ADVERTISEMENT

ICC ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ಸ್ವೀಕಾರ: ಯಾರಾಗ್ತಾರೆ BCCI ಹೊಸ ಕಾರ್ಯದರ್ಶಿ?

ಪಿಟಿಐ
Published 1 ಡಿಸೆಂಬರ್ 2024, 11:28 IST
Last Updated 1 ಡಿಸೆಂಬರ್ 2024, 11:28 IST
<div class="paragraphs"><p> ಜಯ್ ಶಾ (ಮಧ್ಯದಲ್ಲಿ)</p></div>

ಜಯ್ ಶಾ (ಮಧ್ಯದಲ್ಲಿ)

   

ಬೆಂಗಳೂರು: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿರ್ಗಮಿತ ಕಾರ್ಯದರ್ಶಿ ಜಯ್ ಶಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ಅಧ್ಯಕ್ಷರಾಗಿ ಭಾನುವಾರ ಅಧಿಕಾರ ವಹಿಸಿಕೊಂಡರು. ಚಾಂಪಿಯನ್ಸ್ ಟ್ರೋಫಿ ಸುತ್ತ ಕವಿದಿರುವ ಗೊಂದಲಗಳನ್ನು ಪರಿಹರಿಸುವುದು, ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ನ ಸೇರ್ಪಡೆ ಅವರ ಮುಂದಿರುವ ಪ್ರಮುಖ ಗುರಿಯಾಗಿದೆ.

36 ವರ್ಷ ವಯಸ್ಸಿನ ಶಾ ಅವರು ಐದು ವರ್ಷ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕಾರ್ಯದರ್ಶಿಯಾಗಿದ್ದರು. ಅವರು ಐಸಿಸಿ ಅಧ್ಯಕ್ಷ ಹುದ್ದೆಗೇರಿದ ಭಾರತದ ಐದನೇ ಮತ್ತು ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿಯಾಗಿದ್ದಾರೆ. ಅವರು ಐಸಿಸಿ ಮಂಡಳಿ ನಿರ್ದೇಶಕರ ಸರ್ವಾನುಮತದ ಆಯ್ಕೆಯಾಗಿದ್ದರು.

ADVERTISEMENT

ಜಯ್‌ ಶಾ, ನ್ಯೂಜಿಲೆಂಡ್‌ನ ಅಟಾರ್ನಿ ಗ್ರೆಗ್‌ ಬಾರ್ಕ್ಲೆ ಅವರ ಉತ್ತರಾಧಿಕಾರಿಯಾಗಿದ್ದಾರೆ. ಮೂರನೇ ಅವಧಿಗೆ ಮುಂದುವರಿಯಲು ಬಾರ್ಕ್ಲೆ ಆಸಕ್ತಿ ತೋರಿರಲಿಲ್ಲ.

ಶಾ ಅವರಿಗಿಂತ ಮೊದಲು ಉದ್ಯಮಿ ದಿವಂಗತ ಜಗಮೋಹನ್ ದಾಲ್ಮಿಯಾ, ರಾಜಕಾರಣಿ ಶರದ್‌ ಪವಾರ್‌, ವಕೀಲ ಶಶಾಂಕ್ ಮನೋಹರ್, ಉದ್ಯಮಿ ಎನ್‌.ಶ್ರೀನಿವಾಸನ್ ಅವರು ಐಸಿಸಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಭಾರತೀಯರಾಗಿದ್ದಾರೆ.

ಗೃಹ ಸಚಿವ ಅಮಿತ್ ಶಾ ಪುತ್ರರಾದ ಜಯ್ ಶಾ ಅವರಿಗೆ ಎದುರಾಗಿದ್ದ ದೊಡ್ಡ ಸಮಸ್ಯೆ ಹೆಚ್ಚುಕಮ್ಮಿ ಬಗೆಹರಿದಿದೆ. ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಬೇಕಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ನಿರಾತಂಕವಾಗಿ ನಡೆಯುವಂತೆ ಅವರು ನೋಡಿಕೊಳ್ಳಬೇಕಾಗಿದೆ.

