
ಇಂಗ್ಲೆಂಡ್ ತಂಡದ ಜೋ ರೂಟ್ ಬ್ಯಾಟಿಂಗ್
ಪಿಟಿಐ ಚಿತ್ರ
ಬ್ರಿಸ್ಬೆನ್: ಇಲ್ಲಿ ಆರಂಭವಾಗಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಪರ ಜೋ ರೂಟ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಆ ಮೂಲಕ ಇಂಗ್ಲೆಂಡ್ ತಂಡವನ್ನು ಕುಸಿತದಿಂದ ಪಾರು ಮಾಡಿದರು.
ಜೋ ರೂಟ್ ಈ ಶತಕದ ಮೂಲಕ ಆಸ್ಟ್ರೇಲಿಯಾದಲ್ಲಿ ತಮ್ಮ ಚೊಚ್ಚಲ ಶತಕ ಹಾಗೂ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ 40ನೇ ಶತಕ ಸಿಡಿಸಿದ ಸಾಧನೆ ಮಾಡಿದರು. ಜೋ ರೂಟ್ ಆಸ್ಟ್ರೇಲಿಯಾ ನೆಲದಲ್ಲಿ 16 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ತಮ್ಮ 30ನೇ ಇನಿಂಗ್ಸ್ನಲ್ಲಿ ರೂಟ್ ಶತಕ ಸಿಡಿಸಿದ್ದಾರೆ.
ಈ ಶತಕ ಸಿಡಿಸುವುದಕ್ಕೆ ಮೊದಲು ಆಸ್ಟ್ರೇಲಿಯಾದಲ್ಲಿ ಅವರು 9 ಟೆಸ್ಟ್ ಅರ್ಧಶತಕಗಳನ್ನು ಬಾರಿಸಿದ್ದರು. ಆದರೆ ಒಮ್ಮೆಯೂ ಶತಕ ಗಳಿಸಿರಲಿಲ್ಲ.
ಜೋ ರೂಟ್ ಈ ಶತಕದ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿರುವ ರಿಕಿ ಪಾಂಟಿಂಗ್ (41), ಜಾಕ್ ಕಾಲಿಸ್ (45) ಹಾಗೂ ಸಚಿನ್ ತೆಂಡೂಲ್ಕರ್ (51 ಶತಕ) ನಂತರದ ಸ್ಥಾನದಲ್ಲಿದ್ದಾರೆ.
ಈ ಶತಕದ ಮೂಲಕ ಜೋ ರೂಟ್ ಅವರು ಆಸ್ಟ್ರೇಲಿಯಾ ತಂಡದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಅವರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ತವರಿನಿಂದ ಹೊರಗೆ ಅತಿ ಹೆಚ್ಚು ಶತಕ ಸಿಡಿಸಿದ್ದ ದಾಖಲೆಯನ್ನು ಮುರಿದ್ದಾರೆ. ಸ್ಟೀವ್ ಸ್ಮಿತ್ ಇದುವರೆಗೆ 8 ಶತಕ ಸಿಡಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ರೂಟ್ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.