ದುಬೈ: ಈ ವರ್ಷ ಅಮೋಘ ಲಯದಲ್ಲಿರುವ ಭಾರತ ತಂಡದ ಅಗ್ರಮಾನ್ಯ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರು ಐಸಿಸಿ ಪುರುಷರ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಸೋಮವಾರ ನಾಮನಿರ್ದೇಶನಗೊಂಡಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಈ ವರ್ಷ ಉತ್ತಮ ಸಾಧನೆ ತೋರಿದ ಶ್ರೇಷ್ಠ ಆಟಗಾರರ ಅಂತಿಮ ಪಟ್ಟಿಯಲ್ಲೂ ಅವರು ಸ್ಥಾನ ಪಡೆದಿದ್ದಾರೆ.
ಬಾರ್ಡರ್– ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ನಾಲ್ಕೂ ಪಂದ್ಯಗಳಲ್ಲಿ ಬೂಮ್ರಾ, ಆಸ್ಟ್ರೇಲಿಯಾದ ಆಟಗಾರರ ಕಂಗೆಡಿಸಿದ್ದರು. ಇಂಗ್ಲೆಂಡ್‌ನ ಪ್ರಮುಖ ಬ್ಯಾಟರ್‌ಗಳಾದ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್, ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅವರು ಸರ್ ಗ್ಯಾರ್ಫೀಲ್ಡ್ ಸೋಬರ್ಸ್ ಹೆಸರಿನಲ್ಲಿ ನೀಡಲಾಗುತ್ತಿರುವ ಈ ಪ್ರಮುಖ ಪ್ರಶಸ್ತಿಗೆ ಅಂತಿಮಗೊಂಡ ಆಟಗಾರರ ಪಟ್ಟಿಯಲ್ಲಿದ್ದಾರೆ.
ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರ ಪಟ್ಟಿಯಲ್ಲಿ ಬೂಮ್ರಾ ಜೊತೆಗೆ ರೂಟ್, ಬ್ರೂಕ್ ಮತ್ತು ಶ್ರೀಲಂಕಾದ ಕಮಿಂದು ಮೆಂಡಿಸ್ ಅವರು ಸ್ಥಾನ ಪಡೆದಿದ್ದಾರೆ.
ಬೂಮ್ರಾ ಅವರು ಈ ವರ್ಷ ಆಡಿರುವ 13 ಟೆಸ್ಟ್ ಪಂದ್ಯಗಳಲ್ಲಿ 14.92 ಸರಾಸರಿಯಲ್ಲಿ 71 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದು ಈ ವರ್ಷ ಬೌಲರ್ ಒಬ್ಬರ ಅತ್ಯುತ್ತಮ ಸಾಧನೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯ ಮೊದಲ ನಾಲ್ಕು ಟೆಸ್ಟ್‌ಗಳಲ್ಲಿ ಅವರು 30 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
‘ಬೆನ್ನು ನೋವಿನಿಂದ ಚೇತರಿಸಿ 2023ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಮರಳಿದ ನಂತರ ಬೂಮ್ರಾ ಉತ್ತಮ ಲಯದಲ್ಲಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ 13 ಟೆಸ್ಟ್‌ಗಳನ್ನು ಆಡಿ ಜೀವನಶ್ರೇಷ್ಠ 71 ವಿಕೆಟ್‌ಗಳೊಡನೆ 2024ಅನ್ನು ಪೂರೈಸಿದ್ದಾರೆ. ಇದು ಇತರ ಯಾವುದೇ ಬೌಲರ್‌ಗಳಿಗಿಂತ ಹೆಚ್ಚು’ ಎಂದು ಐಸಿಸಿ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಟಿ20 ವಿಶ್ವಕಪ್‌ನಲ್ಲೂ ಬೂಮ್ರಾ ಅವರ ಅಮೋಘ ಬೌಲಿಂಗ್ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಅಮೆರಿಕ–ವೆಸ್ಟ್ ಇಂಡೀಸ್‌ನಲ್ಲಿ ಈ ವರ್ಷದ ಮಧ್ಯದಲ್ಲಿ ನಡೆದ ಆ ವಿಶ್ವಕಪ್‌ನಲ್ಲಿ ಎಂಟು ಪಂದ್ಯಗಳಿಂದ 15 ವಿಕೆಟ್‌ಗಳನ್ನು ಪಡೆದಿದ್ದರು.
