ರವೀಂದ್ರ ಜಡೇಜ
ಲಂಡನ್: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಟೆಸ್ಟ್‌ನಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜ ಅವರ ಆಟವನ್ನು ಭಾರತ ತಂಡವು ಒಕ್ಕೊರಲಿನಿಂದ ಶ್ಲಾಘಿಸಿದೆ. ಅವರ ಕೆಚ್ಚೆದೆಯ ಆಟವನ್ನು ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಅವರು ‘ಅಮೋಘ ಹೋರಾಟ’ ಎಂದು ಬಣ್ಣಿಸಿದ್ದಾರೆ.
ಜಡೇಜಾ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 181 ಎಸೆತಗಳನ್ನು ನಿಭಾಯಿಸಿ ಅಜೇಯ 61 ರನ್ ಗಳಿಸಿದ್ದರು. ಆದರೆ ಅವರ ಹೋರಾಟ ಗೆಲುವಿಗೆ ಸಾಕಾಗಲಿಲ್ಲ. ಇಂಗ್ಲೆಂಡ್ ಮೂರನೇ ಟೆಸ್ಟ್ ಪಂದ್ಯವನ್ನು 22 ರನ್‌ಗಳಿಂದ ಗೆದ್ದುಕೊಂಡಿತ್ತು.
‘ಅವರದು ಅಮೋಘ ಹೋರಾಟ. ಜಡ್ಡು ತೋರಿದ ಆಟ ಅದ್ಭುತವಾದುದು’ ಎಂದು ಗಂಭೀರ್ ಅವರು ಬಿಸಿಸಿಐ ವೆಬ್‌ಸೈಟ್‌ನಲ್ಲಿ ಶುಕ್ರವಾರ ಪ್ರಕಟಿಸಿದ ವಿಡಿಯೊದಲ್ಲಿ ವರ್ಣಿಸಿದ್ದಾರೆ. ಅತ್ಯಂತ ಮೌಲ್ಯಯುತ ಆಟಗಾರ (ಎಂವಿಪಿ) ಜಡೇಜ ಎಂಬ ಶೀರ್ಷಿಕೆಯನ್ನು ವಿಡಿಯೊಗೆ ನೀಡಲಾಗಿದೆ.
ಗೆಲುವಿಗೆ 193 ರನ್‌ಗಳ ಬೆನ್ನಟ್ಟಿದ ಭಾರತ 112 ರನ್‌ಗಳಾಗುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತ್ತು. ಆದರೆ ಏಳನೇ ಕ್ರಮಾಂಕದಲ್ಲಿ ಆಡಲಿಳಿದ ಜಡೇಜ ದಿಟ್ಟತನ ಮತ್ತು ಧೈರ್ಯದಿಂದ ಆತಿಥೇಯರ ದಾಳಿ ಎದುರಿಸಿದ್ದರು. ಕೆಳಕ್ರಮಾಂಕದ ಆಟಗಾರರಾದ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಜೊತೆ ಹೋರಾಟ ನಡೆಸಿ ಗೆಲುವಿನ ಕ್ಷೀಣ ಆಸೆ ಮೂಡಿಸಿದ್ದರು. ಇವರಿಬ್ಬರ ಜೊತೆ 34 ಓವರುಗಳನ್ನು ಆಡಿದ್ದರು. ಆದರೆ ತಂಡ 170ಕ್ಕೆ ಆಲೌಟ್ ಆಗಿತ್ತು.
‘ಅವರ ಬ್ಯಾಟಿಂಗ್ ಇನ್ನೊಂದು ಹಂತದ ಮಟ್ಟ ತಲುಪಿದೆ. ಅವರ ಸ್ಥಿರ ಆಟ ಡ್ರೆಸಿಂಗ್ ರೂಮ್‌ನಲ್ಲಿ ವಿಶ್ವಾಸ ಮೂಡಿಸಿದೆ. ಅವರ ರಕ್ಷಣೆ ಬಲಿಷ್ಠವಾಗಿದೆ. ಅವರು ಪರಿಣತ ಬ್ಯಾಟರ್ ರೀತಿ ಕಾಣುತ್ತಿದ್ದಾರೆ’ ಎಂದು ಸಹಾಯಕ ಕೋಚ್ ರಿಯಾನ್ ಟೆನ್ ಡೊಶೆಟ್ ಹೇಳಿದ್ದಾರೆ.
ಒತ್ತಡದ ಸನ್ನಿವೇಶದಲ್ಲಿ ಜಡೇಜ ತೋರಿದ ಸಂಯಮವನ್ನು ಬ್ಯಾಟಿಂಗ್ ಕೋಚ್ ಹಾಗೂ ಸೌರಾಷ್ಟ್ರದ ಅವರ ಮಾಜಿ ಸಹ ಆಟಗಾರ ಸಿತಾಂಶು ಕೊಟಕ್ ಅವರೂ ಕೊಂಡಾಡಿದ್ದಾರೆ. ಜಡೇಜ ಅವರ ಅಲ್‌ರೌಂಡ್ ಆಟದ ಮೌಲ್ಯವನ್ನು ಸಿರಾಜ್ ಸಹ ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.