ADVERTISEMENT

ಸಚಿನ್‌ಗೆ ಔಟ್‌ ನೀಡಿದ್ದು ತಪ್ಪು: 22 ವರ್ಷ ಬಳಿಕ ಒಪ್ಪಿದ ಅಂಪೈರ್ ಬಕ್ನರ್

ಪಿಟಿಐ
Published 24 ಫೆಬ್ರುವರಿ 2026, 15:34 IST
Last Updated 24 ಫೆಬ್ರುವರಿ 2026, 15:34 IST
<div class="paragraphs"><p>ಸಚಿನ್ ತೆಂಡೂಲ್ಕರ್</p></div>

ಸಚಿನ್ ತೆಂಡೂಲ್ಕರ್

   

(ಪಿಟಿಐ ಚಿತ್ರ)

ನವದೆಹಲಿ: ಸುಮಾರು 22 ವರ್ಷಗಳ ಹಿಂದೆ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಭಾರತದ ತಾರೆ ಸಚಿನ್‌ ತೆಂಡೂಲ್ಕರ್ ಅವರಿಗೆ ಅಂಪೈರ್ ಸ್ಟೀವ್‌ ಬಕ್ನರ್ ಪ್ರಮಾದದಿಂದ ಎಲ್‌ಬಿಡಬ್ಲ್ಯು ‘ಔಟ್‌’ ತೀರ್ಪು ನೀಡಿದ್ದರು. ಅದು ಭಾರತದ ಕ್ರಿಕೆಟ್‌ ಪ್ರೇಮಿಗಳ ಪಾಲಿಗೆ ಕರಾಳ ನೆನಪು. ಅಂದಿನ ಆ ತೀರ್ಪಿಗೆ ದಿಗ್ಗಜ ಅಂಪೈರ್ ಬಕ್ನರ್ ಈಗ ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ತೀರ್ಪು ತಪ್ಪಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ.

ADVERTISEMENT

ಎರಡು ದಶಕಗಳಿಗೂ (1989–2009) ಹೆಚ್ಚು ಸಮಯ ಕಾರ್ಯನಿರ್ವಹಿಸಿದ್ದ ವೆಸ್ಟ್‌ ಇಂಡೀಸ್‌ನ ಬಕ್ನರ್ ಅವರು ಗೌರವಾನ್ವಿತ ಅಂಪೈರ್‌ಗಳಲ್ಲಿ ಒಬ್ಬರೆನಿಸಿದ್ದಾರೆ. 2009ರಲ್ಲಿ ನಿವೃತ್ತಿ ಪ್ರಕಟಿಸುವ ಮೊದಲು 128 ಟೆಸ್ಟ್ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದರು.

ತೆಂಡೂಲ್ಕರ್ ವಿರುದ್ಧ ಅವರ ಕೆಲವು ತೀರ್ಮಾನಗಳು ಟೀಕೆಗೊಳಗಾಗಿದ್ದವು. ಆದರೆ ಇದರಲ್ಲಿ ಆಘಾತಕಾರಿಯಾಗಿದ್ದು ಬ್ರಿಸ್ಬೇನ್‌ನ ಗ್ಯಾಬಾದಲ್ಲಿ 2003–04ರಲ್ಲಿ ನಡೆದ ಭಾರತ– ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದ ವೇಳೆ ನೀಡಿದ ತೀರ್ಪು. ವೇಗಿ ಜೇಸನ್ ಗಿಲೆಸ್ಪಿ ತಮ್ಮ ಬೌಲಿಂಗ್‌ನಲ್ಲಿ ಈ ಮನವಿ ಮಾಡಿದಾಗ ಇತರ ಆಟಗಾರರು ಜೋರಾಗಿ ಧ್ವನಿಗೂಡಿಸಿದ್ದರು.

ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಅಂಪೈರ್‌ಗಳ ಸಂಘದ ಜೊತೆ ಸಂದರ್ಶನದಲ್ಲಿ ಅವರಿಗೆ ‘ನಿಮ್ಮ ವೃತ್ತಿಜೀವನದಲ್ಲಿ ನೀಡಿದ ಅತ್ಯಂತ ಕಠಿಣ ತೀರ್ಪು ಯಾವುದು’ ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಬಕ್ನರ್, ‘ಸಚಿನ್ ತೆಂಡೂಲ್ಕರ್ ಅವರಿಗೆ ಲೆಗ್‌ ಬಿಫೋರ್‌ ವಿಕೆಟ್‌ ಔಟ್‌ ಕೊಟ್ಟಿದ್ದು. ಅದು ತಪ್ಪು ಎಂದು ಗೊತ್ತಾಯಿತು. ಈಗಲೂ, ದಿನವೂ ಜನರು ಅದರ ಬಗ್ಗೆ ಮಾತನಾಡುತ್ತಿರುತ್ತಾರೆ’ ಎಂದು ಉತ್ತರಿಸಿದ್ದಾರೆ.

‘ನಾನು ಅವರಿಗೆ ಏಕೆ ಔಟ್‌ ಕೊಟ್ಟೆ. ಅವರು ನಿಜವಾಗೂ ಔಟ್‌ ಆಗಿದ್ದರೇ ಎಂಬಿತ್ಯಾದಿ ಚರ್ಚೆಗಳಾದವು. ಆದರೆ ಬದುಕಿನಲ್ಲಿ ತಪ್ಪುಗಳು ಆಗೇ ಆಗುತ್ತವೆ. ಅದನ್ನು ತಪ್ಪು ಎಂದು ಒಪ್ಪಿಕೊಳ್ಳುವೆ’ ಎಂದಿದ್ದಾರೆ 79 ವರ್ಷ ವಯಸ್ಸಿನ ಬಕ್ನರ್. 

ಮೂರನೇ ಕ್ರಮಾಂಕದಲ್ಲಿ ಆಡಿದ್ದ ತೆಂಡೂಲ್ಕರ್ ಚೆಂಡನ್ನು ಆಡದೇ ಬಿಡಲು ಹೋದಾಗ ಅದು ಅವರ ಪ್ಯಾಡಿನ ಮೇಲ್ಭಾಗಕ್ಕೆ ಬಡಿಯಿತು. ಬಕ್ನರ್, ಆಸ್ಟ್ರೇಲಿಯಾದ ಮನವಿಗೆ ಓಗೊಟ್ಟರು. ಟೆಲಿವಿಷನ್ ಮರುಪ್ರಸಾರ ಪರಿಶೀಲನೆ ಮೇಲೆ ಚೆಂಡು ಸ್ಟಂಪ್‌ಗಳ ಮೇಲ್ಭಾಗದಲ್ಲಿ ಹಾದುಹೋಗುತ್ತಿರುವುದು ಸ್ಪಷ್ಟವಾಗಿತ್ತು. ಸೌರವ್‌ ಗಂಗೂಲಿ ಆ ಪ್ರವಾಸದಲ್ಲಿ ತಂಡದ ನಾಯಕರಾಗಿದ್ದರು. 

2005ರಲ್ಲಿ ಪಾಕಿಸ್ತಾನ ವಿರುದ್ಧ ಈಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯದ ವೇಳೆ ಅಬ್ದುಲ್ ರಝಾಕ್ ಬೌಲಿಂಗ್‌ನಲ್ಲಿ ಕಾಟ್‌ಬಿಹೈಂಡ್‌ ಮನವಿಗೂ ಬಕ್ನರ್ ಔಟ್‌ ತೀರ್ಪು ನೀಡಿದ್ದರು. ಆದರೆ ಬ್ಯಾಟಿಗೂ ಚೆಂಡಿಗೂ ಸಾಕಷ್ಟು ಅಂತರವಿತ್ತು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.