ಟ್ರಾವಿಸ್ ಹೆಡ್ ಈ ವರ್ಷದ ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ರನ್‌ಗಳಿಕೆದಾರನಾಗಿದ್ದರು. ಟೆಸ್ಟ್‌ಗಳಲ್ಲೂ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟರ್ ಆಗಿ ಮಿಂಚಿದ್ದರು.
ಇಂಗ್ಲೆಂಡ್‌ನ ಬ್ಯಾಟಿಂಗ್ ಶಕ್ತಿಯಾದ ರೂಟ್ ಈ ವರ್ಷ 17 ಟೆಸ್ಟ್ ಪಂದ್ಯಗಳಿಂದ 55.57 ಸರಾಸರಿಯಲ್ಲಿ 1,556 ರನ್ ಪೇರಿಸಿದ್ದಾರೆ. ಈ ಸಾಲಿನಲ್ಲಿ ಆರು ಶತಕ, ಐದು ಅರ್ಧ ಶತಕಗಳನ್ನು ಬಾರಿಸಿ, ತಮ್ಮ ವೃತ್ತಿ ಜೀವನದಲ್ಲಿ ಐದನೇ ಬಾರಿ ಅವರು ಒಂದೇ ವರ್ಷ ಸಾವಿರಕ್ಕಿಂತ ಹೆಚ್ಚು ರನ್ ಕಲೆಹಾಕಿದ್ದಾರೆ. ಈ ವರ್ಷ ಪಾಕಿಸ್ತಾನ ವಿರುದ್ಧ ಗಳಿಸಿದ್ದ 262 ರನ್ ಟೆಸ್ಟ್‌ಗಳಲ್ಲಿ ಅವರ ಆರನೇ ದ್ವಿಶತಕವಾಗಿದೆ.
ಇಂಗ್ಲೆಂಡ್‌ನ ಇನ್ನೊಬ್ಬ ಆಟಗಾರ ಹ್ಯಾರಿ ಬ್ರೂಕ್ 12 ಟೆಸ್ಟ್‌ಗಳಲ್ಲಿ 55ರ ಸರಾಸರಿಯಲ್ಲಿ 1,100 ರನ್ ಪೇರಿಸಿದ್ದಾರೆ. ಇದರಲ್ಲಿ ನಾಲ್ಕು ಶತಕ, ಮೂರು ಅರ್ಧ ಶತಕಗಳಿವೆ. ಈ ವರ್ಷದ ಅತ್ಯಧಿಕ ರನ್ ಗಳಿಕೆದಾರರಲ್ಲಿ ಬ್ರೂಕ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ರೂಟ್, ಭಾರತದ ಯಶಸ್ವಿ ಜೈಸ್ವಾಲ್ (54.74 ಸರಾಸರಿಯಲ್ಲಿ 1,478), ಇಂಗ್ಲೆಂಡ್‌ನ ಬೆನ್ ಡಕೆಟ್ (37.06 ಸರಾಸರಿಯಲ್ಲಿ 1,149) ಮೊದಲ ಮೂರು ಸ್ಥಾನಗಳಲ್ಲಿ ಇದ್ದಾರೆ.
ಮುಲ್ತಾನ್‌ನಲ್ಲಿ ಪಾಕಿಸ್ತಾನ ವಿರುದ್ಧ 322 ಎಸೆತಗಳಲ್ಲಿ ಬಿರುಸಿನ 317 ರನ್ ಗಳಿಸಿದ್ದು, ಬ್ರೂಕ್ ಅವರ ಈ ವರ್ಷದ ಶ್ರೇಷ್ಠ ಇನಿಂಗ್ಸ್ ಆಗಿದೆ.
ಶ್ರೀಲಂಕಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಕಮಿಂದು ಮೆಂಡಿಸ್ 74.92ರ ಸರಾಸರಿಯಲ್ಲಿ 1,049 ರನ್ ಗಳಿಸಿದ್ದಾರೆ. ಅವರು 13 ಇನಿಂಗ್ಸ್‌ಗಳಲ್ಲಿ ಸಾವಿರ ರನ್‌ಗಳ ಮೈಲಿಗಲ್ಲು ದಾಟಿ ಬ್ರಾಡ್ಮನ್ ಅವರ ದಾಖಲೆ ಸರಿಗಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.