ಸದ್ಯ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಹೈಬ್ರಿಡ್ ಮಾದರಿ ಒಪ್ಪಿಕೊಳ್ಳಲು ನಿರ್ಧರಿಸಿದೆ. ಹೀಗಾಗಿ ಭಾರತ ತಂಡವು ಪಾಕ್‌ ವಿರುದ್ಧದ ಪಂದ್ಯವೂ ಸೇರಿದಂತೆ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಇದೇ ರೀತಿ 2031ರವರೆಗೆ ಭಾರತವು ಒಂಟಿ ಅಥವಾ ಒಂಟಿಯಾಗಿ ನಡೆಸುವ ಟೂರ್ನಿಗಳಿಗೂ ಇದೇ ರೀತಿಯ ಹೈಬ್ರಿಡ್‌ ವ್ಯವಸ್ಥೆ ತನಗೂ ಏರ್ಪಡಿಸಬೇಕೆಂದು ಪಾಕಿಸ್ತಾನ ಚೌಕಾಸಿ ನಡೆಸಿದೆ.

ಪಾಕಿಸ್ತಾನಕ್ಕೆ ತೆರಳಲು ಭಾರತ ತಂಡ ಈ ಮೊದಲೇ ನಿರಾಕರಿಸಿದೆ. ಕೇಂದ್ರ ಸರ್ಕಾರದಿಂದಲೂ ಈ ಪ್ರವಾಸಕ್ಕೆ ಅನುಮತಿ ದೊರಕಿಲ್ಲ.

ಮೊದಲ ಆವಧಿಗೆ ಆದ್ಯತೆಗಳನ್ನು ಪಟ್ಟಿ ಮಾಡಿರುವ ಶಾ, 2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆಗೆ ಒತ್ತು ನೀಡುವುದಾಗಿ ಹೇಳಿದ್ದಾರೆ. ಮಹಿಳಾ ಕ್ರಿಕೆಟ್‌ ಬೆಳವಣಿಗೆಯ ವೇಗ ಹೆಚ್ಚಿಸುವುದೂ ಅವರ ಆದ್ಯತೆಯಲ್ಲಿದೆ.

‘ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಯುತ್ತಿರುವಂತೆ, ಕ್ರಿಕೆಟ್‌ ಆಟವನ್ನು ಈ ಕ್ರೀಡೆಗೆ ಸೇರಿಸಲು ಮತ್ತು ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಆಟದಲ್ಲಿ ತೊಡಗಿಸಿಕೊಳ್ಳಲು ಒಳ್ಳೆಯ ಸಮಯ ಬಂದಿದೆ’ ಎಂದು ಶಾ ಹೇಳಿದ್ದಾರೆ.

‘ಜಾಗತಿಕವಾಗಿ ಕ್ರಿಕೆಟ್‌ ಬೆಳೆಯಲು ಹೆಚ್ಚಿನ ಅವಕಾಶಗಳಿವೆ. ಐಸಿಸಿ ತಂಡದ ಜೊತೆ ಮತ್ತು ಸದಸ್ಯ ರಾಷ್ಟ್ರಗಳ ಜೊತೆಗೆ ನಿಕಟವಾಗಿ ಕಾರ್ಯನಿರ್ವಹಿಸಿ ಈ ಆಟವನ್ನು ಹೊಸ ಎತ್ತರಕ್ಕೆ ತಲುಪಿಸಲು ಕಾತುರನಾಗಿದ್ದೇನೆ’ ಎಂದೂ ಶಾ ಹೇಳಿದ್ದಾರೆ.

