ADVERTISEMENT

Ranji Trophy 2026: ದೇಶಿ ಕ್ರಿಕೆಟ್‌ಗೆ ಹೊಸ ‘ರಾಜ’ ಜಮ್ಮು–ಕಾಶ್ಮೀರ

ಕೊನೆಯ ದಿನ ಕಮ್ರನ್, ಸಾಹಿಲ್ ಶತಕ– ಕರ್ನಾಟಕದ ಬೌಲರ್‌ಗಳ ಪರದಾಟ–ಡೋಗ್ರಾ ಬಳಗದ ಚಾರಿತ್ರಿಕ ಸಾಧನೆ

ಗಿರೀಶ ದೊಡ್ಡಮನಿ
Published 28 ಫೆಬ್ರುವರಿ 2026, 23:30 IST
Last Updated 28 ಫೆಬ್ರುವರಿ 2026, 23:30 IST
<div class="paragraphs"><p>ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ರನ್ನರ್‌ಅಪ್‌ ಆದ ಕರ್ನಾಟಕ ತಂಡದ ನಾಯಕ ದೇವದತ್ತ ಪಡಿಕ್ಕಲ್‌ ಅವರಿಗೆ ಬಿಸಿಸಿಐ ಅಧ್ಯಕ್ಷ ಮಿಥುನ್‌ ಮನ್ಹಾಸ್, ಕಾರ್ಯದರ್ಶಿ ದೇವಜಿತ್ ಸೈಕಿಯಾ ಟ್ರೋಫಿ ಪ್ರದಾನ ಮಾಡಿದರು</p><p></p></div>

ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ರನ್ನರ್‌ಅಪ್‌ ಆದ ಕರ್ನಾಟಕ ತಂಡದ ನಾಯಕ ದೇವದತ್ತ ಪಡಿಕ್ಕಲ್‌ ಅವರಿಗೆ ಬಿಸಿಸಿಐ ಅಧ್ಯಕ್ಷ ಮಿಥುನ್‌ ಮನ್ಹಾಸ್, ಕಾರ್ಯದರ್ಶಿ ದೇವಜಿತ್ ಸೈಕಿಯಾ ಟ್ರೋಫಿ ಪ್ರದಾನ ಮಾಡಿದರು

   

 ಚಿತ್ರಗಳು: ಗೋವಿಂದರಾಜ ಜವಳಿ

ADVERTISEMENT

ಹುಬ್ಬಳ್ಳಿ: ನೃಪತುಂಗ ಬೆಟ್ಟದ ತಪ್ಪಲಲ್ಲಿರುವ ರಾಜನಗರದ ಕ್ರಿಕೆಟ್ ಮೈದಾನದಲ್ಲಿ ಶನಿವಾರ ಮಧ್ಯಾಹ್ನ ನೆತ್ತಿ ಸುಡುವ ಬಿಸಿಲಿನಲ್ಲಿ ಹಿಮಕಣಿವೆಯ ಜಮ್ಮು–ಕಾಶ್ಮೀರ ತಂಡದ ಸಂಭ್ರಮ ಮುಗಿಲು ಮುಟ್ಟಿತು. ಪಾರಸ್ ಡೋಗ್ರಾ ನಾಯಕತ್ವದ ತಂಡವು ಮೊತ್ತಮೊದಲ ಬಾರಿ ರಣಜಿ ಟ್ರೋಫಿಗೆ ಮುತ್ತಿಕ್ಕಿತು. 

ತನ್ನ 67 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಫೈನಲ್ ತಲುಪಿದ್ದ ಜಮ್ಮು–ಕಾಶ್ಮೀರ ಎಂಟು ಸಲದ ಚಾಂಪಿಯನ್ ಆತಿಥೇಯ ಕರ್ನಾಟಕದ ಎದುರು ಮೊದಲ ಇನಿಂಗ್ಸ್‌ ಮುನ್ನಡೆಯೊಂದಿಗೆ ಡ್ರಾ ಸಾಧಿಸಿತು. ಅದರೊಂದಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.  

