ ಆವೃತ್ತಿಯ ಟೂರ್ನಿಯು ಮಾರ್ಚ್ ತಿಂಗಳ ಅಂತಿಮ ವಾರದಲ್ಲಿ ಆರಂಭಗೊಳ್ಳಲಿದ್ದು, ಮೇ ಅಂತ್ಯದವರೆಗೆ ಮುಂದುವರಿಯಲಿದೆ ಎಂದು ಖಚಿತಪಡಿಸಲು ಸಂತೋಷವಾಗುತ್ತಿದೆ. ಬಹುತೇಕ ತಂಡಗಳ ಮಾಲೀಕರು ಟೂರ್ನಿ ಭಾರತದಲ್ಲೇ ನಡೆಯಬೇಕು ಎಂದು ಒಲವು ತೋರಿದ್ದಾರೆ ಎಂದು ಜಯ್ ಶಾ ತಿಳಿಸಿದ್ದಾರೆ.

ಭಾರತದಲ್ಲೇ ಟೂರ್ನಿ ಆಯೋಜಿಸಲು ಮೊದಲ ಆದ್ಯತೆ ಎಂದು ಅವರು ಖಚಿತಪಡಿಸಿದರು. ಐಪಿಎಲ್‌ಗೆ ಸಂಬಂಧಪಟ್ಟಂತೆ ಎಲ್ಲರ ಸುರಕ್ಷತೆ ಹಾಗೂ ಆರೋಗ್ಯ ಕಾಪಾಡುವುದರಲ್ಲಿ ಬಿಸಿಸಿಐ ಯಾವುದೇ ರಾಜಿಗೂ ತಯಾರಾಗಿಲ್ಲ. ಓಮೈಕ್ರಾನ್ ಸೇರಿದಂತೆ ಕೋವಿಡ್‌ನಿಂದಾಗಿ ಆತಂಕದ ಸ್ಥಿತಿ ಇರುವುದರಿಂದ 'ಪ್ಲ್ಯಾನ್ ಬಿ' ಬಗ್ಗೆಯೂ ಯೋಜನೆ ರೂಪಿಸಲಿದ್ದೇವೆ ಎಂದು ಹೇಳಿದ್ದಾರೆ.

ಐಪಿಎಲ್‌ಗೆ ಎರಡು ಹೊಸ ತಂಡಗಳ (ಅಹಮದಾಬಾದ್ ಹಾಗೂ ಲಖನೌ) ಸೇರ್ಪಡೆಯೊಂದಿಗೆ ಒಟ್ಟು ಫ್ರಾಂಚೈಸಿಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.