ಶಾ ವೇಗದ ಬೆಳವಣಿಗೆ

ಶಾ ಅವರು ಕ್ರಿಕೆಟ್‌ ಆಡಳಿತಗಾರನಾಗಿ ಕಂಡ ಬೆಳವಣಿಗೆ ವೇಗವಾದುದು. ಅವರು ಮೊದಲು ಗುಜರಾತ್‌ ಕ್ರಿಕೆಟ್‌ ಸಂಸ್ಥೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಆಡಳಿತಗಾರಾಗಿದ್ದರು. ಅವರು ಗುಜರಾತ್ ಕ್ರಿಕೆಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವಾಗ ಗುಜರಾತ್ ತಂಡ ಮೊದಲ ಬಾರಿ ರಣಜಿ ಟ್ರೋಫಿ ಗೆದ್ದುಕೊಂಡಿತ್ತು. ಅಹಮದಾಬಾದಿನ ಮೊಟೇರಾದಲ್ಲಿ ದೇಶದ ಅತಿ ದೊಡ್ಡ ಕ್ರೀಡಾಂಗಣ ನಿರ್ಮಾಣವಾಗಿದ್ದು ಕೂಡ ಅವರ ಉಸ್ತುವಾರಿಯಲ್ಲೇ. ಬಿಸಿಸಿಐ ಕಾರ್ಯದರ್ಶಿಯಾಗಿದ್ದ ವೇಳೆ ದೇಶಿ ಕ್ರಿಕೆಟ್‌ನಲ್ಲಿ ಆಟಗಾರರ ಭತ್ಯೆಯಲ್ಲಿ ಗಮನಾರ್ಹ ಏರಿಕೆ ಮಾಡಲಾಯಿತು. ಮಹಿಳಾ ಪ್ರೀಮಿಯರ್ ಲೀಗ್‌ ಕೂಡ ಆರಂಭವಾಯಿತು. ಮಹಿಳಾ ಮತ್ತು ಪುರುಷರ ರಾಷ್ಟ್ರೀಯ ತಂಡಗಳ ಆಟಗಾರರು ಆಟಗಾರ್ತಿಯರಿಗೆ ಸಮಾನ ಪಂದ್ಯ ಶುಲ್ಕ ನೀಡುವ ಪರಿಪಾಠ ಶುರುವಾಯಿತು. ರಾಷ್ಟ್ರೀಯ ತಂಡದಲ್ಲಿ ಕರ್ತವ್ಯದಲ್ಲಿ ಇಲ್ಲದ ವೇಳೆ ರಣಜಿಯಲ್ಲಿ ಆಡದ ಶ್ರೇಯಸ್‌ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ಕೇಂದ್ರೀಯ ಗುತ್ತಿಗೆಯಿಂದ ತೆಗೆದುಹಾಕುವಂಥ ದಿಟ್ಟ ನಿರ್ಧಾರವನ್ನೂ ಶಾ ಪಾತ್ರ ಸಕ್ರಿಯವಾಗಿತ್ತು.

ಐಸಿಸಿಐಲ್ಲಿ ಭಾರತದ ಪ್ರತಿನಿಧಿ:

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಂದಿನ ಕಾರ್ಯದರ್ಶಿ ಯಾರಾಗಾಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಐಸಿಸಿ ಮಂಡಳಿಯಲ್ಲಿ ಭಾರತವನ್ನು ಬಿಸಿಸಿಐ ಹಾಲಿ ಅಧ್ಯಕ್ಷ ರೋಜರ್‌ ಬಿನ್ನಿ ಅಥವಾ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಇವರಲ್ಲಿ ಒಬ್ಬರು ಪ್ರತಿನಿಧಿಸುವುದು ಬಹುತೇಕ ಖಚಿತವಾಗಿದೆ.‌ ಬಿನ್ನಿ ನಿರ್ದೇಶಕರಾದಲ್ಲಿ ಶುಕ್ಲಾ ಅವರು ಪರ್ಯಾಯ ನಿರ್ದೇಶಕರಾಗಲಿದ್ದಾರೆ. ಶುಕ್ಲಾ ಅವರು ಭಾರತದ ಪ್ರತಿನಿಧಿಯಾಗಿ ಬಡ್ತಿ ಪಡೆದರೆ ಅರುಣ್‌ ಧುಮಾಲ್ ಸಹ ಪ್ರತಿನಿಧಿಯಾಗಬಹುದು. ಬಿಸಿಸಿಐ ಮುಂದಿನ ಕಾರ್ಯದರ್ಶಿ ಸ್ಥಾನಕ್ಕೆ ಚರ್ಚೆಯಾಗಿರುವ 2–3 ಹೆಸರುಗಳಲ್ಲಿ ಧುಮಾಲ್‌ ಅವರ ಹೆಸರೂ ಒಳಗೊಂಡಿದೆ. ಖಜಾಂಚಿ ಆಶಿಷ್‌ ಶೆಲ್ಲಾರ್ ಮತ್ತು ಜಂಟಿ ಕಾರ್ಯದರ್ಶಿ ದೇವಜಿತ್ ಲೊನ್ ಸೈಕಿಯಾ ಅವರ ಹೆಸರೂ ಈ ಹುದ್ದೆಗೆ ಬಲವಾಗಿ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.