ಮಧ್ಯಾಹ್ನ 2.10ಕ್ಕೆ ಉಭಯ ತಂಡಗಳ ನಾಯಕರು ಡ್ರಾ ಮಾಡಿಕೊಳ್ಳಲು ಕೈಕುಲುಕುತ್ತಿದ್ದಂತೆಯೇ ಡೋಲ್ ತಾಷಾದ ಸದ್ದು, ಸಿಡಿಮದ್ದುಗಳ ಶಬ್ದ ಪ್ರತಿಧ್ವನಿಸಿದವು. ಚಾಂಪಿಯನ್ ತಂಡದ ಆಟಗಾರರು, ನೆರವು ಸಿಬ್ಬಂದಿ ಮತ್ತು ಅಭಿಮಾನಿಗಳ ನೃತ್ಯವೂ ರಂಗೇರಿತು. ಕಳೆದ ಐದು ದಿನಗಳಿಂದ ಕ್ರೀಡಾಂಗಣಕ್ಕೆ ಬಂದು ಕ್ರಿಕೆಟ್ ಆಸ್ವಾದಿಸಿದ್ದ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಲು ಪ್ರವಾಸಿ ತಂಡದ ಆಟಗಾರರು ಕ್ರೀಡಾಂಗಣದಲ್ಲಿ ಒಂದು ಪ್ರದಕ್ಷಿಣೆ ಹಾಕಿದರು.

ಇದೆಲ್ಲಕ್ಕೂ ಮುನ್ನ ಡೋಗ್ರಾ ಬಳಗವು ಕರ್ನಾಟಕದ ವಿರುದ್ಧ ಸಂಪೂರ್ಣ ಪಾರಮ್ಯ ಮೆರೆಯಿತು. ಮೊದಲ ಇನಿಂಗ್ಸ್‌ನಲ್ಲಿ 13 ತಾಸುಗಳಿಗೂ ಹೆಚ್ಚು ಕಾಲ ಬ್ಯಾಟಿಂಗ್ ಮಾಡಿದ್ದ ಪ್ರವಾಸಿಗರು ಎಂಟೂವರೆ ಗಂಟೆಗಳ ಕಾಲ ಕ್ರೀಸ್‌ ಮೇಲೆ ಲಂಗರು ಹಾಕಿದ್ದರು.  ಐದು ದಿನಗಳ ಪಂದ್ಯದಲ್ಲಿ ಕರ್ನಾಟಕವು ಬ್ಯಾಟಿಂಗ್‌ ಮಾಡಿದ್ದು 93.3 ಓವರ್‌ಗಳು ಮಾತ್ರ!

ಜಮ್ಮು–ಕಾಶ್ಮೀರವು ನಾಲ್ಕನೇ ದಿನದಾಟದಲ್ಲಿ 291 ರನ್‌ಗಳಿಂದ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ 57 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 186 ರನ್ ಗಳಿಸಿತ್ತು. ಕಮ್ರಾನ್ ಇಕ್ಬಾಲ್ (ಬ್ಯಾಟಿಂಗ್ 94; 160ಎ, 4X11, 6X1) ಮತ್ತು ಸಾಹಿಲ್ ಲೋತ್ರಾ (ಬ್ಯಾಟಿಂಗ್ 16; 41ಎ, 4X2) ಕ್ರೀಸ್‌ನಲ್ಲಿದ್ದರು. ಕೊನೆಯ ದಿನ ಬೆಳಿಗ್ಗೆ ತಮ್ಮ ಆಟ ಮುಂದುವರಿಸಿದ ಕಮ್ರಾನ್ 189 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಸಾಹಿಲ್ ಅವರೊಂದಿಗೆ ಜೊತೆಯಾಟ ಮುಂದುವರಿಸಿದರು. ಯಾವುದೇ ಧಾವಂತ ತೋರದ ಇಬ್ಬರೂ ಬ್ಯಾಟರ್‌ಗಳು ಆತಿಥೇಯ ಬೌಲರ್‌ಗಳನ್ನು ಕಾಡಿದರು. ಸ್ಪಿನ್ನರ್‌ಗಳ ಬೌಲರ್‌ಗಳ ಬಹುತೇಕ ಎಸೆತಗಳನ್ನು ಪ್ಯಾಡ್‌ನಿಂದ ತಡೆದರು. ಪಿಚ್‌ನಲ್ಲಿ ಬೌಲರ್‌ಗಳಿಗೆ ನೆರವು ಇರಲಿಲ್ಲ. 

