ADVERTISEMENT

ಇರಾನಿ ಕಪ್| ಹರ್ಷ್ ದುಬೆ, ಯಶ್ ಠಾಕೂರ್ ಬೌಲಿಂಗ್ ದಾಳಿ: ವಿದರ್ಭ ಮಡಿಲಿಗೆ ಟ್ರೋಫಿ

ಪಿಟಿಐ
Published 5 ಅಕ್ಟೋಬರ್ 2025, 11:37 IST
Last Updated 5 ಅಕ್ಟೋಬರ್ 2025, 11:37 IST
   

ನಾಗ್ಪುರ: ಯಶ್‌ ಧುಳ್‌ ಸೊಗಸಾದ 92 ರನ್ (117ಎ) ಬಾರಿಸಿದರೂ, ವಿದರ್ಭದ ಸಂಘಟಿತ ಬೌಲಿಂಗ್ ದಾಳಿಯೆದುರು ರೆಸ್ಟ್ ಆಫ್‌ ಇಂಡಿಯಾ ತಂಡ ಹೆಚ್ಚೇನೂ ಮಾಡಲಾಗಲಿಲ್ಲ. ಐದನೇ ಹಾಗೂ ಅಂತಿಮ ದಿನವಾದ ಭಾನುವಾರ 93 ರನ್‌ಗಳಿಂದ ರೆಸ್ಟ್‌ ಆಫ್‌ ಇಂಡಿಯಾ ತಂಡವನ್ನು ಸೋಲಿಸಿದ ವಿದರ್ಭ ತಂಡ ಇರಾನಿ ಟ್ರೋಫಿಯನ್ನೂ ಗೆದ್ದುಕೊಂಡಿತು.

ಎಡಗೈ ಸ್ಪಿನ್ನರ್ ಹರ್ಷ್‌ ದುಬೆ 73 ರನ್ನಿಗೆ 4 ವಿಕೆಟ್‌ ಪಡೆದರೆ, ವೇಗಿ ಯಶ್‌ ಠಾಕೂರ್ (47ಕ್ಕೆ2) ಅವರು ರೆಸ್ಟ್‌ ಆಫ್‌ ಇಂಡಿಯಾಕ್ಕೆ ಹೆಚ್ಚಿನ ಹಾನಿ ಎಸಗಿದರು. ಇಬ್ಬರೂ ಈ ಪಂದ್ಯದಲ್ಲಿ ತಲಾ ಆರು ವಿಕೆಟ್‌ ಪಡೆದರು.‌ ಇದರೊಂದಿಗೆ ಇರಾನಿ ಟ್ರೋಫಿಯಲ್ಲಿ ಆಡಿದ ಮೂರೂ ಸಂದರ್ಭಗಳಲ್ಲಿ ವಿದರ್ಭ ಚಾಂಪಿಯನ್ ಆದ ಶ್ರೇಯಸ್ಸಿಗೆ ಪಾತ್ರವಾಯಿತು.

ಗೆಲ್ಲಲು 361 ರನ್ ಗಳಿಸುವ ಗುರಿಯೊಡನೆ ಶನಿವಾರ 2 ವಿಕೆಟ್‌ಗೆ 30 ರನ್ ಗಳಿಸಿದ್ದ ರೆಸ್ಟ್‌ ಆಫ್‌ ಇಂಡಿಯಾ 267 ರನ್‌ಗಳಿಗೆ ಆಲೌಟ್‌ ಆಯಿತು. ಲಂಚ್‌ಗೆ ಮೊದಲ ಒಂದು ಹಂತದಲ್ಲಿ 133 ರನ್‌ಗಳಾಗುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡಿತ್ತು. ಆದರೆ ಧುಳ್ ಮತ್ತು ಮಾನವ್‌ ಸುತಾರ್ (ಔಟಾಗದೇ 56, 113ಎ) ಅವರು ಏಳನೇ ವಿಕೆಟ್‌ಗೆ 104 ರನ್ ಜೊತೆಯಾಟದಲ್ಲಿ ತೊಡಗಿದ್ದರಿಂದ ಪಂದ್ಯ ಜೀವ ಪಡೆಯಿತು. ಈ ಹಂತದಲ್ಲಿ ಧುಳ್ ಅವರ ವಿಕೆಟ್‌ ವಿಕೆಟ್‌ ಪಡೆದ ಯಶ್‌ ಠಾಕೂರ್ ವಿದರ್ಭ ಗೆಲುವನ್ನು ಖಚಿತಪಡಿಸಿದರು.

ADVERTISEMENT

ಮಾತಿನ ಚಕಮಕಿ

ಠಾಕೂರ್ ಬೌಲಿಂಗ್‌ನಲ್ಲಿ ಚೆಂಡನ್ನು ಥರ್ಡ್‌ಮ್ಯಾನ್ ಮೇಲಿಂದ ಹೊಡೆಯಲು ಯತ್ನಿಸಿದ ಧುಳ್ ಬೌಂಡರಿಗೆರೆಯ ಸನಿಹ ಅಥರ್ವ ತೈಡೆ ಅಂದಾಜಿಸಿ ಹಿಡಿದ ಉತ್ತಮ ಕ್ಯಾಚಿಗೆ ನಿರ್ಗಮಿಸಬೇಕಾಯಿತು. ಆಗ ಯಶ್‌ ಠಾಕೂರ್ ಪ್ರಚೋದನೆಯ ರೀತಿ  ‘ಸೆಂಡ್‌ಆಫ್‌’ ಸಂಕೇತ ಪ್ರದರ್ಶಿಸಿ‌ದ್ದರಿಂದ ಧುಳ್ ಸಿಟ್ಟಾದರು. ಯಶ್‌ದ್ವಯರ ಮಧ್ಯೆ (ಧುಳ್‌ ಮತ್ತು ಠಾಕೂರ್‌) ವಾಗ್ವದ ನಡೆಯಿತು. ಅಂಪೈರ್‌ಗಳು ಬಂದು ಪರಿಸ್ಥಿತಿ ತಿಳಿಗೊಳಿಸಿದರು.

ಸಂಕ್ಷಿಪ್ತ ಸ್ಕೋರು:

ವಿದರ್ಭ: 342 ಮತ್ತು 232; ರೆಸ್ಟ್‌ ಆಫ್‌ ಇಂಡಿಯಾ: 214 ಮತ್ತು 73.5 ಓವರುಗಳಲ್ಲಿ 267 (ಇಶಾನ್ ಕಿಶನ್ 35, ಯಶ್‌ ಧುಳ್‌ 92, ಸಾರಾಂಶ್‌ ಜೈನ 29, ಮಾನವ್ ಸುತಾರ್‌ ಔಟಾಗದೇ 56; ಹರ್ಷ್‌ ದುಬೆ 73ಕ್ಕೆ4, ಆದಿತ್ಯ ಠಾಕರೆ 27ಕ್ಕೆ2, ಯಶ್‌ ಠಾಕೂರ್ 47ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.