ಹುಬ್ಬಳ್ಳಿಯ ರಾಜನಗರದ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿಯೊಂದಿಗೆ ಜಮ್ಮು ಮತ್ತು ಕಾಶ್ಮೀರ ತಂಡದ ಸಂಭ್ರಮ. ಆ ರಾಜ್ಯದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಇದ್ದಾರೆ 

ಕೆ.ಎಲ್. ರಾಹುಲ್ ಮತ್ತು ಕರುಣ್ ನಾಯರ್ ಕೂಡ ಬೌಲಿಂಗ್ ಮಾಡಿದರು. ರಾಹುಲ್ ಹಾಕಿದ 83ನೇ ಓವರ್‌ನಲ್ಲಿ ಸಾಹಿಲ್  ಅವರ ಕ್ಯಾಚ್ ಪಡೆಯುವಲ್ಲಿ ಸ್ಲಿಪ್‌ನಲ್ಲಿದ್ದ ಮಯಂಕ್ ಅಗರವಾಲ್ ವಿಫಲರಾದರು. ಊಟದ ವಿರಾಮದ ಹೊತ್ತಿಗೆ ತಂಡ 576 ರನ್‌ಗಳ ಮುನ್ನಡೆಯಲ್ಲಿತ್ತು. ಆದರೂ ಡಿಕ್ಲೇರ್ ಮಾಡಲಿಲ್ಲ. ಆಗ 80 ರನ್ ಗಳಿಸಿದ್ದ ಸಾಹಿಲ್ ಶತಕಕ್ಕಾಗಿ ತಂಡವು ಅವಕಾಶ ಮಾಡಿಕೊಟ್ಟಿತು. ವಿರಾಮದ ನಂತರ ಇಬ್ಬರೂ ಬ್ಯಾಟರ್‌ಗಳು ನಿಧಾನವಾಗಿ ರನ್ ಗಳಿಸಿದರು. 99 ರನ್ ಗಳಿಸಿದ್ದ ಸಾಹಿಲ್ ಒಂದು ರನ್ ಪಡೆಯಲು 14 ಎಸೆತಗಳನ್ನು ಆಡಿದರು. 223 ಎಸೆತಗಳಲ್ಲಿ ಅವರು ಶತಕದ ಗಡಿ ದಾಟಿದರು. ಕುಣಿದಾಡಿ, ಸಡ್ಡು ಹೊಡೆದು ಸಂಭ್ರಮಿಸಿದರು. ಕೆಲವೇ ನಿಮಿಷಗಳ ನಂತರ ಪಂದ್ಯಕ್ಕೆ ತೆರೆ ಬಿತ್ತು. ಜಮ್ಮು–ಕಾಶ್ಮೀರದ ಸಂಭ್ರಮ ಗರಿಗೆದರಿತು. ಕಣಿವೆ ರಾಜ್ಯದ ಕ್ರಿಕೆಟ್‌ನಲ್ಲಿ ಹೊಸ ಪರ್ವ ಆರಂಭವಾಯಿತು. ಸ್ಥಳೀಯರು ವಿಜೇತ ಆಟಗಾರರೊಂದಿಗೆ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. 

ರನ್ನರ್ಸ್ಅಪ್  –₹ 5 ಕೋಟಿ

ವಿಜೇತ ತಂಡಕ್ಕೆ ಬಹುಮಾನ ₹ 3 ಕೋಟಿ ರನ್ನರ್ಸ್ ಅಪ್ ತಂಡಕ್ಕೆ ಬಹುಮಾನ ₹ 2 ಕೋಟಿ ಜಮ್ಮು–ಕಾಶ್ಮೀರ ತಂಡಕ್ಕೆ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಘೋಷಿಸಿರುವ ಪ್ರಶಸ್ತಿ

ತಾರೆಗಳಿದ್ದರೂ ಜಯಿಸದ ಕರ್ನಾಟಕ

2014–15ರಲ್ಲಿ ಕರ್ನಾಟಕ ಕೊನೆಯ ಸಲ ಪ್ರಶಸ್ತಿ ಜಯಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ನಡೆದ ಟೂರ್ನಿಗಳಲ್ಲಿ ಮೂರು ಸಲ ಕ್ವಾರ್ಟರ್‌ಫೈನಲ್ ಹಾಗೂ ನಾಲ್ಕು ಸಲ ಸೆಮಿಫೈನಲ್ ಪ್ರವೇಶಿಸಿದ್ದ ತಂಡವು ಅಂತಿಮ ಸುತ್ತಿಗೆ ಲಗ್ಗೆ ಹಾಕುವಲ್ಲಿ ವಿಫಲವಾಗಿತ್ತು.  ಈ ಬಾರಿ ನಾಕೌಟ್ ಹಂತದಲ್ಲಿ ಮುಂಬೈ ಹಾಗೂ ಉತ್ತರಾಖಂಡ ತಂಡಗಳ ವಿರುದ್ಧ ಭರ್ಜರಿಯಾಗಿ ಜಯಿಸಿದ್ದ ತಂಡವು ತವರು ರಾಜ್ಯದ ಅಂಗಳದಲ್ಲಿ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿತ್ತು. ‌‌

ಭಾರತ ತಂಡದಲ್ಲಿ ಆಡಿರುವ ಅನುಭವಿಗಳಾದ ಕೆ.ಎಲ್. ರಾಹುಲ್ ದೇವದತ್ತ ಕರುಣ್ ನಾಯರ್ ಹಾಗೂ ವೇಗಿ ಪ್ರಸಿದ್ಧಕೃಷ್ಣ ತಂಡದಲ್ಲಿದ್ದರು. ಋತುವಿನಲ್ಲಿ 950 ರನ್‌ ಹೊಡೆದಿದ್ದ ಆರ್. ಸ್ಮರಣ್ ಕೂಡ ಇದ್ದರು.  ಆದರೆ ಈ ಪ್ರಮುಖ ಬ್ಯಾಟರ್‌ಗಳು ಕಾಶ್ಮೀರ ತಂಡದ ಮಧ್ಯಮವೇಗಿ ಅಕೀಬ್ ನಬಿ ದಾರ್ ಅವರ ದಾಳಿಯ ಮುಂದೆ ಕುಸಿದರು. ಈ ಟೂರ್ನಿಯಲ್ಲಿ ಶ್ರೇಷ್ಠ ಆಟಗಾರ ಗೌರವವನ್ನು ನಬಿ ಪಡೆದರು.  

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಡಳಿತವು ಟೂರ್ನಿಯ ಮಧ್ಯದಲ್ಲಿ ಮಯಂಕ್ ಅಗರವಾಲ್ ಅವರಿಂದ ನಾಯಕತ್ವವನ್ನು ದೇವದತ್ತ ಪಡಿಕ್ಕಲ್‌ಗೆ ವರ್ಗಾಯಿಸಿತ್ತು.  ಆದರೆ ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ನಡೆದ ಫೈನಲ್‌ನಲ್ಲಿ ಕರ್ನಾಟಕದ ಯಾವುದೇ ಪ್ರಯೋಗ ಮತ್ತು ತಂತ್ರಗಾರಿಕೆಗಳು ಫಲ ನೀಡಲಿಲ್ಲ.  2010ರಲ್ಲಿ ಮೈಸೂರಿನಲ್ಲಿ ನಡೆದಿದ್ದ ಮುಂಬೈ ಎದುರಿನ ಫೈನಲ್‌ನಲ್ಲಿ ಕರ್ನಾಟಕ ಪರಾಭವಗೊಂಡಿತ್ತು. ಆದರೆ ಆ ಪಂದ್ಯವು ರೋಚಕವಾಗಿತ್ತು. ಕರ್ನಾಟಕದ ಪ್ರತಿರೋಧ ದಿಟ್ಟವಾಗಿತ್ತು. ಆದರೆ ಇಲ್ಲಿ ಪಂದ್ಯದಲ್ಲಿ ಜಮ್ಮು–ಕಾಶ್ಮೀರ ತಂಡದ ಪ್ರಶಸ್ತಿ ಗಳಿಸುವುದು ನಾಲ್ಕನೇ ದಿನವೇ ನಿರ್ಧಾರವಾಗಿತ್ತು. ಪ್ರವಾಸಿಗರ ತಂಡದ ಯೋಜನಾಬದ್ಧ ಮತ್ತು ಶಿಸ್ತಿನ ಆಟವನ್ನು ಮೀರಿನಿಲ್ಲುವಲ್ಲಿ ಕರ್ನಾಟಕ ಹಿಂದೆ ಬಿದ್ದಿತು. ಏಳನೇ ಬಾರಿ ರನ್ನರ್ಸ್ ಅಪ್ ಆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.